ADVERTISEMENT

ಬ್ರೆಜಿಲ್ ಅಮಾನತು: ಫಿಫಾ ಬೆದರಿಕೆ

ಏಜೆನ್ಸೀಸ್
Published 25 ಡಿಸೆಂಬರ್ 2023, 19:04 IST
Last Updated 25 ಡಿಸೆಂಬರ್ 2023, 19:04 IST
   

ರಿಯೊ ಡಿ ಜನೈರೊ: ಜನವರಿಯಲ್ಲಿ ಹೊಸ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಬ್ರೆಜಿಲ್‌ ಫುಟ್‌ಬಾಲ್ ಸಂಸ್ಥೆ ಹಸ್ತಕ್ಷೇಪ ನಡೆಸಿದರೆ ತನ್ನ ರಾಷ್ಟ್ರೀಯ ತಂಡ ಮತ್ತು ಕ್ಲಬ್‌ಗಳನ್ನು ಅಂತರರಾಷ್ಟ್ರೀಯ ಸ್ಪರ್ಧೆಗಳಿಂದ ಅಮಾನತುಗೊಳಿಸಬಹುದು ಎಂದು ವಿಶ್ವ ಫುಟ್‌ಬಾಲ್‌ ಫೆಡರೇಷನ್‌ (ಫಿಫಾ) ಎಚ್ಚರಿಸಿದೆ.

ಬ್ರೆಜಿಲ್ ಫುಟ್‌ಬಾಲ್‌ ಕಾರ್ಯನಿರ್ವಾಹಕರಿಗೆ ಪತ್ರ ಬರೆದಿರುವ ಫಿಫಾ, ‘ದೇಶದ ಫುಟ್‌ಬಾಲ್ ಸಂಸ್ಥೆ ಸಿಬಿಎಫ್ ತನ್ನ ಮಾತಿಗೆ ಕಿವಿಗೊಡದಿದ್ದರೆ ಅಮಾನತು ಎದುರಿಸಬೇಕಾಗುತ್ತದೆ. ಬದಲಿಗೆ ಎಡ್ನಾಲ್ಡೊ ರಾಡ್ರಿಗಸ್ ಅವರನ್ನು ಬದಲಿಸಲು ಶೀಘ್ರವೇ ಚುನಾವಣೆ ನಡೆಸಬಹುದು’ ಎಂದು ಹೇಳಿದೆ. ಈ ಕುರಿತ ದಾಖಲೆ ಅಸೋಸಿಯೇಟ್‌ ಪ್ರೆಸ್‌ಗೆ ದೊರೆತಿದೆ. 

ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಅಕ್ರಮ ಎಸಗಿದ ಕಾರಣ ರಾಡ್ರಿಗಸ್ ಮತ್ತು ಸಿಬಿಎಫ್‌ನಲ್ಲಿ ನೇಮಕಗೊಂಡ ಎಲ್ಲರನ್ನು ಡಿಸೆಂಬರ್ 7 ರಂದು ರಿಯೊ ಡಿ ಜನೈರೊ ನ್ಯಾಯಾಲಯವು ಅಧಿಕಾರದಿಂದ ತೆಗೆದುಹಾಕಿತು. ಬ್ರೆಜಿಲ್‌ನ ಎರಡು ಉನ್ನತ ನ್ಯಾಯಾಲಯಗಳು ಕಳೆದ ವಾರ ಆ ತೀರ್ಪನ್ನು ಎತ್ತಿಹಿಡಿದಿವೆ.

ADVERTISEMENT

ರಿಯೊ ನ್ಯಾಯಾಲಯದ ತೀರ್ಪಿನಲ್ಲಿ ಬ್ರೆಜಿಲ್‌ನ ಉನ್ನತ ಕ್ರೀಡಾ ನ್ಯಾಯಾಲಯದ ಮುಖ್ಯಸ್ಥ ಜೋಸ್ ಪೆರ್ಡಿಜ್ ಅವರನ್ನು 30 ಕೆಲಸದ ದಿನಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹೊಸ ಚುನಾವಣೆ ಆಯೋಜಿಸಲು ಮಧ್ಯಸ್ಥಿಕೆದಾರರಾಗಿ ಹೆಸರಿಸಲಾಗಿದೆ. ಅಧ್ಯಕ್ಷರ ಆಯ್ಕೆಯಲ್ಲಿ ಹಸ್ತಕ್ಷೇಪವನ್ನು ಅನಗತ್ಯವೆಂದು ಪರಿಗಣಿಸುತ್ತದೆ ಎಂದು ಫಿಫಾ ಹಿಂದಿನ ಪತ್ರಗಳಲ್ಲೂ ಸಿಬಿಎಫ್‌ಗೆ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.