ADVERTISEMENT

ಯುರೊ ಕಪ್‌ ಪ್ರಿಕ್ವಾರ್ಟರ್‌ಫೈನಲ್: ಇಟಲಿಗೆ ಇಂದು ಸ್ವಿಜರ್ಲೆಂಡ್‌ ಸವಾಲು

ಏಜೆನ್ಸೀಸ್
Published 28 ಜೂನ್ 2024, 20:22 IST
Last Updated 28 ಜೂನ್ 2024, 20:22 IST
<div class="paragraphs"><p>ಯುರೊ ಕಪ್‌ ಫುಟ್‌ಬಾಲ್‌ </p></div>

ಯುರೊ ಕಪ್‌ ಫುಟ್‌ಬಾಲ್‌

   

ಬರ್ಲಿನ್‌: ಹಾಲಿ ಚಾಂಪಿಯನ್ ಇಟಲಿ ತಂಡವು, ಯುರೊ 2024 ಫುಟ್‌ಬಾಲ್‌ ಟೂರ್ನಿಯ ಮೊದಲ ಪ್ರಿಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಶನಿವಾರ ಸ್ವಿಜರ್ಲೆಂಡ್‌ ತಂಡವನ್ನು ಎದುರಿಸಲಿದ್ದು, ಆ ತಂಡದ ವಿರುದ್ಧ ಪ್ರಾಬಲ್ಯವನ್ನು ಮುಂದುವರಿಸುವ ಗುರಿ ಹೊಂದಿದೆ. 31 ವರ್ಷಗಳಿಂದ ಸ್ವಿಜರ್ಲೆಂಡ್‌ ಒಮ್ಮೆಯೂ ಇಟಲಿ ತಂಡವನ್ನು ಸೋಲಿಸಿಲ್ಲ.

ಒಟ್ಟಾರೆ ಈ ಎರಡು ತಂಡಗಳು ಇದುವರೆಗೆ 61 ಬಾರಿ ಮುಖಾಮುಖಿ ಆಗಿದ್ದು ಸ್ವಿಸ್‌ ತಂಡ ಗೆದ್ದಿದ್ದು ಬರೇ ಎಂಟು ಸಲ. ಆದರೆ ಈ ವರ್ಷ  ಸ್ವಿಜರ್ಲೆಂಡ್ ತಂಡ ಅಜೇಯ ಸಾಧನೆ ಪ್ರದರ್ಶಿಸಿದೆ. ಕಳೆದ ವರ್ಷ ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ ಸೋತ ನಂತರ ಅದು ಹಿನ್ನಡೆ ಕಂಡಿಲ್ಲ.

ADVERTISEMENT

ಈ ಕ್ರೀಡಾಂಗಣ ಇಟಲಿ ಪಾಲಿಗೆ ಸವಿನೆನಪಿನ ಬುತ್ತಿ. 2006ರ ವಿಶ್ವಕಪ್‌ನಲ್ಲಿ ಇಲ್ಲಿನ ಒಲಿಂಪಿಯಾ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಇಟಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವನ್ನು ಸೋಲಿಸಿತ್ತು.

ಆದರೆ ಈ ಬಾರಿಯ ಆವೃತ್ತಿಯಲ್ಲಿ ಇಟಲಿಯ ಆಟ ಉತ್ಕೃಷ್ಟ ಮಟ್ಟದಲ್ಲಿಲ್ಲ. ‘ಬಿ’ ಗುಂಪಿನಲ್ಲಿ ಅಲ್ಬೇನಿಯಾ ವಿರುದ್ಧ 2–1ರಲ್ಲಿ ಗೆದ್ದರೂ, ಕೇವಲ 23 ಸೆಕೆಂಡುಗಳಲ್ಲಿ ಅದು ಗೋಲು ಬಿಟ್ಟುಕೊಟ್ಟಿತ್ತು. ನಂತರ ಸ್ಪೇನ್‌ಗೆ ಮಣಿದಿತ್ತು. ಕ್ರೊವೇಷ್ಯಾ ವಿರುದ್ಧ 1–1 ಡ್ರಾ ಮಾಡಲು ಬೆವರುಹರಿಸಬೇಕಾಯಿತು.

ಸ್ವಿಜರ್ಲೆಂಡ್‌ ‘ಎ’ ಗುಂಪಿನಲ್ಲಿ 3–1 ರಿಂದ ಹಂಗರಿ ವಿರುದ್ಧ ಜಯಗಳಿಸಿದ ನಂತರ, ಸ್ಕಾಟ್ಲೆಂಡ್ ಮತ್ತು ಆತಿಥೇಯ ಜರ್ಮನಿ ವಿರುದ್ಧ ಪಂದ್ಯಗಳನ್ನು 1–1 ರಲ್ಲಿ ಡ್ರಾ ಮಾಡಿಕೊಂಡಿತ್ತು.

ಜರ್ಮನಿ–ಡೆನ್ಮಾರ್ಕ್ ಹಣಾಹಣಿ:

ಆತಿಥೇಯ ಜರ್ಮನಿ ತಂಡ ಡೋರ್ಟ್‌ಮುಂಡ್‌ನಲ್ಲಿ ಭಾನುವಾರ ನಡೆಯಲಿರುವ ಯುರೊ 2024 ಫುಟ್‌ಬಾಲ್ ಟೂರ್ನಿಯ ಪ್ರಿಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಡೆನ್ಮಾರ್ಕ್ ತಂಡವನ್ನು ಎದುರಿಲಿದೆ.

‌ವಿಶೇಷವೆಂದರೆ ಈ ಬಾರಿಯ ಟೂರ್ನಿಯಲ್ಲಿ ಜರ್ಮನಿ ಮತ್ತು ಡೆನ್ಮಾರ್ಕ್ ಮಾತ್ರ ಅಜೇಯವಾಗುಳಿದಿವೆ. ಜರ್ಮನಿ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿತ್ತು. ಅದು ಸ್ಕಾಟ್ಲೆಂಡ್‌, ಹಂಗರಿ ತಂಡಗಳನ್ನು ಸೋಲಿಸಿ, ಸ್ವಿಜರ್ಲೆಂಡ್‌ ವಿರುದ್ಧ ಡ್ರಾ ಮಾಡಿಕೊಂಡಿತ್ತು. ಇನ್ನೊಂದೆಡೆ ಡೆನ್ಮಾರ್ಕ್ ‘ಡಿ’ ಗುಂಪಿನಿಂದ ನಾಕೌಟ್‌ಗೇರಿತ್ತು. ಅದು ಸ್ಲೊವೇನಿಯಾ, ಇಂಗ್ಲೆಂಡ್‌ ಮತ್ತು ಸರ್ಬಿಯಾ ವಿರುದ್ಧ ಮೂರೂ ಪಂದ್ಯಗಳನ್ನು ‘ಡ್ರಾ’ ಮಾಡಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.