ಸ್ಯಾಂಟೊಸ್, ಬ್ರೆಜಿಲ್: ಫುಟ್‌ಬಾಲ್ ದಿಗ್ಗಜ ಬ್ರೆಜಿಲ್‌ನ ಪೆಲೆ ಅವರಿಗೆ ಇಲ್ಲಿನ ವಿಲಾ ಬೆಲ್ಮಿರೊ ಕ್ರೀಡಾಂಗಣದಲ್ಲಿ ಬ್ರೆಜಿಲ್ ಅಧ್ಯಕ್ಷ ಲುಲಾ ಡ ಸಿಲ್ವಾ ಸೇರಿದಂತೆ ಲಕ್ಷಾಂತರ ಜನರು ಅಂತಿಮ ನಮನ ಸಲ್ಲಿಸಿದರು.
ಸಕಲ ಸರ್ಕಾರಿ ಗೌರವಗಳೊಂದಿಗೆ, ಕ್ಯಾಥೊಲಿಕ್ ಸಂಪ್ರದಾಯದಂತೆ ಪೆಲೆ ಅವರ ಶವವನ್ನು ಸ್ಮಾರಕ ಸ್ಮಶಾನಕ್ಕೆ ಕೊಂಡೊಯ್ಯಲಾಯಿತು.
‘ಕಿಂಗ್‌ಗೆ ವಿದಾಯ. ಪೆಲೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು‘ ಎಂದು ಲುಲಾ ಡ ಸಿಲ್ವಾ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಸೋಮವಾರದಿಂದ 24 ಗಂಟೆಗಳ ಅವಧಿಯಲ್ಲಿ 2.30 ಲಕ್ಷ ಜನರು ಪೆಲೆ ಅವರ ಅಂತಿಮ ದರ್ಶನ ಪಡೆದರು ಎಂದು ಸ್ಯಾಂಟೊಸ್ ಫುಟ್‌ಬಾಲ್ ಕ್ಲಬ್‌ನ ವಕ್ತಾರರು ತಿಳಿಸಿದ್ದಾರೆ.
ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫ್ಯಾಂಟಿನೊ, ದಕ್ಷಿಣ ಅಮೆರಿಕ ಫುಟ್‌ಬಾಲ್ ಫೆಡರೇಷನ್ ಅಧ್ಯಕ್ಷ ಅಲೆಕ್ಸಾಂಡ್ರೊ ಡಾಮಿನಿಗ್ವೆಜ್ ಮತ್ತು ಬ್ರೆಜಿಲ್ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಗಿಲ್ಮರ್ ಮೆಂಡೆಸ್ ಅವರು ಸೋಮವಾರ ಅಂತಿಮ ದರ್ಶನ ಪಡೆದಿದ್ದರು.
ಪೆಲೆ ತಮ್ಮ ಜೀವನದ ಬಹುಪಾಲು ಅವಧಿಯನ್ನು ಸಾವೊ ಪೌಲೊದಿಂದ 75 ಕಿ.ಮೀ. ದೂರದಲ್ಲಿರುವ ಸ್ಯಾಂಟೊಸ್ ನಗರದಲ್ಲಿ ಕಳೆದಿದ್ದರು.
ಬ್ರೆಜಿಲ್ ತಂಡವು ಮೂರು ವಿಶ್ವಕಪ್ ಟೂರ್ನಿಗಳಲ್ಲಿ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ, ಪೆಲೆ ಎಂದೇ ಜನಪ್ರಿಯರಾಗಿರುವ ಎಡ್ಸನ್ ಅರಾಂಟೆಸ್ ಡು ನಸಿಮೆಂಟೊ ಡಿಸೆಂಬರ್ 29ರಂದು ಕ್ಯಾನ್ಸರ್‌ನಿಂದಾಗಿ ನಿಧನರಾಗಿದ್ದರು.
ಪೆರುವಿನ 738 ಮಕ್ಕಳಿಗೆ ಪೆಲೆ ಹೆಸರು: ಫುಟ್‌ಬಾಲ್ ದಿಗ್ಗಜ ಪೆಲೆ ನಿಧನ ಹೊಂದಿರಬಹುದು. ಆದರೆ ಪೆರುವಿನ 738 ಮಕ್ಕಳ ಮೂಲಕ ಅವರು ಅಮರರಾಗಿದ್ದಾರೆ. ಆ ದೇಶದಲ್ಲಿ ಕಳೆದ ವರ್ಷ ಜನಿಸಿದ 738 ಮಕ್ಕಳ ಹೆಸರನ್ನು ಪೆಲೆ, ಕಿಂಗ್ ಪೆಲೆ ಅಥವಾ ಅವರ ಪೂರ್ಣ ಹೆಸರು ಎಡ್ಸನ್ ಅರಾಂಟೆಸ್ ಡು ನಸಿಮೆಂಟೊ ಎಂದು ನೋಂದಣಿ ಮಾಡಲಾಗಿದೆ ಎಂದು ರಾಷ್ಟ್ರೀಯ ನೋಂದಣಿ ಸಂಸ್ಥೆ ತಿಳಿಸಿದೆ.
ಇತ್ತೀಚೆಗೆ ನಿಧನರಾದ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಹೆಸರನ್ನು ಪೆರುವಿನ 551 ಹೆಣ್ಣುಮಕ್ಕಳಿಗೆ ಇಡಲಾಗಿದೆ. ಪೋರ್ಚುಗಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಹೆಸರನ್ನು 31,583 ಮಂದಿಗೆ ಇಡಲಾಗಿದೆ. ಫುಟ್‌ಬಾಲ್ ಒಲವು ಹೆಚ್ಚಾಗಿರುವ ಪೆರುವಿನಲ್ಲಿ ಅರ್ಜೆಂಟೀನಾ ತಾರೆ ಮೆಸ್ಸಿ ಹೆಸರನ್ನು 371 ಮಕ್ಕಳಿಗೆ ಫ್ರಾನ್ಸ್‌ನ ಕಿಲಿಯನ್ ಎಂಬಾಪೆ ಹೆಸರನ್ನು 229 ಮಕ್ಕಳಿಗೆ ಇಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.