ADVERTISEMENT

ರೊನಾಲ್ಡೊ ಭೇಟಿಗಾಗಿ 6 ದೇಶ ದಾಟಿ, 13,000 ಕಿ.ಮೀ. ಸೈಕಲ್ ಸವಾರಿ ಮಾಡಿದ ಅಭಿಮಾನಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಅಕ್ಟೋಬರ್ 2024, 8:26 IST
Last Updated 28 ಅಕ್ಟೋಬರ್ 2024, 8:26 IST
<div class="paragraphs"><p> ಅಭಿಮಾನಿ ಗಾಂಗ್‌ ಜೊತೆ&nbsp;ಕ್ರಿಸ್ಚಿಯಾನೊ ರೊನಾಲ್ಡೊ</p></div>

ಅಭಿಮಾನಿ ಗಾಂಗ್‌ ಜೊತೆ ಕ್ರಿಸ್ಚಿಯಾನೊ ರೊನಾಲ್ಡೊ

   

ರಾಯಿಟರ್ಸ್‌ ಹಾಗೂ ಎಕ್ಸ್‌ ಚಿತ್ರ

ಸೌದಿ ಅರೇಬಿಯಾದಲ್ಲಿ ಇರುವ ಫುಟ್‌ಬಾಲ್‌ ದಿಗ್ಗಜ ಕ್ರಿಸ್ಚಿಯಾನೊ ರೊನಾಲ್ಡೊ ಅವರನ್ನು ಭೇಟಿಯಾಗುವ ಮಹದಾಸೆಯಿಂದ ಚೀನಾದ ವ್ಯಕ್ತಿಯೊಬ್ಬ ಬರೋಬ್ಬರಿ 13000 ಕಿ.ಮೀ. ಸೈಕಲ್‌ ಸವಾರಿ ಮಾಡಿದ್ದಾರೆ.

ADVERTISEMENT

ಸದ್ಯ 'ಸೌದಿ ಪ್ರೋ ಲೀಗ್‌' ಟೂರ್ನಿಯಲ್ಲಿ 'ಅಲ್‌–ನಸರ್‌' ಕ್ಲಬ್‌ ಪರ ಆಡುವ ರೊನಾಲ್ಡೊ ಅವರು ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ನೆಲೆಸಿದ್ದಾರೆ. ಅವರನ್ನು ಭೇಟಿಯಾಗಲು, ಪಶ್ಚಿಮ ಚೀನಾದ ಅನ್ಹುಯಿ ಪ್ರಾಂತ್ಯದ 24 ವರ್ಷ ಗಾಂಗ್‌ ಎಂಬವರು ತಮ್ಮ ಸೈಕಲ್‌ನಲ್ಲಿ ಬರೋಬ್ಬರಿ 7 ತಿಂಗಳು ಪ್ರಯಾಣಿಸಿದ್ದಾರೆ ಎಂದು 'ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌' (ಎಸ್‌ಸಿಎಂಪಿ) ವರದಿ ಮಾಡಿದೆ. 

ಮಾರ್ಚ್‌ 18ರಿಂದ ಸವಾರಿ ಶುರು ಮಾಡಿದ ಗಾಂಗ್‌, ಮೊದಲು ಬೀಜಿಂಗ್‌ ತಲುಪಿ, ಅಲ್ಲಿಂದ ಪಶ್ಚಿಮದ ಕಡೆಗೆ ಸಾಗಿದರು. ಷಿನ್‌ಜಿಯಾಂಗ್‌ ಪ್ರಾಂತ್ಯದ ಮೂಲಕ ಗಡಿ ದಾಟಿ ಕಜಕಿಸ್ತಾನಕ್ಕೆ ಹೋದ ಅವರು, ಸೌದಿ ತಲುಪುವ ಮುನ್ನ ಜಾರ್ಜಿಯಾ, ಇರಾನ್‌, ಕತಾರ್‌ ಸೇರಿದಂತೆ ಆರು ದೇಶಗಳನ್ನು ದಾಟಿದರು ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಅಕ್ಟೋಬರ್‌ 20ರಂದು 'ಅಲ್‌–ನಸರ್‌' ಕ್ಲಬ್‌ ಮುಂಭಾಗವೇ ರೊನಾಲ್ಡೊ ಅವರನ್ನು ಭೇಟಿಯಾದ ಗಾಂಗ್, ತಾವು ಬಾಲ್ಯದಿಂದಲೂ ಕಂಡಿದ್ದ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ.

ರೊನಾಲ್ಡೊ ಅವರು ಫೆಬ್ರುವರಿಯಲ್ಲಿ ಚೀನಾಗೆ ಭೇಟಿ ನೀಡಬೇಕಿತ್ತು. ಆದರೆ, ಗಾಯದ ಸಮಸ್ಯೆಯಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಹಾಗಾಗಿ, ಹೇಗಾದರೂ ಮಾಡಿ ನೆಚ್ಚಿನ ಆಟಗಾರನನ್ನು ಭೇಟಿಯಾಗಲು ಗಾಂಗ್‌ ನಿರ್ಧರಿಸಿದ್ದರು. ಅದಕ್ಕಾಗಿ, 60,000mAh ಸಾಮರ್ಥ್ಯದ ಎರಡು ಪವರ್‌ ಬ್ಯಾಂಕ್‌ಗಳು, ಒಂದು ಟೆಂಟ್‌, ಅಡುಗೆ ಮಾಡಿಕೊಳ್ಳಲು ಒಂದಿಷ್ಟು ಸಾಮಗ್ರಿ, ಬಟ್ಟೆ ಹಾಗೂ ಅತ್ಯವಶ್ಯಕ ವಸ್ತುಗಳನ್ನು ಕಟ್ಟಿಕೊಂಡು ಒಟ್ಟು 13,000 ಕಿ.ಮೀ ಪ್ರಯಾಣಿಸಿದ್ದಾರೆ.

ಪ್ರಯಾಣದುದ್ದಕ್ಕೂ, ತಮ್ಮ ಬಳಿ ಇದ್ದ ಹಣವನ್ನು ಹಿಡಿದಿಡಿದು ಖರ್ಚು ಮಾಡಿರುವ ಗಾಂಗ್‌, ಆಹಾರಕ್ಕಾಗಿಯೂ ಹೆಚ್ಚು ವ್ಯಯಿಸಿಲ್ಲ. ಕೆಲವೊಮ್ಮೆ ಬ್ರೆಡ್‌ ಸೇವಿಸಿಯೇ ದೂರದೂರಿನ ಹಾದಿ ಸವೆಸಿದ್ದಾರೆ. ಅರ್ಮೇನಿಯಾದಲ್ಲಿ ಇದ್ದಾಗ ಅವರು ತೀವ್ರ ಜ್ವರಕ್ಕೆ ತುತ್ತಾಗಿ, ರಸ್ತೆ ಬದಿಯಲ್ಲೇ ಕುಸಿದು ಬಿದ್ದಿದ್ದರು. ಚಿಕಿತ್ಸೆ ಬಳಿಕ ಚೇತರಿಸಿಕೊಂಡು, ಯಾನ ಮುಂದುವರಿಸಿದ್ದರು ಎಂದು 'ಎಸ್‌ಸಿಎಂಪಿ' ವರದಿಯಲ್ಲಿ ಹೇಳಿದೆ.

'ಈ ಪ್ರಯಾಣವು ನನಗೆ ಸಾಕಷ್ಟು ಹೊಸ ಸ್ನೇಹಿತರನ್ನು ಗಳಿಸಿಕೊಟ್ಟಿದೆ. ತಾಳ್ಮೆ ಕಲಿಸಿದ್ದು, ಪ್ರಬುದ್ಧನನ್ನಾಗಿಸಿದೆ' ಎಂದು ಹೇಳಿಕೊಂಡಿದ್ದಾರೆ.

ಗಾಂಗ್‌ ಅವರು ಅಕ್ಟೋಬರ್ 10ರಂದು ರಿಯಾದ್‌ ತಲುಪಿದ್ದರು. ಆಗ ರೊನಾಲ್ಡೊ ಪಂದ್ಯದ ಸಲುವಾಗಿ ಯುರೋಪ್‌ನಲ್ಲಿದ್ದರು. ಆದರೆ, ಗಾಂಗ್ ಅವರ ಪ್ರಯಾಣದ ಬಗ್ಗೆ ತಿಳಿದ 'ಅಲ್‌–ನಸರ್‌' ಕ್ಲಬ್‌, ರೊನಾಲ್ಡೊ ಭೇಟಿಗೆ ವಿಶೇಷ ವ್ಯವಸ್ಥೆ ಮಾಡಿತ್ತು.

ಅಕ್ಟೋಬರ್ 19ರಂದು ಅವರ ಆಟವನ್ನು ವೀಕ್ಷಿಸಿದ್ದ ಗಾಂಗ್‌, ಮರುದಿನವೇ ತಮ್ಮ ಪಾಲಿನ ಸೂಪರ್‌ಸ್ಟಾರ್‌ ಅನ್ನು ಭೇಟಿಯಾದರು.

ರೊನಾಲ್ಡೊ ಭೇಟಿ ಕ್ಷಣದ ಬಗ್ಗೆ ಹೇಳಿರುವ ಗಾಂಗ್, 'ಅದೊಂದು ಕನಸಿನಂತಹ ಕ್ಷಣ. ರೊನಾಲ್ಡೊ ಅವರು ನನ್ನ ಕೈ ಕುಲುಕಿ, ಅಪ್ಪಿಕೊಂಡರು. ಬಳಿಕ, 'ಅಲ್‌–ನಸರ್‌' ತಂಡದ ತಮ್ಮ ನಂ.7 ಜೆರ್ಸಿಗೆ ಸಹಿ ಮಾಡಿ ಕೊಟ್ಟರು' ಎಂದು ಸಂಭ್ರಮಿಸಿದ್ದಾರೆ.

ಈ ಅಭಿಮಾನಿ ಮಹಾಶಯ ಮುಂದಿನ ಸಲ ಪೋರ್ಚುಗಲ್‌ಗೆ ಪ್ರಯಾಣಿಸಲು ಯೋಜಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.