ನವದೆಹಲಿ: ತಮ್ಮನ್ನು ಭಾರತ ಫುಟ್‌ಬಾಲ್ ತಂಡದ ಕೋಚ್ ಸ್ಥಾನದಿಂದ ವಜಾಗೊಳಿಸಿರುವ ನಿರ್ಧಾರ ‘ಏಕಪಕ್ಷೀಯ’ ಎಂದು ಟೀಕಿಸಿರುವ ಇಗೊರ್ ಸ್ಟಿಮಾಚ್, ತಮಗೆ ನೀಡಬೇಕಾಗಿರುವ ಬಾಕಿ ಹಣವನ್ನು 10 ದಿನಗಳ ಒಳಗೆ ನೀಡದೇ ಹೋದಲ್ಲಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ವಿರುದ್ಧ ಫಿಫಾ ನ್ಯಾಯಮಂಡಳಿಯಲ್ಲಿ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಎಐಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಅವರ ವಿರುದ್ಧ ಸಿಡಿಮಿಡಿಗೊಂಡಿರುವ ಕ್ರೊವೇಷ್ಯಾದ ಸ್ಟಿಮಾಚ್, ಅವರು ಹಲವು ಗುತ್ತಿಗೆ ಕರಾರುಗಳನ್ನು ಮುರಿದಿದ್ದಾರೆ ಎಂದು ದೂರಿದ್ದಾರೆ.
ಭಾರತ ತಂಡ 2026ರ ವಿಶ್ವಕಪ್ ಅರ್ಹತಾ ಸುತ್ತಿನ ಮೂರನೇ ಸುತ್ತಿಗೆ ತಲುಪಲು ವಿಫಲವಾಗಿದ್ದಕ್ಕೆ ಚೌಬೆ ಅವರೂ ಸಹ ಕಾರಣ. ಭಾರತದಲ್ಲಿ ಇದ್ದ ಅವಧಿಯಲ್ಲಿ ತಾವು ಗಂಭೀರ ಅರೋಗ್ಯ ಸಮಸ್ಯೆ ಎದುರಿಸಬೇಕಾಯಿತು. ಎಐಎಫ್‌ಎಫ್ ಜೊತೆ ಮತ್ತೆಂದೂ ಮಾತನಾಡಲು ಬಯಸುವುದಿಲ್ಲ ಎಂದೂ 56 ವರ್ಷದ ಕೋಚ್ ಹೇಳಿದರು.
‘ಒಪ್ಪಂದ ಕೊನೆಗೊಳಿಸಿದ ಮೇಲೆ ನನಗೆ ಸಲ್ಲಬೇಕಾದ ಬಾಕಿ ಹಣವನ್ನು ತಕ್ಷಣಕ್ಕೆ, ಹೆಚ್ಚೆಂದರೆ 10 ದಿನಗಳ ಒಳಗೆ ಪಾವತಿಸಬೇಕು ಎಂದು ಕೇಳುತ್ತಿದ್ದೇನೆ’ ಎಂದಿದ್ದಾರೆ.
ವಿಶ್ವಕಪ್ ಅರ್ಹತಾ ಸುತ್ತಿನ ಮೂರನೇ ಹಂತಕ್ಕೆ ಪ್ರವೇಶಿಸಲು ವಿಫಲವಾದ ಕಾರಣ, ಎಐಎಫ್‌ಎಫ್ ಸೋಮವಾರ ಸ್ಟಿಮಾಚ್ ಅವರನ್ನು ಕೋಚ್ ಸ್ಥಾನದಿಂದ ವಜಾ ಮಾಡಿತ್ತು. ಅವರ ಗುತ್ತಿಗೆ ಅವಧಿ ಮುಗಿಯಲು ಸರಿಯಾಗಿ ಒಂದು ವರ್ಷ ಉಳಿದಿತ್ತು.2019ರಲ್ಲಿ ಅವರನ್ನು ಕೋಚ್ ಆಗಿ ನೇಮಕ ಮಾಡಲಾಗಿತ್ತು.
ಈ ರೀತಿ ಚರ್ಚೆ ನಡೆಸದೇ ವಜಾ ಆದೇಶ ಪ್ರಕಟಿಸಿರುವುದು ವೃತ್ತಿಪರತೆಗೆ ವಿರುದ್ಧವಾದುದು ಮತ್ತು ನೀತಿಸಮ್ಮತವಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.