ಕೋಲ್ಕತ್ತ: ಬೆಂಗಳೂರು ಎಫ್‌ಸಿ ತಂಡ, ಮಂಗಳವಾರ ಇಲ್ಲಿನ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆಯುವ ಡುರಾಂಡ್ ಕಪ್ ಸೆಮಿಫೈ ನಲ್‌ನಲ್ಲಿ ಮೋಹನ್ ಬಾಗ್ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಭಾರತ ತಂಡದ ಮಾಜಿ ನಾಯಕ, ಅನುಭವಿ ಸುನೀಲ್ ಚೆಟ್ರಿ ಅವರ ಪಾತ್ರ ಈ ಪಂದ್ಯದಲ್ಲಿ ಮಹತ್ವದ್ದಾಗಲಿದೆ.
ಏಷ್ಯಾದ ಅತ್ಯಂತ ಹಳೆಯ ಟೂರ್ನಿಯೆನಿಸಿರುವ ಡುರಾಂಡ್ ಕಪ್ ಈಗ ಅಂತಿಮ ಹಂತದಲ್ಲಿದ್ದು, ಬೆಂಗಳೂರು ಎಫ್‌ಸಿ ತಂಡಕ್ಕೆ, ಹಾಲಿ ಚಾಂಪಿಯನ್ ಮೋಹನ್ ಬಾಗನ್ ಪ್ರಬಲ ಎದುರಾಳಿಯಾಗಿದೆ. ಕೋಲ್ಕತ್ತದ ದೈತ್ಯ ತಂಡ ತನ್ನ ಭದ್ರಕೋಟೆಯಲ್ಲಿ 10 ಗೋಲು ಗಳಿಸಿದೆ ಮಾತ್ರವಲ್ಲ, ಕೇವಲ ಎದುರಾಳಿಗಳಿಗೆ ಮೂರು ಗೋಲುಗಳನ್ನಷ್ಟೇ ಬಿಟ್ಟುಕೊಟ್ಟಿದೆ.
ಬೆಂಗಳೂರು ತಂಡವೂ ಭರವಸೆಯ ಪ್ರದರ್ಶನ ನೀಡಿದೆ. ಆಡಿದ ನಾಲ್ಕು ಪಂದ್ಯಗಳಲ್ಲಿ 11 ಗೋಲುಗಳನ್ನು ಗಳಿಸಿದ್ದು, ಎರಡು ಗೋಲುಗಳನ್ನಷ್ಟೇ ಬಿಟ್ಟುಕೊಟ್ಟಿದೆ.
ಗೋಲ್‌ಕೀಪರ್ ಗುರುಪ್ರೀತ್ ಸಂಧು, ರಾಹುಲ್ ಭೆಕೆ, ಸುರೇಶ್ ವಾಂಗ್ಜಮ್ ಮತ್ತು ಸುನೀಲ್ ಚೆಟ್ರಿ ಅವರ ಪ್ರದರ್ಶನ ಬಿಎಫ್‌ಸಿ ಪಾಲಿಗೆ ನಿರ್ಣಾಯಕ. ಚೆಟ್ರಿ ಇದು ತವರು ಮೈದಾನವಿದ್ದಂತೆ. ಇದೇ ಮೈದಾನದಲ್ಲಿ ಅವರ ಕೌಶಲ ಗಮನಿಸಿ ಮೊದಲ ಬಾರಿ ಮೋಹನ್ ಬಾಗನ್ ತಂಡ ಟ್ರಯಲ್ಸ್‌ಗೆ ಆಹ್ವಾನಿಸಿತ್ತು. ಅದು 2002ರ ಡುರಾಂಡ್ ಕಪ್‌ಗೆ ಮೊದಲು.ತಂಡವು ಗ್ರೆಗ್ ಸ್ಟೀವರ್ಟ್, ಮನ್ವೀರ್ ಸಿಂಗ್ ಮತ್ತು ಜೇಸನ್ ಕಮಿಂಗ್ಸ್ ಪ್ರದರ್ಶನ ನೆಚ್ಚಿಕೊಂಡಿದೆ.
ಫೈನಲ್‌ಗೆ ನಾರ್ತ್‌ಈಸ್ಟ್
ಶಿಲ್ಲಾಂಗ್ (ಪಿಟಿಐ): ಸೂಪರ್ ಲೀಗ್ ತಂಡವಾದ ನಾರ್ತ್ಈಸ್ಟ್ ಯುನೈಟೆಡ್ ಎಫ್‌ಸಿ 3–0 ಗೋಲುಗಳಿಂದ ಶಿಲ್ಲಾಂಗ್ ಲಾಜೊಂಗ್ ಎಫ್‌ಸಿ ತಂಡವನ್ನು ಸೋಲಿಸಿ ಡುರಾಂಡ್ ಕಪ್ ಫುಟ್‌ಬಾಲ್ ಟೂರ್ನಿ ಫೈನಲ್ ತಲುಪಿತು.
ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಥೋಯಿ ಸಿಂಗ್, ಮೊರಾಕೊದ ಅಲ್ಲೇಡಿನ್ ಅಜರಾಯಿ, ಪಾರ್ಥಿವ್ ಗೊಗೊಯಿ ಗೋಲುಗಳನ್ನು ಗಳಿಸಿದರು. ವಿರಾಮದ ವೇಳೆ ವಿಜೇತರು 2–0 ಯಿಂದ ಮುಂದಿದ್ದರು. ನಾರ್ತ್‌ಈಸ್ಟ್ ಇದೇ ಮೊದಲ ಬಾರಿ ಡುರಾಂಡ್ ಫೈನಲ್ ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.