ADVERTISEMENT

200ನೇ ಪಂದ್ಯ ಆಡಿದ ಚೆಟ್ರಿ: ಬೆಂಗಳೂರು ಎಫ್‌ಸಿಗೆ ಜಯದ ಸಂಭ್ರಮ

ಪಿಟಿಐ
Published 16 ಫೆಬ್ರುವರಿ 2021, 2:31 IST
Last Updated 16 ಫೆಬ್ರುವರಿ 2021, 2:31 IST
ಬಿಎಫ್‌ಸಿಯ ಸುನಿಲ್ ಚೆಟ್ರಿ ಗೋಲು ಗಳಿಸಲು ಮುನ್ನುಗ್ಗಿದರು –ಐಎಸ್‌ಎಲ್‌ ಮೀಡಿಯಾ ಚಿತ್ರ
ಬಿಎಫ್‌ಸಿಯ ಸುನಿಲ್ ಚೆಟ್ರಿ ಗೋಲು ಗಳಿಸಲು ಮುನ್ನುಗ್ಗಿದರು –ಐಎಸ್‌ಎಲ್‌ ಮೀಡಿಯಾ ಚಿತ್ರ   

ಬ್ಯಾಂಬೊಲಿಮ್: ಆಕ್ರಮಣಕಾರಿ ಆಟವಾಡಿದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಸೋಮವಾರ ಭರ್ಜರಿ ಗೆಲುವು ದಾಖಲಿಸಿತು. ಆರಂಭದಲ್ಲಿ ಕ್ಲೀಟನ್ ಸಿಲ್ವಾ ಎರಡು ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರೆ ತಂಡಕ್ಕಾಗಿ 200ನೇ ಪಂದ್ಯ ಆಡಿದ ನಾಯಕ ಸುನಿಲ್ ಚೆಟ್ರಿ (ಐಎಸ್‌ಎಲ್‌ನಲ್ಲಿ 91 ಪಂದ್ಯ) ಎರಡು ಗೋಲು ದಾಖಲಿಸಿದರು. ಇವರಿಬ್ಬರ ಆಟದ ನೆರವಿನಿಂದ ಮುಂಬೈ ಸಿಟಿ ಎಫ್‌ಸಿಯನ್ನು ಬಿಎಫ್‌ಸಿ 4–2ರಲ್ಲಿ ಮಣಿಸಿತು.

ಆರಂಭದ 25ನೇ ಸೆಕೆಂಡ್‌ನಲ್ಲಿ ಕ್ಲೀಟನ್ ಸಿಲ್ವಾ ಚೆಂಡನ್ನು ಗುರಿ ಮುಟ್ಟಿಸಿ ಬೆಂಗಳೂರಿಗೆ ಮುನ್ನಡೆ ತಂದುಕೊಟ್ಟರು. ಅಂಗಣದ ಮಧ್ಯದಲ್ಲಿ ಬಿಎಫ್‌ಸಿಯ ಅಜಿತ್ ಕುಮಾರ್ ಚೆಂಡನ್ನು ನಿಯಂತ್ರಿಸಿ ಮುನ್ನಡೆಯಲು ಪ್ರಯತ್ನಿಸಿದರು. ಆದರೆ ಎದುರಾಳಿ ತಂಡದ ರೇನಿಯರ್ ಫರ್ನಾಂಡಿಸ್ ಅದನ್ನು ತಡೆದರು. ಮೇಲೆ ಚಿಮ್ಮಿದ ಚೆಂಡು ಸುನಿಲ್ ಚೆಟ್ರಿ ಬಳಿಗೆ ಸಾಗಿತು. ಅವರು ಅದನ್ನು ಬಲಭಾಗದಲ್ಲಿದ್ದ ಉದಾಂತ ಸಿಂಗ್ ಅವರತ್ತ ಅಟ್ಟಿದರು. ಉದಾಂತ ಸಿಂಗ್ ನೇರವಾಗಿ ಗೋಲುಪೆಟ್ಟಿಗೆಯತ್ತ ತಳ್ಳಿದರು. ಓಡಿ ಬಂದ ಕ್ಲೀಟನ್ ಸಿಲ್ವಾ ಮೋಹಕವಾಗಿ ಗುರಿ ಮುಟ್ಟಿಸಿದರು.

ಮೂರನೇ ನಿಮಿಷದಲ್ಲಿ ಬಿಎಫ್‌ಸಿ ಪ್ರಬಲ ಆಕ್ರಮಣ ನಡೆಸಿತು. ಎಡಭಾಗದಿಂದ ಸುನಿಲ್ ಚೆಟ್ರಿ ಚೆಂಡಿನೊಂದಿಗೆ ಮುನ್ನುಗ್ಗಿ ಗೋಲುಪೆಟ್ಟಿಗೆಯತ್ತ ಒದ್ದರು. ಆದರೆ ಹರ್ಮನ್‌ ಸಂಟಾನ ಚುರುಕಿನ ಆಟ ಪ್ರದರ್ಶಿಸಿ ಅದನ್ನು ತಡೆದರು. ಸಮಯ ಸಾಗಿದಂತೆ ಪಂದ್ಯ ರೋಚಕವಾಗುತ್ತ ಸಾಗಿತು. ಉಭಯ ತಂಡಗಳು ಆಕ್ರಮಣ ಮತ್ತು ರಕ್ಷಣೆಗೆ ಒತ್ತು ನೀಡಿ ಆಡಿದವು. 20ನೇ ನಿಮಿಷದಲ್ಲಿ ಮುಂಬೈ ತಂಡದ ಗೋಲ್‌ಕೀಪರ್ ಅಮರಿಂದರ್ ಸಿಂಗ್ ಮೋಹಕವಾಗಿ ಚೆಂಡನ್ನು ತಡೆದು ಮಿಂಚಿದರು. ಆದರೆ 22ನೇ ನಿಮಿಷದಲ್ಲಿ ಕ್ಲೀಟನ್ ಸಿಲ್ವಾ ಮತ್ತೊಮ್ಮೆ ಮ್ಯಾಜಿಕ್ ಮಾಡಿದರು. ಬಲಭಾಗದಿಂದ ಸಿಸ್ಕೊ ಹರ್ನಾಂಡಸ್ ಫ್ರೀ ಕಿಕ್‌ ಮೂಲಕ ನೀಡಿದ ಚೆಂಡಿಗೆ ಓಡಿ ಬಂದು ತಲೆಯೊಡ್ಡಿದ ಕ್ಲೀಟನ್ ಗೋಲು ಗಳಿಸಿ ಸಂಭ್ರಮಿಸಿದರು.

ADVERTISEMENT

ಮೊದಲಾರ್ಧದ ಪೂರ್ತಿ ಆಧಿಪತ್ಯ ಸ್ಥಾಪಿಸಿದ ಬೆಂಗಳೂರು ತಂಡಕ್ಕೆ ದ್ವಿತೀಯಾರ್ಧದ ಆರಂಭದಲ್ಲೇ ಆ್ಯಡಂ ಲೀ ಫಾಂಡ್ರೆ ಪೆಟ್ಟು ನೀಡಿದರು. 50ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಮುಂಬೈ ತಂಡದಲ್ಲಿ ಅವರು ಭರವಸೆ ಮೂಡಿಸಿದರು. ಆದರೆ 57ನೇ ನಿಮಿಷದಲ್ಲಿ ಸುನಿಲ್ ಚೆಟ್ರಿ ಮಿಂಚಿನ ಗೋಲು ಗಳಿಸಿ ಮುನ್ನಡೆ ಹೆಚ್ಚಿಸಿದರು. 72ನೇ ನಿಮಿಷದಲ್ಲಿ ಫಾಂಡ್ರೆ ಮತ್ತೊಂದು ಗೋಲು ಗಳಿಸಿ ಬಿಎಫ್‌ಸಿ ಪಾಳಯದಲ್ಲಿ ಆತಂಕ ಮೂಡಿಸಿದರು. ಆದರೆ ಇಂಜುರಿ ಅವಧಿಯಲ್ಲಿ ಸುನಿಲ್ ಚೆಟ್ರಿ ಏಕಾಂಗಿಯಾಗಿ ಚೆಂಡನ್ನು ಡ್ರಿಬಲ್ ಮಾಡುತ್ತ ಸಾಗಿ ಮೋಹಕ ಗೋಲು ಗಳಿಸಿದರು.

ಹೈದರಾಬಾದ್‌ಗೆ ಪ್ಲೇ ಆಫ್‌ ಗುರಿ
ಆಗ್ರ ನಾಲ್ಕರಿಂದ ಏಕಾಏಕಿ ಐದನೇ ಸ್ಥಾನಕ್ಕೆ ಕುಸಿದಿರುವ ಹೈದರಾಬಾದ್ ಎಫ್‌ಸಿ ಮಂಗಳವಾರ ಕೇರಳ ಬ್ಲಾಸ್ಟರ್ಸ್‌ ವಿರುದ್ಧ ಸೆಣಸಲಿದೆ. ತಿಲಕ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಜಯ ಗಳಿಸಲು ವಿಫಲವಾದರೆ ತಂಡದ ಪ್ಲೇ ಆಫ್ ಹಾದಿ ಕಠಿಣವಾಗಲಿದೆ. ಕೇರಳ ಬ್ಲಾಸ್ಟರ್ಸ್ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದೆ. ಕೇರಳ ಈಗಾಗಲೇ29 ಗೋಲುಗಳನ್ನು ಬಿಟ್ಟುಕೊಟ್ಟಿದೆ. ಇದು ಈ ಬಾರಿ ತಂಡವೊಂದು ಬಿಟ್ಟುಕೊಟ್ಟಿರುವ ಎರಡನೇ ಗರಿಷ್ಠ ಸಂಖ್ಯೆಯಾಗಿದೆ.

ತಂಡ ಈ ವರೆಗೆ 22 ಗೋಲು ಗಳಿಸಿದೆ. ಈ ಪೈಕಿ 14 ಗೋಲುಗಳು ದ್ವಿತಿಯಾರ್ಧದಲ್ಲಿ ದಾಖಲಾಗಿವೆ. ಹೈದರಾಬಾದ್ ದ್ವಿತೀಯಾರ್ಧದಲ್ಲಿ 16 ಗೋಲುಗಳನ್ನು ಗಳಿಸಿದೆ. ಎರಡೂ ತಂಡಗಳ ರಕ್ಷಣಾ ವಿಭಾಗದ ಆಟಗಾರರು ದ್ವಿತೀಯಾರ್ಧದಲ್ಲಿ ಗಮನಾರ್ಹ ಸಾಧನೆ ಮಾಡಲಿಲ್ಲ. ಕೇರಳ ತಂಡ ವಿರಾಮದ ನಂತರ 18 ಗೋಲುಗಳನ್ನು ನೀಡಿದ್ದು ಹೈದರಾಬಾದ್ 11 ಗೋಲು ಬಿಟ್ಟುಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.