ADVERTISEMENT

ಡುರಾಂಡ್‌ ಕಪ್‌ | ಕ್ವಾರ್ಟರ್‌ಗೆ ಚೆನ್ನೈಯಿನ್‌; ಡ್ರಾ ಪಂದ್ಯದಲ್ಲಿ ಬಿಎಫ್‌ಸಿ

ಪಿಟಿಐ
Published 14 ಆಗಸ್ಟ್ 2023, 16:34 IST
Last Updated 14 ಆಗಸ್ಟ್ 2023, 16:34 IST
ಬಿಎಫ್‌ಸಿ ಮತ್ತು ಇಂಡಿಯನ್‌ ಏರ್‌ಫೋರ್ಸ್‌ ತಂಡಗಳ ನಡುವಣ ಪಂದ್ಯದ ದೃಶ್ಯ –ಬಿಎಫ್‌ಸಿ ‘ಎಕ್ಸ್‌’ (ಟ್ವಿಟರ್) ಚಿತ್ರ
ಬಿಎಫ್‌ಸಿ ಮತ್ತು ಇಂಡಿಯನ್‌ ಏರ್‌ಫೋರ್ಸ್‌ ತಂಡಗಳ ನಡುವಣ ಪಂದ್ಯದ ದೃಶ್ಯ –ಬಿಎಫ್‌ಸಿ ‘ಎಕ್ಸ್‌’ (ಟ್ವಿಟರ್) ಚಿತ್ರ   

ಕೋಲ್ಕತ್ತ: ಹಾಲಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ತಂಡದವರು ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ 1–1 ಗೋಲಿನಿಂದ ಇಂಡಿಯನ್‌ ಏರ್‌ಫೋರ್ಸ್‌ ತಂಡದೊಂದಿಗೆ ಡ್ರಾ ಸಾಧಿಸಿದರು.

ಸೋಮವಾರ ನಡೆದ ‘ಸಿ’ ಗುಂಪಿನ ಪಂದ್ಯದ 21ನೇ ನಿಮಿಷದಲ್ಲಿ ವಿವೇಕ್‌ ಕುಮಾರ್‌ ಅವರು ಗೋಲು ಗಳಿಸಿ ಏರ್‌ಫೋರ್ಸ್‌ ತಂಡಕ್ಕೆ ಮುನ್ನಡೆ ಒದಗಿಸಿದರು. ಬಿಎಫ್‌ಸಿ ತಂಡವು ಸಲಾಂ ಜಾನ್ಸನ್ ಸಿಂಗ್ ಅವರು 59ನೇ ನಿಮಿಷದಲ್ಲಿ ತಂದಿತ್ತ ಗೋಲಿನ ನೆರವಿನಿಂದ ಪಂದ್ಯವನ್ನು ಡ್ರಾ ಮಾಡಿಕೊಂಡಿತು.

ಯುವ ಆಟಗಾರರನ್ನು ಒಳಗೊಂಡ ಬಿಎಫ್‌ಸಿ ತಂಡವು ಉತ್ತಮ ಪ್ರದರ್ಶನದ ವಿಶ್ವಾಸದೊಂದಿಗೆ ಮೊದಲ ಪಂದ್ಯದಲ್ಲಿ ಆಡಲಿಳಿದಿತ್ತು. ಆದರೆ, ಏರ್‌ಫೋರ್ಸ್‌ ತಂಡದ ರಕ್ಷಣಾ ವ್ಯೂಹವನ್ನು ಬೇಧಿಸಲು ವಿಫಲವಾಯಿತು.

ADVERTISEMENT

ಪಂದ್ಯದ ಹೆಚ್ಚಿನ ಅವಧಿಯಲ್ಲೂ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ್ದ ಬಿಎಫ್‌ಸಿ ಆಟಗಾರರು, ಒಟ್ಟು 14 ಸಲ ಚೆಂಡನ್ನು ಗುರಿಯತ್ತ ಒದ್ದಿದ್ದರು. ಅದರಲ್ಲಿ ಒಮ್ಮೆ ಮಾತ್ರ ಯಶಸ್ಸು ಸಾಧಿಸಿದರು.

ಪಂದ್ಯ ಕೊನೆಗೊಳ್ಳಲು ಕೆಲವು ನಿಮಿಷಗಳಿರುವಾಗ ಬಿಎಫ್‌ಸಿಗೆ ಗೆಲುವಿನ ಗೋಲು ಗಳಿಸುವ ಅತ್ಯುತ್ತಮ ಅವಕಾಶ ದೊರೆತಿತ್ತು. ಎಡ್ಮಂಡ್‌ ಅವರ ಫ್ರೀಕಿಕ್‌ನಲ್ಲಿ ರಾಬಿನ್‌ ಯಾದವ್‌ ಹೆಡ್‌ ಮಾಡಿದ ಚೆಂಡು ಎದುರಾಳಿ ಗೋಲ್‌ಕೀಪರ್‌ ದಿನೇಶ್‌ ಅವರ ಕೈಗಳಿಗೆ ಸವರಿಕೊಂಡ ಹೊರಕ್ಕೆ ಹೋಯಿತು. ಇಂಜುರಿ ಅವಧಿಯ ಏಳು ನಿಮಿಷಗಳಲ್ಲಿ ಬೆಂಗಳೂರಿನ ತಂಡ ಗೆಲುವಿನ ಗೋಲಿಗೆ ಇನ್ನಿಲ್ಲದ ಪ್ರಯತ್ನ ನಡೆಸಿದರೂ ಯಶಸ್ಸು ದೊರೆಯಲಿಲ್ಲ.

ಕ್ವಾರ್ಟರ್‌ ಫೈನಲ್‌ಗೆ ಚೆನ್ನೈಯಿನ್‌: ಗುವಾಹಟಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಚೆನ್ನೈಯಿನ್ ಎಫ್‌.ಸಿ ತಂಡವು 3–0ಯಿಂದ ನೇಪಾಲದ ತ್ರಿಭುವನ್‌ ಆರ್ಮಿ ತಂಡವನ್ನು ಮಣಿಸಿ, ನಾಕೌಟ್‌ಗೆ ಅರ್ಹತೆ ಪಡೆಯಿತು.

‘ಇ’ ಗುಂಪಿನ ಪಂದ್ಯದಲ್ಲಿ ಫಾರೂಖ್ ಚೌಧರಿ ಅವರು 22ನೇ ನಿಮಿಷದಲ್ಲಿ ಚೆನ್ನೈಯಿನ್‌ ತಂಡಕ್ಕೆ ಮುನ್ನಡೆ ಒದಗಿಸಿದರು. 40ನೇ ನಿಮಿಷದಲ್ಲಿ ರಹೀಂ ಅಲಿ ಅವರು ಪೆನಾಲ್ಟಿಯಲ್ಲಿ ಸಿಕ್ಕ ಅವಕಾಶವನ್ನು ಗೋಲಾಗಿ ಪರಿವರ್ತಿಸಿ, ಮುನ್ನಡೆಯನ್ನು ಹಿಗ್ಗಿಸಿದರು.  ಪಂದ್ಯದ ಕೊನೆಯಲ್ಲಿ ರಫೆಲ್ ಕ್ರಿವೆಲ್ಲರೊ (84ನೇ) ಚೆಂಡನ್ನು ಗುರಿ ಸೇರಿಸುವ ಮೂಲಕ ಗೆಲುವಿನ ಅಂತರವನ್ನು ಹೆಚ್ಚಿಸಿದರು.

ಚೆನ್ನೈಯಿನ್‌ ತಂಡವು ಎರಡು ಪಂದ್ಯಗಳಿಂದ ಆರು ಪಾಯಿಂಟ್ಸ್ ಸಂಪಾದಿಸಿ, ‘ಸಿ’ ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ಕ್ವಾರ್ಟರ್‌ಫೈನಲ್ ಸ್ಥಾನವನ್ನು ಖಚಿತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.