ದೋಹಾ: ಲುಸೈಲ್ ಕ್ರೀಡಾಂಗಣದಲ್ಲಿ ಭಾನುವಾರ ತಡರಾತ್ರಿ ದಿಗ್ಗಜ ಆಟಗಾರ ಲಯೊನೆಲ್ ಮೆಸ್ಸಿ ಅವರಿಗೆ ಬಹುದಿನಗಳ ಕನಸು ನನಸಾದ ಸಂಭ್ರಮ. ವಿಶ್ವಕಪ್ ಟ್ರೋಫಿ ಎತ್ತಿಹಿಡಿಯಬೇಕೆಂಬ ಅವರ ಆಸೆ ಈಡೇರಿದ ಸಂತಸ.
ಫೈನಲ್ ಹಣಾಹಣಿಯಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ 4–2ರಿಂದ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಪರಾಭವಗೊಳಿಸಿದ ಅರ್ಜೆಂಟೀನಾ ಮೂರನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿತು. ಎರಡು ಗೋಲು ಗಳಿಸಿದ ಮೆಸ್ಸಿ ಅವರು ಮೊದಲ ಟ್ರೋಫಿಯ ಸಂಭ್ರಮ ಆಚರಿಸಿದರು. ಆದರೆ ಫ್ರಾನ್ಸ್ ತಂಡದ ಕಿಲಿಯನ್ ಎಂಬಾಪೆ ಅವರ ಹ್ಯಾಟ್ರಿಕ್ ವ್ಯರ್ಥವಾಯಿತು.
ಭಾನುವಾರ ನಡೆದ ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು 2–2ರಿಂದ ಸಮಬಲ ಸಾಧಿಸಿದ್ದವು. ಮೆಸ್ಸಿ 23ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಅವಕಾಶವನ್ನು ಗೋಲಿನಲ್ಲಿ ಪರಿವರ್ತಿಸಿದರು. 36ನೇ ನಿಮಿಷದಲ್ಲಿ ಎಂಜೆಲ್ ಡಿ ಮರಿಯಾ ತೋರಿದ ಕಾಲ್ಚಳಕ ಅರ್ಜೆಂಟೀನಾ ಅಭಿಮಾನಿಗಳು ಹುಚ್ಚೆಂದು ಕುಣಿಯುವಂತೆ ಮಾಡಿತು. ಅದಾದ ಬಳಿಕ ಹೆಚ್ಚು ಹೊತ್ತು ಗೋಲು ದಾಖಲಾಗದಿದ್ದಾಗ ಅರ್ಜೆಂಟೀನಾ ಗೆದ್ದಿತೆಂದೇ ಬಹುತೇಕರು ಭಾವಿಸಿದ್ದರು.
ಆದರೆ ಯುವ ಪ್ರತಿಭೆ ಎಂಬಾಪೆ 80ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶದಲ್ಲಿ ಗೋಲು ಗಳಿಸಿ ಫ್ರಾನ್ಸ್ ತಂಡದ ನಿರೀಕ್ಷೆಗೆ ಕಾರಣರಾದರು. ಮರು ನಿಮಿಷದಲ್ಲೇ ಮತ್ತೊಮ್ಮೆ ಮೋಡಿ ಮಾಡಿದ 23 ವರ್ಷದ ಆಟಗಾರ ಅರ್ಜೆಂಟೀನಾ ಅಭಿಮಾನಿಗಳ ನಿರೀಕ್ಷೆಗೆ ತಣ್ಣೀರೆರೆಚಿದರು.
ಹೆಚ್ಚುವರಿ ಅವಧಿಯಲ್ಲಿ ಇನ್ನಷ್ಟು ಜಿದ್ದಾಜಿದ್ದಿ ಕಂಡುಬಂತು. 108ನೇ ನಿಮಿಷದಲ್ಲಿ ಮತ್ತೊಮ್ಮೆ ಮೋಡಿ ಮಾಡಿದ ಮೆಸ್ಸಿ ತಮ್ಮ ಎರಡನೇ ಗೋಲು ಗಳಿಸಿದರು. ಈ ವೇಳೆ ಅರ್ಜೆಂಟೀನಾ 3–2ರಿಂದ ಮುನ್ನಡೆ ಸಾಧಿಸಿತು. ಆದರೆ ಹೆಚ್ಚುವರಿ ಅವಧಿ ಕೊನೆಗೊಳ್ಳಲು ಎರಡು ನಿಮಿಷಗಳಿರುವಾಗ ಪೆನಾಲ್ಟಿ ಅವಕಾಶವನ್ನು ಗೋಲಾಗಿಸಿದ ಎಂಬಾಪೆ ಹ್ಯಾಟ್ರಿಕ್ ಸಾಧಿಸಿದರು. ಈ ವೇಳೆಗೆ ಪೆನಾಲ್ಟಿ ಶೂಟೌಟ್ ಮೊರೆಹೋಗಲಾಯಿತು.
ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ ಪರ ಮೆಸ್ಸಿ, ಪೌಲೊ ಡಿಬಾಲಾ, ಲಿಯಾಂಡ್ರೊ ಪೆರೆಡೆಸ್, ಗೊಂಜಾಲೊ ಮೊಂಟಿಯಲ್ ಚೆಂಡನ್ನು ಗುರಿ ಸೇರಿಸಿದರು. ಆದರೆ ಫ್ರಾನ್ಸ್ ಪರ ಎಂಬಾಪೆ ಮತ್ತು ರಂಡಲ್ ಕೊಲೊ ಮುವಾನಿ ಮಾತ್ರ ಯಶಸ್ಸು
ಸಾಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.