ಅಬುಧಾಬಿ: ಲೂಕಾ ಮಾಡ್ರಿಚ್, ಮಾರ್ಕಸ್ ಲೊರೆಂಟ್ ಮತ್ತು ಸರ್ಜಿಯೊ ರಾಮೊಸ್ ಅವರ ಮಿಂಚಿನ ಆಟದ ನೆರವಿನಿಂದ ರಿಯಲ್ ಮ್ಯಾಡ್ರಿಡ್ ತಂಡ ಫಿಫಾ ಕ್ಲಬ್ ವಿಶ್ವಕಪ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದೆ.
ಜಾಯೆದ್ ಸ್ಪೋರ್ಟ್ಸ್ ಸಿಟಿ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಫೈನಲ್ ಹಣಾಹಣಿಯಲ್ಲಿ ರಿಯಲ್ ಮ್ಯಾಡ್ರಿಡ್ 4–1 ಗೋಲುಗಳಿಂದ ಆತಿಥೇಯ ಅಲ್ ಅಯಿನ್ ತಂಡವನ್ನು ಪರಾಭವಗೊಳಿಸಿತು.
ಬಲಿಷ್ಠ ಆಟಗಾರರನ್ನು ಹೊಂದಿದ್ದ ರಿಯಲ್ ಮ್ಯಾಡ್ರಿಡ್ ತಂಡಕ್ಕೆ ಪಂದ್ಯದ ಆರಂಭದಲ್ಲಿ ಅಲ್ ಅಯಿನ್ ತಂಡ ತೀವ್ರ ಪೈಪೋಟಿ ನೀಡಿತು. ಹೀಗಾಗಿ ಮೊದಲ 10 ನಿಮಿಷಗಳ ಆಟ ಗೋಲು ರಹಿತವಾಗಿತ್ತು.
14ನೇ ನಿಮಿಷದಲ್ಲಿ ರಾಮೊಸ್ ಪಡೆ ಖಾತೆ ತೆರೆಯಿತು. ಈ ಬಾರಿ ‘ಬ್ಯಾಲನ್ ಡಿ ಓರ್’ ಗೌರವಕ್ಕೆ ಭಾಜನವಾಗಿದ್ದ ಲೂಕಾ ಮಾಡ್ರಿಚ್ ಗೋಲು ಗಳಿಸಿದರು. ಕ್ರೊವೇಷ್ಯಾದ ಲೂಕಾ ಎದುರಾಳಿ ಆವರಣದ 30 ಗಜ ದೂರದಿಂದ ಚೆಂಡನ್ನು ಗುರಿ ಮುಟ್ಟಿಸಿದಾಗ ಕ್ರೀಡಾಂಗಣದಲ್ಲಿ ಮೆಕ್ಸಿಕನ್ ಅಲೆ ಎದ್ದಿತು. ನಂತರದ ಅವಧಿಯಲ್ಲಿ ಉಭಯ ತಂಡಗಳು ಸಮಬಲದ ಪೈಪೋಟಿ ನಡೆಸಿದವು.
ದ್ವಿತೀಯಾರ್ಧದಲ್ಲಿ ಮ್ಯಾಡ್ರಿಡ್ ಆಟಗಾರರು ಮೋಡಿ ಮಾಡಿದರು. 60ನೇ ನಿಮಿಷದಲ್ಲಿ ಮಿಡ್ ಫೀಲ್ಡರ್ ಮಾರ್ಕಸ್ ಲೊರೆಂಟ್ ಕಾಲ್ಚಳಕ ತೋರಿದರು. ಹೀಗಾಗಿ ರಾಮೊಸ್ ಪಡೆಯ ಮುನ್ನಡೆ 2–0ಗೆ ಹೆಚ್ಚಿತು.
78ನೇ ನಿಮಿಷದಲ್ಲಿ ಈ ತಂಡದ ಖಾತೆಗೆ ಮತ್ತೊಂದು ಗೋಲು ಸೇರ್ಪಡೆಯಾಯಿತು. ಲೂಕಾ ಮಾಡ್ರಿಚ್ ಅವರು ಕಾರ್ನರ್ ಕಿಕ್ ಮೂಲಕ ತಮ್ಮತ್ತ ಕಳುಹಿಸಿದ ಚೆಂಡಿನ ಮೇಲೆ ಚುರುಕಾಗಿ ನಿಯಂತ್ರಣ ಸಾಧಿಸಿದ ರಾಮೊಸ್ ಅದನ್ನು ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಗುರಿ ಸೇರಿಸಿ ಸಂಭ್ರಮಿಸಿದರು.
86ನೇ ನಿಮಿಷದಲ್ಲಿ ಅಲ್ ಅಯಿನ್ ಹಿನ್ನಡೆ ತಗ್ಗಿಸಿಕೊಂಡಿತು. ಈ ತಂಡದ ರಕ್ಷಣಾ ವಿಭಾಗದ ಆಟಗಾರ ಸುಕಾಸ ಶಿವೊಟಾನಿ ಗೋಲು ಹೊಡೆದು ತವರಿನ ಅಭಿಮಾನಿಗಳನ್ನು ರಂಜಿಸಿದರು.
ಹೆಚ್ಚುವರಿ ಅವಧಿಯಲ್ಲಿ (90+1ನೇ ನಿಮಿಷ) ಅಲ್ ಅಯಿನ್ ತಂಡದ ಯಾಹಿಯಾ ನಾಡೆರ್ ತಮ್ಮದೇ ಗೋಲು ಪೆಟ್ಟಿಗೆಯೊಳಗೆ ಚೆಂಡನ್ನು ಗುರಿ ಮುಟ್ಟಿಸಿದರು. ಹೀಗಾಗಿ ಮ್ಯಾಡ್ರಿಡ್ ಖಾತೆಗೆ ‘ಉಡುಗೊರೆ’ ಗೋಲು ಸೇರ್ಪಡೆಯಾಯಿತು.
‘ಈ ವರ್ಷ ನನ್ನ ಪಾಲಿಗೆ ಸ್ಮರಣೀಯ. ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಕ್ರೊವೇಷ್ಯಾ ತಂಡವನ್ನು ಫೈನಲ್‌ನತ್ತ ಮುನ್ನಡೆಸಿದ್ದೆ. ಈಗ ರಿಯಲ್ ಮ್ಯಾಡ್ರಿಡ್ ತಂಡ ಕ್ಲಬ್ ವಿಶ್ವಕಪ್ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದೇನೆ. ಹೀಗಾಗಿ ಅತೀವ ಖುಷಿಯಾಗಿದೆ’ ಎಂದು ಮಾಡ್ರಿಚ್ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.