ADVERTISEMENT

ಡುರಾಂಡ್‌ ಕಪ್: ಬಿಎಫ್‌ಸಿ ಶುಭಾರಂಭ

ನೇವಿ ತಂಡದ ಮೇಲೆ 4–0 ಜಯ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 22:33 IST
Last Updated 31 ಜುಲೈ 2024, 22:33 IST
<div class="paragraphs"><p>ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ಕೋಲ್ಕತ್ತ: ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ತಂಡ, 133ನೇ ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಬುಧವಾರ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಬೆಂಗಳೂರಿನ ತಂಡ 4–0 ಗೋಲುಗಳಿಂದ ಇಂಡಿಯನ್‌ ನೇವಿ ಎಫ್‌ಟಿ ತಂಡವನ್ನು ಮಣಿಸಿತು.

ಬಿಎಫ್‌ಸಿಯ ಹೊಸ ಕೋಚ್‌, ಸ್ಪೇನ್‌ನ ಜೆರಾರ್ಡ್‌ ಜಾರಗೋಝಾ ಅವರು ಶಿವಶಕ್ತಿ ನಾರಾಯಣನ್ ಮತ್ತು ಆಸ್ಟ್ರೇಲಿಯಾದ ರಯಾನ್ ವಿಲಿಯಮ್‌ ಅವರನ್ನು ಮುಂಚೂಣಿಯಲ್ಲಿ ಆಡಿಸಿದರು. ಸುನಿಲ್ ಚೆಟ್ರಿ ಮತ್ತು ಹೊಸದಾಗಿ ಸೇರಿದ ಜಾರ್ಗೆ ಪೆರಿರಾ ಡಯಾಝ್ ಅವರನ್ನು ಆರಂಭದಲ್ಲೇ ಕಣಕ್ಕಿಳಿಸಲಿಲ್ಲ.

ADVERTISEMENT

ಭಾರತ ತಂಡದ ಆಟಗಾರ ರಾಹುಲ್ ಭೆಕೆ, ಬಿಎಫ್‌ಸಿ ಪರ 10ನೇ ನಿಮಿಷ ಮೊದಲ ಗೋಲು ಗಳಿಸಿದರು. ಆಲ್ಬರ್ಟೊ ನೊಗುವೆರಾ ಅವರ ಕಾರ್ನರ್‌ನಲ್ಲಿ ಅವರು ಎದುರಾಳಿ ತಂಡದ ಗೋಲ್‌ಕೀಪರ್‌ ವಿಷ್ಣು ಅವರನ್ನು ವಂಚಿಸಿ ಚೆಂಡನ್ನು ಹೆಡ್‌ ಮಾಡಿದರು.

ಜಾರಗೋಝಾ ಅವರು ಮೊದಲ ಬದಲಾವಣೆ ಆಗಿ ಚೆಟ್ರಿ ಅವರನ್ನು ಕಣಕ್ಕಿಳಿಸಿದರು. ವಿರಾಮಕ್ಕೆ ಮೂರು ನಿಮಿಷಗಳಿರುವಾಗ ನವಜೋತ್‌ ಅವರ ಫೌಲ್‌ನಿಂದಾಗಿ ದೊರೆತ ‘ಪೆನಾಲ್ಟಿ’ ಅವಕಾಶವನ್ನು ಚೆಟ್ರಿ ಗೋಲಾಗಿ ಪರಿವರ್ತಿಸಿದರು.

ಉತ್ತರಾರ್ಧದಲ್ಲೂ ಬೆಂಗಳೂರು ಮೇಲುಗೈ ವಹಿಸಿತು. ಪೆರೀರಾ ಡಯಾಜ್ 80ನೇ ನಿಮಿಷ ಅಂತರ ಹೆಚ್ಚಿಸಿದರು. ಇಂಜುರಿ ಅವಧಿಯಲ್ಲಿ (90+1) ಅವರು ಮತ್ತೊಂದು ಗೋಲನ್ನು ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.