ADVERTISEMENT

FIFA World Cup |ಫೈನಲ್‌ನಲ್ಲಿ ಸೋತ ಫ್ರಾನ್ಸ್ ಆಟಗಾರರ ವಿರುದ್ಧ ಜನಾಂಗೀಯ ನಿಂದನೆ

ಪೆನಾಲ್ಟಿ ಶೂಟೌಟ್‌ನಲ್ಲಿ ಗೋಲು ಹೊಡೆಯಲು ವಿಫಲರಾದ ಆಟಗಾರರ ವಿರುದ್ಧ ಸಾಮಾಜಿಕ ತಾಣಗಳಲ್ಲಿ ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಡಿಸೆಂಬರ್ 2022, 6:02 IST
Last Updated 21 ಡಿಸೆಂಬರ್ 2022, 6:02 IST
ಫ್ರಾನ್ಸ್‌ ಫುಟ್‌ಬಾಲ್‌ ತಂಡ (ಏಜೆನ್ಸಿ ಚಿತ್ರ)
ಫ್ರಾನ್ಸ್‌ ಫುಟ್‌ಬಾಲ್‌ ತಂಡ (ಏಜೆನ್ಸಿ ಚಿತ್ರ)   

ನವದೆಹಲಿ: ಇತ್ತೀಚೆಗೆ ಕತಾರ್‌ನಲ್ಲಿ ಅಂತ್ಯವಾದ ಫಿಫಾ ಫುಟ್‌ಬಾಲ್‌ ವಿಶ್ವಕಪ್‌ನ ಫೈನಲ್‌ ಪಂದ್ಯದಲ್ಲಿ ವಿರೋಚಿತವಾಗಿ ಸೋಲು ಕಂಡ ಫ್ರಾನ್ಸ್ ತಂಡದ ಆಟಗಾರರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಜನಾಂಗೀಯ ನಿಂದನೆ ಮಾಡಲಾಗಿದೆ.

‘ನಮ್ಮ ತಂಡದ ಹಲವು ಸದಸ್ಯರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ಜನಾಂಗೀಯ ನಿಂದನೆಗಳನ್ನು ಮಾಡಲಾಗುತ್ತಿದೆ‘ ಎಂದು ಫ್ರೆಂಚ್ ಫುಟ್‌ಬಾಲ್‌ ಫೆಡರೇಶನ್‌ (FFF) ಹೇಳಿದೆ. ಅಲ್ಲದೇ ನಿಂದನೆ ಮಾಡಿದವರ ವಿರುದ್ಧ ದೂರು ದಾಖಲಿಸುವುದಾಗಿಯೂ ಮಾಹಿತಿ ನೀಡಿದೆ.

ಪೆನಾಲ್ಟಿ ಶೂಟೌಟ್‌ನಲ್ಲಿ ಗೋಲು ಹೊಡೆಯಲು ವಿಫಲರಾದ ಕಿಂಗ್‌ಸ್ಲೆ ಕೊಮನ್‌ ಹಾಗೂ ಔರೆಲಿನ್ ಚೌಮೆನಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಮಾಣದ ಜನಾಂಗೀಯ ನಿಂದನೆಗಳ ದಾಳಿ ನಡೆದಿದೆ.

ಇದನ್ನು ಫ್ರೆಂಚ್ ಫುಟ್‌ಬಾಲ್‌ ಫೆಡರೇಶನ್‌ ತೀವ್ರವಾಗಿ ಖಂಡಿಸಿದೆ. ’ಫುಟ್‌ಬಾಲ್‌ ವಿಶ್ವಕಪ್‌ ಅಂತ್ಯವಾದ ಬಳಿಕ ಫ್ರೆಂಚ್‌ ತಂಡದ ಹಲವು ಸದಸ್ಯರು ಸಾಮಾಜಿಕ ಜಾಲತಾಣಗಳ ಮೂಲಕ ದ್ವೇಷಪೂರಿತ, ಸಹಿಸಿಕೊಳ್ಳಲಾಗದ ಜನಾಂಗೀಯ ನಿಂದನೆ ಎದುರಿಸುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತಿದ್ದೇವೆ ಹಾಗೂ ಕೃತ್ಯ ಎಸಗಿದವರ ವಿರುದ್ಧ ದೂರು ದಾಖಲಿಸಲಿದ್ದೇವೆ‘ ಎಂದು ಫೆಡರೇಶನ್ ಹೇಳಿದೆ.

ಕೊಮನ್ ಪ್ರತಿನಿಧಿಸುವ ಬೈರೆನ್‌ ಮ್ಯೂನಿಚ್‌ ಲೀಪ್‌ ಕ್ಲಬ್‌ ಅವರ ಬೆಂಬಲಕ್ಕೆ ನಿಂತಿದೆ. ‘ಕಿಂಗ್‌ಸ್ಲೆ ಕೊಮನ್‌ ವಿರುದ್ಧ ಮಾಡಲಾದ ಜನಾಂಗೀಯ ನಿಂದನೆಯನ್ನು ಎಫ್‌ಸಿ ಬೈರನ್‌ ತೀವ್ರವಾಗಿ ಖಂಡಿಸುತ್ತದೆ. ಎಫ್‌ಸಿ ಬೈರನ್‌ನ ಇಡೀ ಕುಟುಂಬ ನಿಮ್ಮ ಹಿಂದಿದೆ. ಸಮಾಜ ಹಾಗೂ ಕ್ರೀಡೆಯಲ್ಲಿ ಜನಾಂಗೀಯತೆಗೆ ಜಾಗವಿಲ್ಲ‘ ಎಂದು ಹೇಳಿದೆ.

ಫ್ರೆಂಚ್‌ನ ಆಡಳಿತರೂಢ ಹಾಗೂ ವಿರೋಧ ಪಕ್ಷಗಳು ಕೂಡ ಆಟಗಾರರ ಮೇಲಿನ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ‘ಇಂಥವುಗಳನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲಾಗುವುದಿಲ್ಲ. ಇದನ್ನು ನಾನು ಉಚ್ಛ ಕಂಠದಿಂದ ಖಂಡಿಸುತ್ತೇನೆ‘ ಎಂದು ಫ್ರೆಂಚ್‌ನ ಸಮಾನತೆ ಹಾಗೂ ವೈವಿಧ್ಯತೆ ಸಚಿವೆ ಇಸಾಬೆಲ್ಲ ರೋಮ್‌ ಹೇಳಿದ್ದಾರೆ.

ಈ ಹಿಂದೆ ಯೂರೋ ‍ಕಪ್‌ ಸೇರಿದಂತೆ ಹಲವು ಟೂರ್ನಮೆಂಟ್‌ಗಳಲ್ಲಿ ವಿಫಲವಾಗಿದ್ದಕ್ಕೆ ಸ್ಟಾರ್ ಆಟಗಾರ ಕಿಲಿಯನ್ ಎಂಬಾಪೆ ಸಹಿತ ಹಲವು ಮಂದಿ ಆಟಗಾರರು ಜನಾಂಗೀಯ ನಿಂದನೆ ಎದುರಿಸಿದ್ದರು.

ಫ್ರಾನ್ಸ್‌ ತಂಡಲ್ಲಿ ಹೆಚ್ಚಿನ ಆಟಗಾರರು ಕಪ್ಪು ವರ್ಣೀಯರು ಎನ್ನುವುದು ಗಮನಾರ್ಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.