ಕೋಲ್ಕತ್ತ: ಪ್ರಬಲ ಮೋಹನ್ ಬಾಗನ್ ತಂಡ, ಡುರಾಂಡ್ ಕಪ್ ಫುಟ್‌ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶನಿವಾರ ನಾರ್ತ್ ಈಸ್ಟ್ ಯುನೈಟೆಡ್ ಎಫ್‌ಸಿ ತಂಡವನ್ನು ಎದುರಿಸಲಿದ್ದು, ದಾಖಲೆಯ 18ನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ನಾರ್ತ್‌ಈಸ್ಟ್ ಯುನೈಟೆಡ್ ಇದೇ ಮೊದಲ ಬಾರಿ ಫೈನಲ್ ತಲುಪಿದೆ.
ಸೆಮಿಫೈನಲ್ ಪಂದ್ಯದ ವೇಳೆ ಗಾಯಾಳಾಗಿರುವ ಸುಭಾಶಿಶ್ ಬೋಸ್ ಅವರ ಅಲಭ್ಯತೆ ಕೋಲ್ಕತ್ತದ ತಂಡಕ್ಕೆ ರಕ್ಷಣಾ ವಿಭಾಗದಲ್ಲಿ ಒಂದಿಷ್ಟು ಚಿಂತೆ ಮೂಡಿಸಿದೆ. ಆದರೆ ಇದು ಗೆಲುವಿಗೆ ಅಡ್ಡಿಬರದು ಎಂಬ ವಿಶ್ವಾಸವನ್ನೂ ಹೊಂದಿದೆ. ಗುಂಪು ಹಂತದಲ್ಲಿ ಒಂದೂ ಗೋಲು ಬಿಟ್ಟುಕೊಡದ ದಾಖಲೆ ಹೊಂದಿದ್ದ ಬಾಗನ್ ಸೆಮಿಫೈನಲ್‌ನಲ್ಲಿ ಬೆಂಗಳೂರು ಎಫ್‌ಸಿ ವಿರುದ್ಧ 0–2 ಗೋಲಿನಿಂದ ಪುಟಿದೆದ್ದು, ಟೈಬ್ರೇಕರ್‌ನಲ್ಲಿ ಪಂದ್ಯ ಗೆದ್ದಿತ್ತು.
ಟೈಬ್ರೇಕರ್‌ನಲ್ಲಿ ಗೋಲ್‌ಕೀಪರ್ ವಿಶಾಲ್ ಕೈತ್ ಅವರ ಅಮೋಘ ನಿರ್ವಹಣೆ ಬೆಂಗಳೂರಿನ ಗೆಲುವಿನ ಕನಸನ್ನು ಭಗ್ನಗೊಳಿಸಿತು.
ಜಾನ್ ಅಬ್ರಹಾಂ ಮಾಲೀಕತ್ವದ ನಾರ್ತ್‌ಈಸ್ಟ್ ತಂಡ ಇನ್ನೊಂದು ಸೆಮಿಫೈನಲ್‌ನಲ್ಲಿ ಶಿಲ್ಲಾಂಗ್ ಲಾಜೊಂಗ್ ಎಫ್‌ಸಿ ಮೇಲೆ 3–0 ಜಯಗಳಿಸಿದ್ದು, ಬಾಗನ್ ರಕ್ಷಣೆಯ ದೌರ್ಬಲ್ಯದ ಲಾಭಪಡೆಯುವ ಯೋಚನೆಯಲ್ಲಿದೆ. ಗುಂಪು ಹಂತದಲ್ಲಿ ಈ ತಂಡ 10 ಗೋಲುಗಳನ್ನು ಗಳಿಸಿದ್ದು, ಒಂದು ಗೋಲು ಮಾತ್ರ ಬಿಟ್ಟುಕೊಟ್ಟಿತ್ತು.
ಬಾಗನ್, ನಾರ್ತ್‌ಈಸ್ಟ್ ವಿರುದ್ಧ 7–2 ಗೆಲುವಿನ ದಾಖಲೆ ಹೊಂದಿದೆ. ಒಂದು ಪಂದ್ಯ ಡ್ರಾ ಆಗಿದೆ.
ಪಂದ್ಯ ಆರಂಭ: ಸಂಜೆ 5.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.