ಮಿಯಾಮಿ ಗಾರ್ಡನ್: ಕೊಪಾ ಅಮೆರಿಕ ಫುಟ್‌ಬಾಲ್ ಟೂರ್ನಿಯ ಫೈನಲ್‌ನಲ್ಲಿ ಕೊಲಂಬಿಯಾ ಎದುರು 1–0 ಅಂತರದ ಗೆಲುವು ಸಾಧಿಸುವ ಮೂಲಕ ಅರ್ಜೆಂಟೀನಾ ಪಡೆ ಚಾಂಪಿಯನ್ ಪಟ್ಟಕ್ಕೇರಿತು. ಇದರೊಂದಿಗೆ 16ನೇ ಸಲ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ನಾಯಕ, ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ಗಾಯಗೊಂಡು ಪೂರ್ಣವಾಧಿ ಮುಗಿಯುವ ಮುನ್ನವೇ ಮೈದಾನ ತೊರೆದರೂ, ಸಂಘಟಿತ ಆಟವಾಡಿದ ಅರ್ಜೆಂಟೀನಾ ಪಡೆ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಫ್ಲೋರಿಡಾದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದವು. ಪಂದ್ಯದ ನಿಗದಿತ ಅವಧಿ ಹಾಗೂ ಮೊದಲ ಹೆಚ್ಚುವರಿ ಅವಧಿಯಲ್ಲಿ ಗೋಲು ದಾಖಲಿಸಲು ಎರಡೂ ತಂಡಗಳಿಗೆ ಸಾಧ್ಯವಾಗಲಿಲ್ಲ.
ಎರಡನೇ ಹೆಚ್ಚುವರಿ ಅವಧಿಯಲ್ಲಿ ಅರ್ಜೆಂಟೀನಾ ತಂಡದ ಲೌಟಾರೊ ಮಾರ್ಟಿನೆಜ್ ಅವರು ಪಂದ್ಯದ ಮೊದಲ ಗೋಲು ಬಾರಿಸಿದರು. ಪಂದ್ಯದ ಒಟ್ಟಾರೆ 112ನೇ ನಿಮಿಷದಲ್ಲಿ ಬಂದ ಈ ಗೋಲು, ಅರ್ಜೆಂಟೀನಾಗೆ ದಾಖಲೆಯ ಪ್ರಶಸ್ತಿ ತಂದುಕೊಟ್ಟಿತು.
ಹೀಗಾಗಿ, 23 ವರ್ಷಗಳ ಬಳಿಕ ಪ್ರಶಸ್ತಿ ಗೆಲ್ಲುವ ಕನಸು ಕಂಡಿದ್ದ ಕೊಲಂಬಿಯಾ ಆಸೆ ಕೈಗೂಡಲಿಲ್ಲ. ಈ ತಂಡ 2001ರಲ್ಲಿ ಮೆಕ್ಸಿಕೊ ತಂಡವನ್ನು 1–0 ಅಂತರದಿಂದ ಮಣಿಸಿ ಮೊದಲ ಸಲ ಚಾಂಪಿಯನ್ ಆಗಿತ್ತು.
ಉರುಗ್ವೆಯನ್ನು ಹಿಂದಿಕ್ಕಿ, ಸ್ಪೇನ್ ದಾಖಲೆ ಸರಿಗಟ್ಟಿದ ಅರ್ಜೆಂಟೀನಾ
ಅರ್ಜೆಂಟೀನಾ ತಂಡ, ಕೊಪಾ ಅಮೆರಿಕ ಫುಟ್‌ಬಾಲ್ ಟೂರ್ನಿಯಲ್ಲಿ ಹೆಚ್ಚು ಸಲ ಚಾಂಪಿಯನ್ ಆದ ಪಟ್ಟಿಯಲ್ಲಿ ಉರುಗ್ವೆಯನ್ನು ಹಿಂದಿಕ್ಕಿತು. ಫೈನಲ್‌ಗೂ ಮುನ್ನ ಉಭಯ ತಂಡಗಳು 15 ಸಲ ಪ್ರಶಸ್ತಿ ಗೆದ್ದಿದ್ದವು.
ಕಳೆದ (2021ರ) ಆವೃತ್ತಿಯ ಫೈನಲ್‌ನಲ್ಲಿ ಬ್ರೆಜಿಲ್ ಎದುರು 1–0 ಅಂತರದ ಗೆಲುವು ಸಾಧಿಸಿದ್ದ ಅರ್ಜೆಂಟೀನಾ, 2022ರಲ್ಲಿ ಫಿಫಾ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು. ಇದೀಗ ಈ ಪಂದ್ಯವನ್ನೂ ಗೆಲ್ಲುವ ಮೂಲಕ ಪ್ರಮುಖ ಟೂರ್ನಿಗಳಲ್ಲಿ ಸತತ ಮೂರು ಪ್ರಶಸ್ತಿ ಗೆದ್ದ ದಾಖಲೆ ನಿರ್ಮಿಸಿದೆ.
ಈ ಹಿಂದೆ ಸ್ಪೇನ್ 2008 ಮತ್ತು 2012ರಲ್ಲಿ ಯುರೋ ಕಪ್ ಹಾಗೂ 2010ರಲ್ಲಿ ವಿಶ್ವಕಪ್ ಗೆದ್ದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.