ADVERTISEMENT

ಮೋಡಿ ಮಾಡುವುದೇ ಆತಿಥೇಯ ರಷ್ಯಾ?

ಕ್ವಾರ್ಟರ್‌ಫೈನಲ್‌ ಹಣಾಹಣಿ: ವಿಶ್ವಾಸದಲ್ಲಿ ಕ್ರೊವೇಷ್ಯಾ * ಮಾಡ್ರಿಕ್‌, ಡಿಜುಬಾ ಮೇಲೆ ನಿರೀಕ್ಷೆ

ಏಜೆನ್ಸೀಸ್
Published 6 ಜುಲೈ 2018, 19:48 IST
Last Updated 6 ಜುಲೈ 2018, 19:48 IST
   

ಸೋಚಿ: ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟು ಅಪೂರ್ವ ಹೋರಾಟದ ಮೂಲಕ ಕ್ವಾರ್ಟರ್‌ಫೈನಲ್‌ ಹಂತ ಪ್ರವೇಶಿಸಿರುವ ರಷ್ಯಾ ತಂಡಕ್ಕೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ.

ಶನಿವಾರ ಇಲ್ಲಿನ ಫಿಶ್ತ್‌ ಕ್ರೀಡಾಂಗಣದಲ್ಲಿ ನಡೆಯುವ ಎಂಟರ ಘಟ್ಟದ ಹಣಾಹಣಿಯಲ್ಲಿ ಅದು ಕ್ರೊವೇಷ್ಯಾ ತಂಡವನ್ನು ಎದುರಿಸಲಿದೆ.ರಷ್ಯಾ ತಂಡವೂ ಸ್ಪೇನ್‌ ಎದುರಿನ ಪ್ರೀ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಪೆನಾಲ್ಟಿ ಅವಕಾಶದಲ್ಲಿ ಗೆದ್ದಿತ್ತು. ಸಂಘಟಿತ ಹೋರಾಟ ಮಾಡಿದರೆ ಎಂತಹ ಶಕ್ತ ತಂಡವನ್ನೂಸೋಲಿಸಬಹುದು ಎಂದು ಅದು ಸಾಬೀತುಪಡಿಸಿತ್ತು. ಇದೇ ರೀತಿ ಕ್ರೊವೇಷ್ಯಾ ಸವಾಲನ್ನು ಮೀರಲು ತಂಡ ಸಜ್ಜಾಗಿದೆ.

ಲೀಗ್‌ ಹಂತದಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದು, ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಡೆನ್ಮಾರ್ಕ್‌ ವಿರುದ್ಧ ಪೆನಾಲ್ಟಿ ಅವಕಾಶದಲ್ಲಿ ಜಯ ಸಾಧಿಸಿದ ಕ್ರೊವೇಷ್ಯಾ ತಂಡವು ವಿಶ್ವಾಸದಲ್ಲಿದೆ.

ADVERTISEMENT

1998ರ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದೇ ಕ್ರೊವೇಷ್ಯಾದ ಇಲ್ಲಿಯವರೆಗಿನ ಶ್ರೇಷ್ಠ ಸಾಧನೆ. ದೆವರ್‌ ಸುಕರ್‌, ವೊನಿಮಿರ್‌ ಬೊಬನ್‌ ಹಾಗೂ ರಾಬರ್ಟ್‌ ಪ್ರೊಸೆನೆಕಿ ಅವರಂತಹ ಪ್ರಮುಖ ಆಟಗಾರರ ನೆರವಿನಿಂದ ಆ ಟೂರ್ನಿಯ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಕ್ರೊವೇಷ್ಯಾ ತಂಡವು ಬಲಿಷ್ಠ ಜರ್ಮನಿಯನ್ನು ಮಣಿಸಿತ್ತು. ಈಗ ಲೂಕಾ ಮಾಡ್ರಿಕ್‌, ಇವಾನ್‌ ರಕಿಟಿಕ್‌ ಅವರಂತಹ ಯುವ ಪಡೆಯ ಬಲದೊಂದಿಗೆ ಆತಿಥೇಯ ರಾಷ್ಟ್ರವನ್ನು ಮಣಿಸಲು ಅದು ಸಿದ್ಧವಾಗಿದೆ.

ರಷ್ಯಾ ತಂಡದ ಮಿಡ್‌ಫೀಲ್ಡ್‌ ಹಾಗೂ ಮುಂಚೂಣಿ ವಿಭಾಗದ ಆಟಗಾರರು ಇಲ್ಲಿಯವರೆಗೂ ಉತ್ತಮ ಸಾಮರ್ಥ್ಯ ತೋರಿದ್ದಾರೆ. ಆದರೆ, ರಕ್ಷಣಾ ವಿಭಾಗದ ಆಟಗಾರರು ಗೋಲು ತಡೆಯುವ ಉತ್ತಮ ಅವಕಾಶಗಳನ್ನು ಕೈಚೆಲ್ಲಿದ್ದಾರೆ. ಇದೇ ಕಾರಣದಿಂದ ರಕ್ಷಣಾ ವಿಭಾಗದ ವೈಫಲ್ಯ ತಲೆನೋವಾಗಿ ಪರಿಣಮಿಸಿದೆ.

ತಂಡದ ಅರ್ಟೆಮ್‌ ಡಿಜುಬಾ ಹಾಗೂ ಡೆನಿಸ್‌ ಚೆರಿಶೇವ್‌ ಅವರು ಇಲ್ಲಿಯವರೆಗಿನ ತಲಾ ಮೂರು ಗೋಲುಗಳನ್ನು ಗಳಿಸಿದ್ದಾರೆ. ಇಬ್ಬರೂ ಈ ಪಂದ್ಯದ ಪ್ರಮುಖ ಆಕರ್ಷಣೆ. ತಮ್ಮ ಅಮೋಘ ಪಾಸಿಂಗ್‌ ಹಾಗೂ ಚೆಂಡನ್ನು ನೆಟ್‌ನೊಳಗೆ ಸೇರಿಸುವ ಚುರುಕು ಆಟದಿಂದ ಅವರು ಗಮನಸೆಳೆದಿದ್ದಾರೆ.

ಕ್ರೊವೇಷ್ಯಾ ತಂಡವು ಎಲ್ಲ ವಿಭಾಗಗಳಲ್ಲಿ ಉತ್ತಮ ಸಾಮರ್ಥ್ಯ ಮೆರೆದಿದೆ. ಮಾರಿಯೊ ಮಂಡ್‌ಜುಕಿಕ್‌, ಲೂಕಾ ಮಾಡ್ರಿಕ್‌, ಇವಾನ್‌ ರಕಿಟಿಕ್‌ ಅವರ ಮೇಲೆ ಕ್ರೊವೇಷ್ಯಾ ಅಭಿಮಾನಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮಿಡ್‌ಫೀಲ್ಡ್‌ ವಿಭಾಗದ ಪ್ರಮುಖ ಆಟಗಾರರಾಗಿ ಹೊರಹೊಮ್ಮಿರುವ ಲೂಕಾ ಅವರು ಎರಡು ಬಾರಿ ಚೆಂಡನ್ನು ಗುರಿ ಮುಟ್ಟಿಸಿದ್ದಾರೆ.

ಪ್ರಮುಖ ಮಾಹಿತಿ:

*ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದ, ಹಿಂದಿನ ಐದು ವಿಶ್ವಕಪ್‌ಗಳ ಆತಿಥ್ಯ ವಹಿಸಿದ್ದ ರಾಷ್ಟ್ರಗಳು ಎಂಟರ ಘಟ್ಟದ ಹಣಾಹಣಿಯಲ್ಲಿ ಗೆದ್ದು ಸೆಮಿಫೈನಲ್‌ ಪ್ರವೇಶಿಸಿವೆ.

* ಮೊದಲೆರೆಡು ಪಂದ್ಯಗಳಲ್ಲಿ ರಷ್ಯಾ ತಂಡವು 10 ಬಾರಿನಿಕಟವಾಗಿ ಚೆಂಡನ್ನು ಗುರಿಯತ್ತ ಸೇರಿಸುವ ಪ್ರಯತ್ನ ಮಾಡಿದೆ. ಆಡಿದ ಹಿಂದಿನ ಎರಡು ಪಂದ್ಯಗಳಲ್ಲಿ ಕೇವಲ 2 ಬಾರಿ ನಿಕಟ ಪ್ರಯತ್ನಗಳನ್ನು ಮಾಡಿದೆ.

* ವಿಶ್ವಕಪ್‌ನಲ್ಲಿ ಗಳಿಸಿದ ಕಳೆದ 12 ಗೋಲುಗಳಲ್ಲಿ 10 ಗೋಲುಗಳನ್ನು ಕ್ರೊವೇಷ್ಯಾ ತಂಡವು ದ್ವಿತೀಯಾರ್ಧದಲ್ಲಿ ದಾಖಲಿಸಿರುವುದು ವಿಶೇಷ.

*
ನಮ್ಮ ತಂಡವು ಎಲ್ಲ ವಿಭಾಗಗಳಲ್ಲಿ ಗುಣಮಟ್ಟ ಹೊಂದಿದೆ. ವಿಶ್ವಕಪ್‌ ಎತ್ತಿಹಿಡಿಯುವ ದೊಡ್ಡ ಕನಸನ್ನು ನನಸು ಮಾಡಿಕೊಳ್ಳುವ ಸಾಮರ್ಥ್ಯ ನಮಗಿದೆ.
–ಆ್ಯಂಟೆ ರೆಬಿಕ್‌, ಕ್ರೊವೇಷ್ಯಾ ತಂಡದ ಆಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.