ಮಡಗಾಂವ್ : ರಾಷ್ಟ್ರೀಯ ಕೋಚ್ ಮನೊಲೊ ಮಾರ್ಕ್ವೆಝ್ ಅವರ ಗರಡಿಯಲ್ಲಿರುವ ಎಫ್‌ಸಿ ಗೋವಾ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಪಂದ್ಯದಲ್ಲಿ ಶನಿವಾರ ಬೆಂಗಳೂರು ಎಫ್‌ಸಿ ತಂಡವನ್ನು 3–0 ಗೋಲುಗಳಿಂದ ಸೋಲಿಸಿತು. ಇದು ಹಾಲಿ ಲೀಗ್‌ನಲ್ಲಿ ಬೆಂಗಳೂರಿನ ತಂಡಕ್ಕೆ ಮೊದಲ ಸೋಲು.
ಗೋವಾ ಪರ ಅರ್ಮಾಂಡೊ ಸಾದಿಕು ಮತ್ತೆ ಮಿಂಚಿದರು. 63ನೇ ನಿಮಿಷ ಪಂದ್ಯದ ಮೊದಲ ಗೋಲು ಗಳಿಸಿದ ಅವರು ಮತ್ತೊಂದು ಗೋಲಿಗೆ ಸಹಾಯಹಸ್ತ ನೀಡಿದರು. 72ನೇ ನಿಮಿಷ ಬ್ರಿಸನ್ ಫೆರ್ನಾಂಡಿಸ್ ಮತ್ತು 90+3ನೇ ನಿಮಿಷ ಡೆಜಾನ್ ಡ್ರಾಝಿಕ್ ಅವರು ಗೋವಾದ ಗೋಲುಗಳನ್ನು ಗಳಿಸಿದರು.
ಡೆಜಾನ್ ಡ್ರಾಝಿಕ್ ಮತ್ತು ಯುವ ಮಿಡ್‌ಫೀಲ್ಡರ್ ಆಯುಷ್ ದೇವ್ ಚೆಟ್ರಿ ಅವರು ಚುರುಕಾದ ಓಡಾಟದಿಂದ ಬೆಂಗಳೂರು ಎಫ್‌ಸಿ ತಂಡದ ಡಿಫೆಂಡರ್‌ಗಳಿಗೆ ಸಾಕಷ್ಟು ತಲೆನೋವಿಗೆ ಕಾರಣರಾದರು. ಮೊದಲಾರ್ಧದಲ್ಲಿ ಬಿಎಫ್‌ಸಿ ಗೋಲ್‌ಕೀಪರ್ ಗುರುಪ್ರೀತ್ ಸಂಧು ಅವರು ಅವರು ಎದುರಾಳಿಗೆ ತಡೆಗೋಡೆಯಾದರು.
ಗಾಯದಿಂದ ಚೇತರಿಸಿ ತಂಡಕ್ಕೆ ಮರಳಿದ ಸಂದೇಶ್ ಜಿಂಗಾನ್ ಕೂಡ ಮಿಂಚಿದರು. ಅವರು ಎಡ್ಗರ್ ಮೆಂಡೆಝ್ ಜೊತೆಗೂಡಿ ಸುನಿಲ್ ಚೆಟ್ರಿ ಪಡೆಯ ಹಲವು ಅವಕಾಶಗಳನ್ನು ತಡೆದರು. ಗೋವಾ ಎಫ್‌ಸಿಗೆ ಅಗತ್ಯವಾಗಿದ್ದ ರಕ್ಷಣಾ ಬಲ ಜಿಂಗಾನ್ ಅವರಿಂದ ದೊರೆಯಿತು.
63ನೇ ನಿಮಿಷ ಮೊಹಮದ್ ಯಾಸಿರ್ ಅವರು ಬಿಎಫ್‌ಸಿ ಬಾಕ್ಸ್‌ನಲ್ಲಿ ಕಾಯುತ್ತಿದ್ದ ಸಾದಿಕು ಅವರಿಗೆ ಕ್ರಾಸ್ ನೀಡಿದರು. ಅಲ್ಬೇನಿಯಾದ ಸಾದಿಕು ಈ ಅವಕಾಶದಲ್ಲಿ ಎಡವದೇ ತಂಡಕ್ಕೆ ಮುನ್ನಡೆ ಒದಗಿಸಿದರು. ಸಮೀಪದಿಂದ ನಡೆಸಿದ ಗೋಲು ಯತ್ನವನ್ನು ತಡೆಯುವ ಅವಕಾಶ ಗುರುಪ್ರೀತ್‌ಗೆ ಇರಲಿಲ್ಲ.
ಬಿಸನ್ ಮತ್ತೊಂದು ಅವಕಾಶದಲ್ಲಿ ಸಾಕಷ್ಟುದೂರದಿಂದ ಹೊಡೆದ ಚೆಂಡು ರಾಹುಲ್ ಭೆಕೆ ಸೇರಿದಂತೆ ಬಿಎಫ್‌ಸಿಯ ರಕ್ಷಣಾ ಆಟಗಾರರಿಗೆ ಅಚ್ಚರಿ ಮೂಡಿಸುವಂತೆ ನೇರವಾಗಿ ಗೋಲಿನೊಳಕ್ಕೆ ನುಗ್ಗಿ ಎಫ್‌ಸಿ ಗೋವಾ 2–0 ಮುನ್ನಡೆ ಸಾಧಿಸಿತು.
ಮನೊಲೊ ಅವರು 79ನೇ ನಿಮಿಷ ಇಕರ್ ಗಾರೊಟ್‌ಕ್ಸೇನಾ ಅವರನ್ನು ಕಣಕ್ಕಿಳಿಸಿದರು. ಸ್ಪೇನ್‌ನ ಆಟಗಾರ ನಿರಾಸೆ ಮೂಡಿಸಲಿಲ್ಲ. ಅವರು ಡೆಜಾನ್ ಜೊತೆಗೆ ಸಮನ್ವಯ ಸಾಧಿಸಿದರು. ಈ ಮಧ್ಯೆ ಡೆಜಾನ್ ಗೋವಾದ ಮೂರನೇ ಗೋಲನ್ನು ಗಳಿಸಿದರು.
ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಅವಕಾಶಗಳು ಇರಲಿಲ್ಲವೆಂದಲ್ಲ. ಅದರೆ ಸುವರ್ಣಾವಕಾಶ ಎಂಬುದು ದಕ್ಕಲಿಲ್ಲ.
ಇದು ಏಳು ಪಂದ್ಯಗಳಲ್ಲಿ ಗೋವಾಕ್ಕೆ ಎರಡನೇ ಜಯ. ಬಿಎಫ್‌ಸಿಗೆ ಏಳು ಪಂದ್ಯಗಳಲ್ಲಿ ಇದು ಮೊದಲ ಸೋಲು. ಇದಕ್ಕೆ ಮೊದಲು ಐದು ಗೆದ್ದು, ಒಂದು ಡ್ರಾ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.