ವೆಲಿಂಗ್ಟನ್: ಮಹಿಳಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಜಪಾನ್ ತಂಡದ ಅಚ್ಚರಿಯ ಓಟ ಮುಂದುವರಿದಿದ್ದು, ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಸ್ಪೇನ್ ಮಹಿಳೆಯರೂ ಎಂಟರಘಟ್ಟದಲ್ಲಿ ಸ್ಥಾನ ಪಡೆದರು.
ಶನಿವಾರ ನಡೆದ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್ 3–1 ಗೋಲುಗಳಿಂದ ನಾರ್ವೆ ತಂಡವನ್ನು ಮಣಿಸಿದರೆ, ಸ್ಪೇನ್ 5–1 ರಿಂದ ಸ್ವಿಟ್ಜರ್‌ಲೆಂಡ್ ವಿರುದ್ಧ ಸುಲಭ ಜಯ ಸಾಧಿಸಿತು. ವಿಶ್ವಕಪ್ ಇತಿಹಾಸದಲ್ಲಿ ಸ್ಪೇನ್, ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು ಇದೇ ಮೊದಲು.
2011ರ ಚಾಂಪಿಯನ್ ಜಪಾನ್ ತಂಡ, ಎಂಟರಘಟ್ಟದಲ್ಲಿ ಕಳೆದ ಬಾರಿಯ ಪ್ರಶಸ್ತಿ ವಿಜೇತ ಅಮೆರಿಕ ಅಥವಾ ಸ್ವೀಡನ್ ತಂಡವನ್ನು ಎದುರಿಸಲಿದೆ.
15ನೇ ನಿಮಿಷದಲ್ಲಿ ಎದುರಾಳಿಗೆ ‘ಉಡುಗೊರೆ’ ಗೋಲು ನೀಡಿದ ನಾರ್ವೆ ತಂಡ, 20ನೇ ನಿಮಿಷದಲ್ಲಿ ಗ್ಯುರೊ ರೀಟೆನ್ ಅವರ ಗೋಲಿನ ನೆರವಿನಿಂದ ಪಂದ್ಯವನ್ನು ಸಮಸ್ಥಿತಿಗೆ ತಂದಿತು. ವಿರಾಮದವರೆಗೂ ಹೆಚ್ಚಿನ ಗೋಲುಗಳು ಬರಲಿಲ್ಲ.
ಆದರೆ ಎರಡನೇ ಅವಧಿಯಲ್ಲಿ ರಿಶಾ ಶಿಮಿಜು (50ನೇ ನಿ.) ಮತ್ತು ಹಿನಟಾ ಮಿಯಜಾವ (81ನೇ ನಿ.) ಅವರು ಗೋಲು ಗಳಿಸಿ ಜಪಾನ್ ತಂಡದ ಗೆಲುವಿಗೆ ಕಾರಣರಾದರು.
ಕೊನೆಯ ನಿಮಿಷಗಳಲ್ಲಿ ನಾರ್ವೆ ತಂಡ ನಡೆಸಿದ ಆಕ್ರಮಣವನ್ನು ಜಪಾನ್ ಗೋಲ್‌ಕೀಪರ್ ಅಯಾಕ ಯಮಶಿಟ ಹಾಗೂ ಡಿಫೆಂಡರ್‌ಗಳು ಸಮರ್ಥವಾಗಿ ತಡೆಯೊಡ್ಡಿದರು. ಇಂಜುರಿ ಅವಧಿಯಲ್ಲಿ ನಾರ್ವೆ ಆಟಗಾರ್ತಿ ಹೆಡರ್‌ಅನ್ನು ಯಮಶಿಟ ಅಮೋಘವಾಗಿ ತಡೆದರು.
ಆಕ್ಲೆಂಡ್‌ನ ಈಡನ್ ಪಾರ್ಕ್ ಕ್ರೀಡಾಂಗಣದಲ್ಲಿ 43 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಮುಂದೆ ನಡೆದ ಪಂದ್ಯದಲ್ಲಿ ಸ್ಪೇನ್‌ಗೆ ಸಾಟಿಯಾಗಿ ನಿಲ್ಲಲು ಸ್ವಿಟ್ಜರ್‌ಲೆಂಡ್ ವಿಫಲವಾಯಿತು. ಐತಾನಾ ಬೋನ್ಮತಿ (5 ಮತ್ತು 36ನೇ ನಿ.) ಅವರು ಎರಡು ಗೋಲುಗಳನ್ನು ಗಳಿಸಿ ಗಮನ ಸೆಳೆದರು. ಇತರ ಗೋಲುಗಳನ್ನು ಆಲ್ಬಾ ರೆಡೊಂಡೊ (17), ಲೈಲಾ ಕಾಡಿನಾ (45) ಮತ್ತು ಜೆನಿಫರ್ ಹೆರ್ಮೊಸೊ (70) ಅವರು ತಂದಿತ್ತರು.
ಸ್ಪೇನ್ ತಂಡ ಎಂಟರಘಟ್ಟದಲ್ಲಿ ನೆದರ್ಲೆಂಡ್ಸ್ ಅಥವಾ ದಕ್ಷಿಣ ಆಫ್ರಿಕಾ ತಂಡದ ಸವಾಲು ಎದುರಿಸಲಿದೆ.
ಭಾನುವಾರ ನಡೆಯಲಿರುವ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಸ್ವೀಡನ್– ಅಮೆರಿಕ ಮತ್ತು ನೆದರ್ಲೆಂಡ್ಸ್– ದಕ್ಷಿಣ ಆಫ್ರಿಕಾ ತಂಡಗಳು ಹಣಾಹಣಿ ನಡೆಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.