ಕಜನ್ ಅರೆನಾ: ರೆಡಾಮೆಲ್ ಫಾಲ್ಕಾವೊ, ಎರಿ ಮಿನಾ ಹಾಗೂ ಉವಾನ್ ಕುದ್ರಾದೊ ಅವರು ಗಳಿಸಿದ ಗೋಲುಗಳ ನೆರವಿನಿಂದ ಕೊಲಂಬಿಯಾ ತಂಡವು ಅಮೋಘ ಜಯ ಸಾಧಿಸಿದೆ. ಈ ಮೂಲಕ ಪ್ರೀ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಭಾನುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಕೊಲಂಬಿಯಾ ತಂಡವು ಪೋಲೆಂಡ್ ತಂಡವನ್ನು 3–0 ಗೋಲುಗಳಿಂದ ಮಣಿಸಿತು. ಈ ಸೋಲಿನೊಂದಿಗೆ ವಿಶ್ವಕಪ್‌ನಿಂದ ಹೊರಬಿದ್ದ ಯುರೋಪ್‌ನಮೊದಲ ರಾಷ್ಟ್ರ ಎಂಬ ಕುಖ್ಯಾತಿಗೆ ಪೋಲೆಂಡ್ ತಂಡ ಗುರಿಯಾಯಿತು.
ಪಂದ್ಯದ ಆರಂಭದಿಂದಲೂ ಎಚ್ಚರಿಕೆಯ ಆಟ ಆಡಿದ ಕೊಲಂಬಿಯಾ ತಂಡವು ಪೋಲೆಂಡ್‌ನ ಮುಂಚೂಣಿ ವಿಭಾಗದ ಆಟಗಾರರ ಗೋಲು ಗಳಿಸುವ ಯತ್ನವನ್ನು ವಿಫಲಗೊಳಿಸಿದರು.
ಉಭಯ ತಂಡಗಳ ಜಿದ್ದಾಜಿದ್ದಿನ ಹೋರಾಟದಿಂದ ಪಂದ್ಯದ ಮೊದಲಾರ್ಧದವು ತೀವ್ರ ಪೈಪೋಟಿಯಿಂದ ಕೂಡಿತ್ತು. ಆದರೆ, 40ನೇ ನಿಮಿಷದಲ್ಲಿ ಕೊಲಂಬಿಯಾದ ಎರಿ ಮಿನಾ ಅವರು ಹೆಡರ್ ಮೂಲಕ ಗೋಲು ಗಳಿಸಿ ತಂಡದ ಮುನ್ನಡೆಗೆ ಕಾರಣರಾದರು.
ಸಮಬಲ ಸಾಧಿಸಲು ಸಾಕಷ್ಟು ಬಾರಿ ಪ್ರಯತ್ನಿಸಿದ ಪೋಲೆಂಡ್ ತಂಡದ ಲೆವಾಂಡೊವಸ್ಕಿ ಅವರು ಚೆಂಡನ್ನು ಗುರಿಯತ್ತ ಒದ್ದರು. ಆದರೆ, ಕೊಲಂಬಿಯಾದ ಗೋಲ್‌ಕೀಪರ್ ಡೆವಿಡ್ ಒಸ್ಪಿನಾ ಅವರು ಚುರುಕಿನ ಆಟ ಆಡಿ ಅದನ್ನು ವಿಫಲಗೊಳಿಸಿದರು.
ಪಂದ್ಯದ 70ನೇ ನಿಮಿಷದಲ್ಲಿ ಫಾಲ್ಕಾವೊ ಅವರು ಗೋಲು ದಾಖಲಿಸಿ ತಂಡದ ಮುನ್ನಡೆಯನ್ನು ಹೆಚ್ಚಿಸಿದರು. 75ನೇ ನಿಮಿಷದಲ್ಲಿ ಕುದ್ರಾದೊ ಅವರು ಮಿಡ್‌ಫೀಲ್ಡ್ ವಿಭಾಗದಿಂದ ಚೆಂಡನ್ನು ಡ್ರಿಬ್ಲಿಂಗ್ ಮಾಡುತ್ತಾ ಬಂದು ಅಮೋಘವಾಗಿ ನೆಟ್‌ನೊಳಗೆ ತೂರಿಸಿದರು.
ಇದಾದ ನಂತರ ಪೋಲೆಂಡ್ ತಂಡವು ಅನೇಕ ಬಾರಿ ಗೊಲು ದಾಖಲಿಸಲು ಯತ್ನಿಸಿತಾದರೂ, ಕೊಲಂಬಿಯಾದ ರಕ್ಷಣಾ ವಿಭಾಗದ ಆಟಗಾರರು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ.
ಮೀನಖಂಡದ ನೋವಿನಿಂದ ಬಳಲುತ್ತಿರುವ ಕಾರಣಕೊಲಂಬಿಯಾದ ಪ್ರಮುಖ ಆಟಗಾರ ಜೇಮ್ಸ್ ರಾಡ್ರಿಗಸ್ ಅವರು ಈ ಪಂದ್ಯದಲ್ಲೂ ಬದಲಿ ಆಟಗಾರರಾಗಿ ಕೆಲ ಹೊತ್ತು ಆಡಿದರು. ಹಿಂದಿನ ವಿಶ್ವಕಪ್‌ನಲ್ಲಿ ಆರು ಗೊಲು ಗಳಿಸಿದ್ದ ಅವರು ಚಿನ್ನದ ಬೂಟು ಗೆದ್ದಿದ್ದರು. ಮುಂದಿನ ಪಂದ್ಯದಲ್ಲಿ ಕೊಲಂ ಬಿಯಾ, ಸೆನೆಗಲ್ ತಂಡವನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.