ನವದೆಹಲಿ: ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ಅಧ್ಯಕ್ಷರಾಗಿ ಕಲ್ಯಾಣ್ ಚೌಬೆ ಆಯ್ಕೆಯಾಗಿದ್ದಾರೆ. ಇದರೊಂದಿಗೆ 85 ವರ್ಷಗಳ ಇತಿಹಾಸದಲ್ಲಿ ಫೆಡರೇಷನ್‌ಗೆ ಇದೇ ಮೊದಲ ಬಾರಿಗೆ ಮಾಜಿ ಆಟಗಾರರೊಬ್ಬರು ಅಧ್ಯಕ್ಷರಾಗಿ ಚುನಾಯಿತರಾದರು. ಕರ್ನಾಟಕ ಫುಟ್‌ಬಾಲ್ ಸಂಸ್ಥೆಯ ಅಧ್ಯಕ್ಷ, ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯು ಇಲ್ಲಿಯ ಫುಟ್‌ಬಾಲ್ ಹೌಸ್‌ನಲ್ಲಿ ಶುಕ್ರವಾರ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ 45 ವರ್ಷದ ಕಲ್ಯಾಣ್ 33–1 ಮತಗಳಿಂದ ಭಾರತ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯಾ ಅವರನ್ನು ಸೋಲಿಸಿದರು. ವಿವಿಧ ರಾಜ್ಯ ಸಂಸ್ಥೆಗಳನ್ನು ಪ್ರತಿನಿಧಿಸಿದ 34 ಮಂದಿಗೆ ಮತಚಲಾಯಿಸುವ ಹಕ್ಕು ಇತ್ತು.
ಕಲ್ಯಾಣ್ ಅವರಿಗಿಂತ ಮೊದಲು, ಪೂರ್ಣಪ್ರಮಾಣದ ರಾಜಕಾರಣಿಗಳಾದ ಪ್ರಿಯರಂಜನ್ ದಾಸ್ ಮುನ್ಶಿ ಮತ್ತು ಪ್ರಫುಲ್ ಪಟೇಲ್ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಬಿಜೆಪಿಯ ಕಲ್ಯಾಣ್, ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಕೃಷ್ಣಾನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.
ಕೆಲವು ಸಂದರ್ಭಗಳಲ್ಲಿ ರಾಷ್ಟ್ರೀಯ ಫುಟ್‌ಬಾಲ್ ತಂಡದಲ್ಲಿ ಸ್ಥಾನ ಪಡೆದಿದ್ದ ಕಲ್ಯಾಣ್ ಅವರಿಗೆ, ಒಂದೂ ಪಂದ್ಯದಲ್ಲಿ ಆಡುವ ಅವಕಾಶ ಲಭಿಸಿರಲಿಲ್ಲ. ವಯೋಮಿತಿ ಟೂರ್ನಿಗಳಲ್ಲಿ ಭಾರತ ತಂಡವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದರು. ಗೋಲ್‌ಕೀಪರ್ ಆಗಿದ್ದ ಅವರು, ಮೋಹನ್ ಬಾಗನ್ ಮತ್ತು ಈಸ್ಟ್ ಬೆಂಗಾಲ್ ತಂಡಗಳಲ್ಲಿ ಆಡಿದ್ದರು.
ಭುಟಿಯಾ ಮತ್ತು ಕಲ್ಯಾಣ್ ಒಂದು ಕಾಲದಲ್ಲಿ ಈಸ್ಟ್ ಬೆಂಗಾಲ್ ತಂಡಕ್ಕೆ ಜೊತೆಯಾಗಿ ಆಡಿದ್ದರು.
ಹ್ಯಾರಿಸ್ ಆಯ್ಕೆ: ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹ್ಯಾರಿಸ್ 29–5ರಿಂದ ರಾಜಸ್ಥಾನದ ಮಾನವೇಂದ್ರ ಸಿಂಗ್ ಅವರನ್ನು ಸೋಲಿಸಿದರು. ಅರುಣಾಚಲ ಪ್ರದೇಶದ ಕಿಪಾ ಅಜಯ್ ಖಜಾಂಚಿಯಾಗಿ ಆಯ್ಕೆಯಾದರು. ಅವರು 32–1ರಿಂದ ಆಂಧ್ರಪ್ರದೇಶದ ಗೋಪಾಲಕೃಷ್ಣ ಕೋಸರಾಜು ಅವರನ್ನು ಮಣಿಸಿದರು. ಈ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಂದು ಮತ ಅಮಾನ್ಯವಾಯಿತು.
ಕಾರ್ಯಕಾರಿ ಸಮಿತಿಯ ಎಲ್ಲ 14ಸದಸ್ಯ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು.
ಭುಟಿಯಾ, ಐ.ಎಂ. ವಿಜಯನ್, ಶಬ್ಬೀರ್ ಅಲಿ ಮತ್ತು ಕ್ಲಿಮ್ಯಾಕ್ಸ್ ಲಾರೆನ್ಸ್ ಅವರು ಆಟಗಾರರ ಪ್ರತಿನಿಧಿಗಳಾಗಿ ಕಾರ್ಯಕಾರಿ ಸಮಿತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಪದಾಧಿಕಾರಿಗಳ ಚುನಾವಣೆಯೊಂದಿಗೆ ಎಐಎಫ್‌ಎಫ್ ಬಿಕ್ಕಟ್ಟು ಸದ್ಯಕ್ಕೆ ಕೊನೆಗೊಂಡಿದೆ. ಚುನಾವಣೆಗಳನ್ನು ನಡೆಸದ ಕಾರಣ 2020ರ ಡಿಸೆಂಬರ್‌ನಲ್ಲಿ ಪ್ರಫುಲ್ ಪಟೇಲ್ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿತ್ತು. ಬಳಿಕ ಆಡಳಿತಾಧಿಕಾರಿ ಸಮಿತಿಯನ್ನು (ಸಿಒಎ) ನೇಮಿಸಲಾಗಿತ್ತು. ಸಂಸ್ಥೆಯ ಆಡಳಿತದಲ್ಲಿ ‘ಮೂರನೇ ವ್ಯಕ್ತಿಗಳ ಹಸ್ತಕ್ಷೇಪ‘ದ ಕಾರಣ ನೀಡಿ ಫಿಫಾ, ಎಐಎಫ್‌ಎಫ್‌ಅನ್ನು ಅಮಾನತು ಮಾಡಿತ್ತು. ನಂತರ ಸುಪ್ರೀಂ ಕೋರ್ಟ್ ಸಿಒಎ ರದ್ದುಗೊಳಿಸಿದ ಕಾರಣ ಅಮಾನತು ಹಿಂಪಡೆಯಲಾಗಿತ್ತು.
ರಿಜಿಜು ಪ್ರಭಾವ; ಮಾನವೇಂದ್ರ ಆರೋಪ: ಎಐಎಫ್‌ಎಫ್ ಚುನಾ ವಣೆಗಳ ಫಲಿತಾಂಶದಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ‘ಪ್ರಭಾವ ‘ ಬೀರಿದ್ದಾರೆ ಎಂದು ಮಾನವೇಂದ್ರ ಸಿಂಗ್ ಆರೋಪಿಸಿದ್ದಾರೆ.
‘ಭುಟಿಯಾ ವಿರುದ್ಧ ಮತ ಹಾಕುವಂತೆ ರಾಜ್ಯ ಸಂಸ್ಥೆಯ ಪ್ರತಿನಿಧಿಗಳನ್ನು ರಿಜಿಜು ಉತ್ತೇಜಿಸಿದ್ದಾರೆ‘ ಎಂದು ಸಿಂಗ್ ಹೇಳಿದ್ದಾರೆ. ಆದರೆ ಈ ಆರೋಪವನ್ನು ಚೌಬೆ ಅವರು ಅಲ್ಲಗಳೆದಿದ್ದಾರೆ.
‘ತಳಮಟ್ಟದಿಂದ ಕ್ರೀಡೆಯ ಬೆಳವಣಿಗೆ’
‘ತಳಮಟ್ಟದಿಂದ ಫುಟ್‌ಬಾಲ್ ಬೆಳವಣಿಗೆಗೆ ಶ್ರಮವಹಿಸಲಾಗುವುದು. ಎಲ್ಲ ಸಂಸ್ಥೆಗಳ ಸಮಸ್ಯೆಗಳಿಗೆ ಕಿವಿಯಾಗುತ್ತೇವೆ’ ಎಂದು ನೂತನ ಉಪಾಧ್ಯಕ್ಷ ಎನ್.ಎ. ಹ್ಯಾರಿಸ್ ತಿಳಿಸಿದರು.
‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು ‘ಮೂರ್ನಾಲ್ಕು ವರ್ಷಗಳಿಂದ ಕರ್ನಾಟಕ ರಾಜ್ಯದಲ್ಲಿ ಫುಟ್‌ಬಾಲ್ ಸಾಕಷ್ಟು ಅಭಿವೃದ್ಧಿಯಾಗಿದೆ. ವರ್ಷಕ್ಕೆ ಸುಮಾರು ಎರಡು ಸಾವಿರ ಪಂದ್ಯಗಳನ್ನು ಆಡಿಸುತ್ತೇವೆ. ಆಟಗಾರರು ವೃತ್ತಿಯಾಗಿಯೂ ಈ ಕ್ರೀಡೆಯನ್ನು ತೆಗೆದುಕೊಳ್ಳಬೇಕು. ಆ ರೀತಿಯ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತೇವೆ’ ಎಂದರು.
‘ಕೋಲ್ಕತ್ತ ಮತ್ತು ಕೇರಳಗಳಲ್ಲಿ ಫುಟ್‌ಬಾಲ್‌ಗೆ ಹೆಚ್ಚಿನ ಪ್ರೋತ್ಸಾಹ ಇದೆ. ಅದೇ ರೀತಿಯ ಅವಕಾಶಗಳು ನಮ್ಮ ರಾಜ್ಯದ ಆಟಗಾರರಿಗೂ ಸಿಗಬೇಕು’ ಎಂದರು.
‘ಎಐಎಫ್‌ಎಫ್ ಬಿಕ್ಕಟ್ಟು ಈಗ ಬಗೆಹರಿದಿದೆ. 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್ ಆಯೋಜಿಸುವುದು ಈಗ ನಮ್ಮ ಮುಂದಿರುವ ಪ್ರಮುಖ ಸವಾಲು. ಎಲ್ಲರೂ ಜೊತೆಗೂಡಿ ಟೂರ್ನಿಯನ್ನು ಯಶಸ್ವಿಯಾಗಿಸುತ್ತೇವೆ’ ಎಂದು ಹ್ಯಾರಿಸ್ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.