ಸಮಾರ, ರಷ್ಯಾ: ನಿರ್ಣಾಯಕ ಪಂದ್ಯದಲ್ಲಿ ಮಿಂಚಿನ ಆಟ ಆಡಿದ ಕೊಲಂಬಿಯಾ ತಂಡ 21ನೇ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಸಮಾರ ಅರೆನಾದಲ್ಲಿ ಗುರುವಾರ ನಡೆದ ಹೋರಾಟದಲ್ಲಿ ಕೊಲಂಬಿಯಾ 1–0 ಗೋಲಿನಿಂದ ಸೆನೆಗಲ್ ತಂಡವನ್ನು ಮಣಿಸಿತು.
ಇದರೊಂದಿಗೆ ಕೊಲಂಬಿಯಾ ತಂಡ ಮೂರು ಪಂದ್ಯಗಳಿಂದ ಆರು ಪಾಯಿಂಟ್ಸ್ ಕಲೆಹಾಕಿ ‘ಎಚ್’ ಗುಂಪಿನ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿತು.
4–2–3–1ರ ಯೋಜನೆಯೊಂದಿಗೆ ಕಣಕ್ಕಿಳಿದಿದ್ದ ಕೊಲಂಬಿಯಾ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಸೆನೆಗಲ್ ಕೂಡಾ ಎದುರಾಳಿಗಳ ತಂತ್ರಗಳಿಗೆ ಪ್ರತಿ ತಂತ್ರ ಹೆಣೆಯಿತು. ಹೀಗಾಗಿ ಮೊದಲ 30 ನಿಮಿಷಗಳ ಆಟ ಸಮಬಲವಾಗಿತ್ತು. ನಂತರವೂ ಉಭಯ ತಂಡಗಳು ತುರುಸಿನ ಪೈಪೋಟಿ ನಡೆಸಿದವು. ಹೀಗಾಗಿ ಮೊದಲಾರ್ಧದಲ್ಲಿ ಯಾವ ತಂಡಕ್ಕೂ ಖಾತೆ ತೆರೆಯಲು ಆಗಲಿಲ್ಲ.
ದ್ವಿತೀಯಾರ್ಧದಲ್ಲಿ ಕೊಲಂಬಿಯಾ ಆಟಗಾರರು ಮಿಂಚಿದರು. ಶುರುವಿನಿಂದಲೇ ಎದುರಾಳಿ ತಂಡದ ರಕ್ಷಣಾ ಕೋಟೆ ಭೇದಿಸುವ ಪ್ರಯತ್ನ ನಡೆಸಿದ ಈ ತಂಡಕ್ಕೆ 74ನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು.
ಚೆಂಡಿನೊಂದಿಗೆ ಎದುರಾಳಿ ಆವರಣ ಪ್ರವೇಶಿಸಿದ ರಕ್ಷಣಾ ವಿಭಾಗದ ಆಟಗಾರ ಯೆರಿ ಮಿನಾ ಅದನ್ನು ಚುರುಕಾಗಿ ಗುರಿ ಮುಟ್ಟಿಸಿದರು. ಅವರು ಬಾರಿಸಿದ ಚೆಂಡು ಸೆನೆಗಲ್ ತಂಡದ ಗೋಲು ಪೆಟ್ಟಿಗೆಯ ಬಲೆಗೆ ಮುತ್ತಿಕ್ಕುತ್ತಿದ್ದಂತೆ ಕ್ರೀಡಾಂಗಣದಲ್ಲಿ ಸಂಭ್ರಮ ಮೇಳೈಸಿತು. ಇದರ ಬೆನ್ನಲ್ಲೆ ಸೆನೆಗಲ್ ತಂಡಕ್ಕೆ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು. ಈ ತಂಡ ಇದನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.