ADVERTISEMENT

ಅಬಹಾನಿಗೆ ಮಣಿದ ಚೆನ್ನೈಯಿನ್‌

ಎಎಫ್‌ಸಿ ಕಪ್ ಫುಟ್‌ಬಾಲ್ ಟೂರ್ನಿ: 2–3ರಿಂದ ಸೋತ ಲಾಲ್‌ಪೆಕ್ಲುವಾ ಬಳಗ

​ಪ್ರಜಾವಾಣಿ ವಾರ್ತೆ
Published 15 ಮೇ 2019, 20:15 IST
Last Updated 15 ಮೇ 2019, 20:15 IST
ಚೆಂಡಿನ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದ ಅಬಹಾನಿ ಢಾಕಾ (ಹಳದಿ) ಮತ್ತು ಚೆನ್ನೈಯಿನ್ ಎಫ್‌ಸಿ ತಂಡದ ಆಟಗಾರರು –ಪಿಟಿಐ ಚಿತ್ರ
ಚೆಂಡಿನ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದ ಅಬಹಾನಿ ಢಾಕಾ (ಹಳದಿ) ಮತ್ತು ಚೆನ್ನೈಯಿನ್ ಎಫ್‌ಸಿ ತಂಡದ ಆಟಗಾರರು –ಪಿಟಿಐ ಚಿತ್ರ   

ಢಾಕಾ: ಪ್ಲೇ ಆಫ್ ಹಂತಕ್ಕೇರುವ ಕನಸಿನೊಂದಿಗೆ ಕಣಕ್ಕೆ ಇಳಿದ ಚೆನ್ನಯಿನ್ ಫುಟ್‌ಬಾಲ್ ಕ್ಲಬ್ (ಸಿಎಫ್‌ಸಿ) ನಿರಾಸೆಗೆ ಒಳಗಾಯಿತು. ಬಂಗಬಂಧು ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಎಎಫ್‌ಸಿ ಕಪ್ ಟೂರ್ನಿಯ ಇ ಗುಂಪಿನ ಪಂದ್ಯದಲ್ಲಿ ಚೆನ್ನೈಯಿನ್ ತಂಡ ಸ್ಥಳೀಯ ಅಬಹಾನಿ ಢಾಕಾಗೆ 2–3 ಗೋಲುಗಳಿಂದ ಮಣಿಯಿತು.

ಆರನೇ ನಿಮಿಷದಲ್ಲಿ ಸಿ.ಕೆ.ವಿನೀತ್ ಗಳಿಸಿದ ಗೋಲಿನ ಮೂಲಕ ಮುನ್ನಡೆ ಸಾಧಿಸಿದ ಪ್ರವಾಸಿ ತಂಡ ಭರವಸೆಯಿಂದಲೇ ವಿರಾಮಕ್ಕೆ ತೆರಳಿತ್ತು. ಆದರೆ ದ್ವಿತೀಯಾರ್ಧದಲ್ಲಿ ಪಂದ್ಯ ಭಾರಿ ತಿರುವು ಪಡೆಯಿತು.

64 ಮತ್ತು 69ನೇ ನಿಮಿಷಗಳಲ್ಲಿ ಕ್ರಮವಾಗಿ ಕೆರ್ವೆನ್ಸ್ ಬೆಲ್‌ಫೋರ್ಟ್ ಮತ್ತು ಮೈಶ್ ಸೈಗಾನಿ ಗೋಲು ಗಳಿಸಿ ಅಬಹಾನಿಗೆ ಮುನ್ನಡೆ ಗಳಿಸಿಕೊಟ್ಟರು. 74ನೇ ನಿಮಿಷದಲ್ಲಿ ಚೆನ್ನೈಯಿನ್ ತಿರುಗೇಟು ನೀಡಿತು. ಐಸಾಕ್ ವನ್ಮಲ್ಸಾವ್ಮ ಗೋಲು ಚೆಂಡನ್ನು ಗುರಿ ಮುಟ್ಟಿಸಿ ಸಮಬಲ ಸಾಧಿಸಲು ನೆರವಾದರು. ಛಲ ಬಿಡದ ಅಬಹಾನಿಗೆ 88ನೇ ನಿಮಿಷದಲ್ಲಿ ಮಮುನುಲ್ ಇಸ್ಲಾಂ ಗೆಲುವಿನ ಗೋಲು ಗಳಿಸಿಕೊಟ್ಟರು.

ADVERTISEMENT

ಮಿನರ್ವ–ಮನಂಗ್‌ ಪಂದ್ಯ ಡ್ರಾ: ಕಠ್ಮಂಡುವಿನಲ್ಲಿ ನಡೆದ ‘ಇ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಮಿನರ್ವ ಪಂಜಾಬ್ ತಂಡ ನೇಪಾಳದ ಮನಂಗ್ ಮರ್ಷ್ಯಂಗ್ಡಿ ತಂಡದೊಂದಿಗೆ ಡ್ರಾ ಸಾಧಿಸಿತು. ಈ ಮೂಲಕ ನಾಲ್ಕು ಪಾಯಿಂಟ್ ಕಲೆ ಹಾಕಿತು. ನಾಲ್ಕು ಪಂದ್ಯಗಳ ಪೈಕಿ ಒಂದು ಪಂದ್ಯವನ್ನು ಕೂಡ ತಂಡಕ್ಕೆ ಗೆಲ್ಲಲಾಗಲಿಲ್ಲ.

40ನೇ ನಿಮಿಷದಲ್ಲಿ ತೋಯಿಬಾ ಸಿಂಗ್ ಗಳಿಸಿದ ಗೋಲಿನ ಮೂಲಕ ಮಿನರ್ವ ಮುನ್ನಡೆ ಸಾಧಿಸಿತು. ನಂತರ ಎದುರಾಳಿಗಳನ್ನು ನಿಯಂತ್ರಿಸಿದ ತಂಡ ಗೆಲುವಿನತ್ತ ದಾಪುಗಾಲು ಹಾಕಿತ್ತು. ಆದರೆ 81ನೇ ನಿಮಿಷದಲ್ಲಿ ಡಿಫೆಂಡರ್‌ ಒಲುವಾಶಿನ ಅಜೀಜ್‌ ಅವರು ಮಿನರ್ವ ತಂಡದ ಕನಸನ್ನು ನುಚ್ಚುನೂರು ಮಾಡಿದರು. ಅವರು ಗಳಿಸಿದ ಗೋಲಿನೊಂದಿಗೆ ಸಮಬಲ ಸಾಧಿಸಿದ ಮನಂಗ್‌ ತಂಡ ನಂತರ ಕೆಚ್ಚೆದೆಯ ಆಟವಾಡಿ ಎದುರಾಳಿಗಳು ಮುನ್ನಡೆ ಸಾಧಿಸುವುದನ್ನು ತಡೆಯಿತು.

ನಾಲ್ಕು ಪಂದ್ಯಗಳನ್ನೂ ಡ್ರಾ ಮಾಡಿಕೊಂಡ ಮಿನರ್ವ ಪಾಯಿಂಟ್ ಪಟ್ಟಿಯ ಎರಡನೇ ಸ್ಥಾನಕ್ಕೆ ಏರಿತ್ತು. ಆದರೆ ರಾತ್ರಿ ನಡೆದ ಪಂದ್ಯದಲ್ಲಿ ಅಬಹಾನಿ ತಂಡ ಅಮೋಘ ಸಾಮರ್ಥ್ಯ ತೋರಿ ಆ ಸ್ಥಾನವನ್ನು ಕಬಳಿಸಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.