ಅರ್ಲಿಂಗ್ಟನ್, (ಅಮೆರಿಕ) (ಎಪಿ): ಕೆನಡಾ ತಂಡವು ಕೊಪಾ ಅಮೆರಿಕಾ ಫುಟ್‌ಬಾಲ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು.
ಶುಕ್ರವಾರ ತಡರಾತ್ರಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಕೆನಡಾ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ 4–3ರಿಂದ ವೆನಿಜುವೆಲಾ ವಿರುದ್ಧ ಗೆದ್ದಿತು. ನಿಗದಿಯ ಅವಧಿಯ ಆಟದಲ್ಲಿ ಪಂದ್ಯವು 1–1ರಿಂದ ಡ್ರಾ ಅಗಿತ್ತು.
ಜೇಕಬ್ ಶಾಫೆಲ್‌ಬರ್ಗ್ 13ನೇ ನಿಮಿಷದಲ್ಲಿ ಗೋಲು ಗಳಿಸಿ ಕೆನಡಾಗೆ ಮುನ್ನಡೆ ಒದಗಿಸಿದರು. ಆದರೆ ಸಾಲೋಮನ್ ರೊಂಡನ್ 64ನೇ ನಿಮಿಷದಲ್ಲಿ ಗೋಲು ಬಾರಿಸಿ 1–1ರ ಸಮಬಲ ಸಾಧಿಸಲು ವೆನಿಜುವೆಲಾಗೆ ನೆರವಾದರು. ಸೆಮಿಫೈನಲ್‌ನಲ್ಲಿ ಕೆನಡಾ ತಂಡವು ವಿಶ್ವಚಾಂಪಿಯನ್ ಅರ್ಜೆಂಟೀನಾವನ್ನು ಎದುರಿಸಲಿದೆ. ಗುಂಪು ಹಂತದ ಆರಂಭಿಕ ಪಂದ್ಯದಲ್ಲಿ ಕೆನಡಾ, ಅರ್ಜೆಂಟೀನಾ ವಿರುದ್ಧ ವಿರುದ್ಧ ಸೋತಿತ್ತು.
ಮ್ಯಾನೇಜರ್ ಆಗಿ ಅಧಿಕಾರ ವಹಿಸಿಕೊಂಡ ಅಮೆರಿಕದ ಜೆಸ್ಸಿ ಮಾರ್ಚ್ ಮಾರ್ಗದರ್ಶನದಲ್ಲಿ ಕೆನಡಾ ತಂಡ ಇದೇ ಮೊದಲ ಬಾರಿ ಕೊಪಾ ಅಮೆರಿಕ ಟೂರ್ನಿಯಲ್ಲಿ ಆಡುತ್ತಿದೆ.
ಉಭಯ ತಂಡಗಳು ದೊರೆತ ತಲಾ ಐದು ಪೆನಾಲ್ಟಿ ಶೂಟೌಟ್ ಅವಕಾಶದಲ್ಲಿ 3–3ರಿಂದ ಸಮಬಲ ಸಾಧಿಸಿದವು. ಅದರಿಂದಾಗಿ ಫಲಿತಾಂಶಕ್ಕಾಗಿ ಸಡನ್ ಡೆತ್ ಘೋಷಿಸಲಾಯಿತು.
ಈ ಹಂತದಲ್ಲಿ ಕೆನಡಾ ಗೋಲ್‌ಕೀಪರ್ ಮ್ಯಾಕ್ಸ್ ಕ್ರೆಪಿಯೊ ಅವರು ವೆನಿಜುವೆಲಾದ ವಿಲ್ಕ್ ಏಂಜೆಲ್ ಅವರ ಗೋಲಿನ ಯತ್ನವನ್ನು ತಡೆದರು. ಆದರೆ ಕೆನಡಾದ ಇಸ್ಮಾಯಿಲ್ ಕೋನ್ ಗೋಲು ಹೊಡೆದು ಕೆನಡಾ ಗೆಲುವಿಗೆ ಕಾರಣರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.