ನವದೆಹಲಿ: ಮ್ಯಾಂಚೆಸ್ಟರ್ ಕ್ಲಬ್ ತೊರೆದಿರುವ ಫುಟ್‌ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ ಅವರೊಂದಿಗೆ, $225 ಮಿಲಿಯನ್ (ಸುಮಾರು 1838 ಕೋಟಿ ರೂ.) ಮೊತ್ತದ ಒಪ್ಪಂದ ಮಾಡಿಕೊಳ್ಳಲು ಸೌದಿ ಅರೇಬಿಯಾದ ಫುಟ್‌ಬಾಲ್ ಕ್ಲಬ್ ‘ಅಲ್ ನಾಸರ್‘ ಮುಂದೆ ಬಂದಿದೆ ಎಂದು ವರದಿಯಾಗಿದೆ.
37 ವರ್ಷದ ರೊನಾಲ್ಡೊ ಅವರನ್ನು, ಸದ್ಯ ನಡೆಯುತ್ತಿರುವ ಫಿಫಾ ವಿಶ್ವಕಪ್ ಪಂದ್ಯಾವಳಿ ಬಳಿಕ, ಮೂರು ವರ್ಷದ ಮಟ್ಟಿಗೆ ಇಷ್ಟು ದೊಡ್ಡ ಮೊತ್ತ ನೀಡಿ ತನ್ನ ಪರ ಆಡಲು ಅಲ್ ನಾಸರ್ ಉತ್ಸಾಹ ತೋರಿದೆ.
ರೊನಾಲ್ಡೊ ಅವರನ್ನು ತಮ್ಮ ಕ್ಲಬ್‌ಗೆ ಸೇರಿಸಿಕೊಳ್ಳಬೇಕು ಎಂದು ಅಲ್ ನಾಸರ್ ಈ ಹಿಂದಿನಿಂದಲೂ ಉತ್ಸಾಹ ತೋರಿತ್ತು. ಆದರೆ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ತೊರೆದ ಬಳಿಕ, ಅಲ್ ನಾಸರ್ ಇನ್ನೂ ಹೆಚ್ಚಿನ ಉಮೇದು ತೋರಿಸುತ್ತಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮವೊಂದರ ವರದಿಯನ್ನು ಉಲ್ಲೇಖಿಸಿ ‘ಎನ್‌ಡಿಟಿವಿ‘ ವರದಿ ಮಾಡಿದೆ.
ವರದಿಗಳ ಪ್ರಕಾರ ರೊನಾಲ್ಡೊ ಹಾಗೂ ಅಲ್ ನಾಸರ್ ನಡುವೆ ಮಾತುಕತೆ ನಡೆದಿದ್ದು, ರೊನಾಲ್ಡೊ ಅವರ ಅಂತಿಮ ನಿರ್ಧಾರಕ್ಕೆ ಕಾಯಲಾಗುತ್ತಿದೆ. ಒಂದು ವೇಳೆ ರೊನಾಲ್ಡೊ ಅವರು ಒಪ್ಪಿಗೆ ನೀಡಿದರೂ, ಒಪ್ಪಂದ ಅಂತಿಮವಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ.
ಅಲ್ ನಾಸರ್ ಏಷ್ಯಾದ ಯಶಸ್ವಿ ಫುಟ್‌ಬಾಲ್ ಕ್ಲಬ್ ಆಗಿ ಗುರುತಿಸಿಕೊಂಡಿದ್ದು, ಒಂಬತ್ತು ಲೀಗ್‌ಗಳಲ್ಲಿ ಪ್ರಶಸ್ತಿ ಬಾಚಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.