ADVERTISEMENT

ಇಂಡಿಯನ್ ಸೂಪರ್ ಲೀಗ್: ಸೋಲಿನ ಸರಪಳಿ ಕಳಚುವುದೇ ಬೆಂಗಾಲ್‌

ಇಂದು ಜಮ್ಶೆಡ್‌ಪುರ ಎದುರಾಳಿ

ಪಿಟಿಐ
Published 9 ಡಿಸೆಂಬರ್ 2020, 12:05 IST
Last Updated 9 ಡಿಸೆಂಬರ್ 2020, 12:05 IST
ಜಮ್ಶೆಡ್‌ಪುರ ಎಫ್‌ಸಿ ತಂಡದ ನೆರಿಜಸ್ ವಲ್ಸಕಿಸ್‌–ಪಿಟಿಐ ಚಿತ್ರ
ಜಮ್ಶೆಡ್‌ಪುರ ಎಫ್‌ಸಿ ತಂಡದ ನೆರಿಜಸ್ ವಲ್ಸಕಿಸ್‌–ಪಿಟಿಐ ಚಿತ್ರ   

ವಾಸ್ಕೊ: ಎಸ್‌ಸಿ ಈಸ್ಟ್ ಬೆಂಗಾಲ್‌ ಇನ್ನೂ ಗೆಲುವಿನ ಖಾತೆ ತೆರೆಯದಿರುವುದು ತಂಡದ ಕೋಚ್‌ ರಾಬಿ ಫಾವ್ಲರ್‌ ಅವರ ತಲೆನೋವಿಗೆ ಕಾರಣವಾಗಿದೆ. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್‌ ಟೂರ್ನಿಯಲ್ಲಿ ಗುರುವಾರ ಜಮ್ಶೆಡ್‌ಪುರ ಎಫ್‌ಸಿಯನ್ನು ಆ ತಂಡ ಎದುರಿಸಲಿದ್ದು, ಮೂರು ಪಂದ್ಯಗಳ ಸೋಲಿನ ಸರಪಳಿಯನ್ನು ಕಳಚುವ ವಿಶ್ವಾಸದಲ್ಲಿದೆ.

11 ತಂಡಗಳ ಟೂರ್ನಿಯಲ್ಲಿ ಇದುವರೆಗೆ ಒಂದೂ ಜಯ ಕಾಣದ ತಂಡವೆಂದರೆ ಈಸ್ಟ್ ಬೆಂಗಾಲ್ ಮಾತ್ರ. ಫಾರ್ವರ್ಡ್‌ ವಿಭಾಗದಲ್ಲಿ ಉತ್ತಮ ಆಟಗಾರರ ಕೊರತೆಯಿಂದ ಬಳಲುತ್ತಿರುವ ಆ ತಂಡದ ಡಿಫೆನ್ಸ್ ವಿಭಾಗವೂ ಹೇಳಿಕೊಳ್ಳುವಷ್ಟು ಗಟ್ಟಿಯಾಗಿಲ್ಲ. ನಾಯಕ ಹಾಗೂ ಡಿಫೆನ್ಸ್ ವಿಭಾಗದ ಪ್ರಮುಖ ಆಟಗಾರ ಡೇನಿಯಲ್‌ ಫಾಕ್ಸ್ ಗಾಯಗೊಂಡಿರುವುದೂ ತಂಡದ ಚಿಂತೆಗೆ ಕಾರಣವಾಗಿದೆ.

‘ಟೂರ್ನಿಯ ಎಲ್ಲ ಪಂದ್ಯಗಳ ಹಾಗೇ ಈ ಪಂದ್ಯದಲ್ಲೂ ಕೂಡ ಕಠಿಣ ಸವಾಲು ಎದುರಾಗಲಿದೆ. ನಮ್ಮಲ್ಲಿ ಉತ್ತಮ ಆಟಗಾರರಿದ್ದಾರೆ. ಆದರೆ ಅವಕಾಶಗಳನ್ನು ಸೃಷ್ಟಿಸಿಕೊಂಡು, ಗೋಲುಗಳಾಗಿ ಪರಿವರ್ತಿಸಬೇಕು. ಡಿಫೆನ್ಸ್ ವಿಭಾಗವೂ ಸ್ವಲ್ಪ ಸುಧಾರಿಸಬೇಕು‘ ಎಂದು ಈಸ್ಟ್ ಬೆಂಗಾಲ್ ತಂಡದ ಮಿಡ್‌ಫೀಲ್ಡರ್‌ ಜಾಕ್ವೆಸ್‌ ಮಗೋಮಾ ಹೇಳಿದ್ದಾರೆ.

ADVERTISEMENT

ಲಿಥುವೇನಿಯಾ ಆಟಗಾರ ನೆರಿಜಸ್ ವಲ್ಸಕಿಸ್‌ ಅವರ ಗಳಿಸಿದ ಎರಡು ಗೋಲುಗಳ ಬಲದಿಂದ ಜಮ್ಶೆಡ್‌ಪುರ ಎಫ್‌ಸಿ ತಂಡವು ಕಳೆದ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್‌ ತಂಡವನ್ನು ಮಣಿಸಿತ್ತು. ಟೂರ್ನಿಯಲ್ಲಿ ಮೊದಲ ಜಯ ದಾಖಲಿಸಿದೆ.

ಕೋಚ್‌ ಓವೆನ್‌ ಕೊಯ್ಲೆ ಮಾರ್ಗದರ್ಶನದಲ್ಲಿ ಪಳಗಿರುವ ಜಮ್ಶೆಡ್‌ಪುರ ಎಫ್‌ಸಿ, ಎಟಿಕೆಎಂಬಿ ತಂಡದ ಮೂರು ಪಂದ್ಯಗಳ ಗೆಲುವಿನ ಸರಪಳಿಯನ್ನು ತುಂಡರಿಸಿತ್ತು. ಆ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೇರಿತ್ತು. ಹೀಗಾಗಿ ಆ ತಂಡದ ಆತ್ಮವಿಶ್ವಾಸ ವೃದ್ಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.