ADVERTISEMENT

ನೀರು ಕುಡಿಯಿರಿ ಎಂದ ರೊನಾಲ್ಡೊ: ಕೋಕಾ ಕೋಲಾ ಕಂಪನಿಗೆ ₹29 ಸಾವಿರ ಕೋಟಿ ನಷ್ಟ!

ಕೋಕಾ ಕೋಲಾ ಬೇಡ, ನೀರು ಕುಡಿಯಿರಿ ಎಂದು ಹೇಳಿದ ಫುಟ್ಭಾಲ್ ತಾರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜೂನ್ 2021, 11:06 IST
Last Updated 16 ಜೂನ್ 2021, 11:06 IST
ಕ್ರಿಸ್ಟಿಯಾನೋ ರೊನಾಲ್ಡೊ, ಎಎಫ್‌ಪಿ ಚಿತ್ರ
ಕ್ರಿಸ್ಟಿಯಾನೋ ರೊನಾಲ್ಡೊ, ಎಎಫ್‌ಪಿ ಚಿತ್ರ   

ಬೆಂಗಳೂರು: ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಅವರಿಗೆ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳು, ಬೆಂಬಲಿಗರು ಇದ್ದಾರೆ. ಅವರ ಒಂದು ಮಾತಿಗೆ ಅಭಿಮಾನಿಗಳು ಸದಾ ಬೆಂಬಲ ನೀಡುತ್ತಾರೆ.

ಸದ್ಯ ಯುರೋ ಕಫ್ 2020 ಫುಟ್ಬಾಲ್ ಪಂದ್ಯಗಳಲ್ಲಿ ತೊಡಗಿಸಿಕೊಂಡಿರುವ ಅವರು, ನಿನ್ನೆ ಸುದ್ದಿಗೋಷ್ಟಿಯಲ್ಲಿ ನೀಡಿದ ಒಂದೇ ಒಂದು ಸೂಚನೆ ‘ಕೋಲಾ‘ಹಲವನ್ನೇ ಎಬ್ಬಿಸಿದೆ.

ಆಗಿದ್ದೇನು?

ADVERTISEMENT

ಹಂಗೇರಿ–ಪೋರ್ಚುಗಲ್ (ಇ ಗುಂಪು) ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಟಿಯಲ್ಲಿ ಮಾತನಾಡಲು ಬಂದ ರೊನಾಲ್ಡೊ, ಟೇಬಲ್ ಮೇಲೆ ಎರಡು ಕೋಕಾ ಕೋಲಾ ಬಾಟಲ್‌ಗಳನ್ನು ಗಮನಿಸಿದರು. ನಂತರ ಅವುಗಳನ್ನು ದೂರ ಸರಿಸಿ, ಅಲ್ಲಿಯೇ ಇದ್ದ ನೀರಿನ ಬಾಟಲ್ ಎತ್ತಿಕೊಂಡು ‘ನೀರು ಕುಡಿಯಿರಿ, ಆರೋಗ್ಯವಾಗಿರಿ‘ ಎಂದು ಸೂಚನೆ ಕೊಟ್ಟರು.

ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್ ಆಗಿದೆ. ‘ಕಾರ್ಬೋನೆಟೆಡ್ ಸಮ್ಮಿಶ್ರಣದ ಪಾನೀಯಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಆರೋಗ್ಯಕ್ಕಾಗಿ ಹೆಚ್ಚು ನೀರು ಕುಡಿಯಿರಿ‘ ಎಂದು ರೊನಾಲ್ಡೊ ಸೂಚ್ಯವಾಗಿ ಹೇಳಿದ್ದಾರೆ.

ಇದರಿಂದ ಕೋಲಾ ಪಾನೀಯವನ್ನು ಉತ್ಪಾದಿಸುವ ಕೊಕಾ ಕೋಲಾ ಕಂಪನಿಯ ಷೇರು ಕುಸಿದು ಹೋಗಿದೆ. ಮಂಗಳವಾರ ಒಂದೇ ದಿನ ಕಂಪನಿಯ ಷೇರು ಮೌಲ್ಯ ಶೇ 1.6 ರಷ್ಟು ಕುಸಿದಿದೆ. ಅಂದರೆ ಸುಮಾರು 29 ಸಾವಿರ ಕೋಟಿ ರೂಪಾಯಿಯಷ್ಟು ನಷ್ಟ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.

ಯುರೋ ಕಫ್ ಫುಟ್ಬಾಲ್ಪಂದ್ಯಾವಳಿಯಲ್ಲಿ ಕೋಕಾಕೋಲಾ ಕಂಪನಿ ಕೂಡ ಪ್ರಮುಖ ಪ್ರಾಯೋಜಕತ್ವ ವಹಿಸಿದೆ. ಆದರೆ, ರೊನಾಲ್ಡೊ ಅವರು ಕೋಲಾ ಬಿಟ್ಟು ನೀರು ಕುಡಿಯಿರಿ ಎಂದು ಹೇಳಿರುವ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆಯನ್ನು ಕಂಪನಿ ನೀಡಿಲ್ಲ.

ಕೆಲ ಕ್ರೀಡಾ ಹಾಗೂ ಸಿನಿಮಾ ತಾರೆಗಳು ಜಾಹೀರಾತುಗಳ ರಾಯಭಾರಿ ಆಗುವುದಕ್ಕೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತಾರೆ. ಆರೋಗ್ಯಕ್ಕೆ ಹಾನಿ ಮಾಡುವ ಜಾಹೀರಾತುಗಳಿಂದ ದೂರ ಇರುತ್ತಾರೆ. ಈ ನಿಟ್ಟಿನಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಮಾದರಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.