ಕೋಲ್ಕತ್ತ: ಡೇವಿಡ್ ಲಾಲನ್ಸಂಗ ಅವರ ಆಟದ ಬಲದಿಂದ ಮೊಹಮ್ಮದನ್ ಸ್ಪೋರ್ಟಿಂಗ್ ತಂಡವು ಡುರಾಂಡ್ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ 2–1ರಿಂದ ಇಂಡಿಯನ್ ನೇವಿ ತಂಡವನ್ನು ಮಣಿಸುವ ಮೂಲಕ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತು.
ಶುಕ್ರವಾರ ನಡೆದ ಪಂದ್ಯದಲ್ಲಿ ಡೇವಿಡ್ 50ನೇ ನಿಮಿಷದಲ್ಲಿ ಅವರು ಗೋಲು ಗಳಿಸುವ ಮೂಲಕ ಮೊಹಮ್ಮದನ್ ತಂಡಕ್ಕೆ ಮುನ್ನಡೆ ಒದಗಿಸಿದರು. ನಂತರ 69ನೇ ನಿಮಿಷದಲ್ಲಿ ಡೇವಿಡ್ ಪೂರೈಸಿದ ಚೆಂಡನ್ನು ಮಿಜೋರಾಂನ ಲಾಲ್ರೆಮ್‌ಸಂಗ ಫನೈ ಅವರು ಗುರಿ ಸೇರಿಸುವ ಮೂಲಕ ತಂಡದ ಗೋಲನ್ನು ದ್ವಿಗುಣಗೊಳಿಸಿದರು.
90+7ನೇ ನಿಮಿಷದಲ್ಲಿ ಇಂಡಿಯನ್ ನೇವಿ ತಂಡದ ಪಿ.ಎಂ. ಬಿಟ್ಟೊ ಅವರು ಗೋಲು ಗಳಿಸುವ ಮೂಲಕ ಸೋಲಿನ ಅಂತರವನ್ನು ತಗ್ಗಿಸಿದರು.
ಕೊಕ್ರಜಾರ್: ಮತ್ತೊಂದು ಪಂದ್ಯದಲ್ಲಿ ಒಡಿಶಾ ಎಫ್.ಸಿ ತಂಡವು 2–1ರಿಂದ ರಾಜಸ್ಥಾನ ಯುನೈಟೆಡ್ ಎಫ್.ಸಿ ತಂಡವನ್ನು ಸೋಲಿಸಿ, ಟೂರ್ನಿಯಲ್ಲಿ ಮೊದಲ ಜಯ ತನ್ನದಾಗಿಸಿಕೊಂಡಿತು.
ಒಡಿಶಾದ ಚಂದ್ರಮೋಹನ ಮುರ್ಮು ಅವರು 48ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿದರು. ಆದರೆ, ಅದಾದ ಮೂರೇ ನಿಮಿಷಕ್ಕೆ ರಾಜಸ್ಥಾನದ ರಿಚರ್ಡ್ಸನ್ ಡೆನ್ಜೆಲ್ (51ನೇ) ಚೆಂಡನ್ನು ಗುರಿ ಸೇರಿಸುವ ಮೂಲಕ ಗೋಲನ್ನು ಸಮಬಲ ಗೊಳಿಸಿದರು. ನಂತರದಲ್ಲಿ ಅಫೌಬಾ ಸಿಂಗ್ (64ನೇ) ಗೋಲು ತಂದಿತ್ತು, ಒಡಿಶಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.