ADVERTISEMENT

ಫುಟ್‌ಬಾಲ್ ವಿಶ್ವಕಪ್: ಈಕ್ವೆಡಾರ್‌ ಶುಭಾರಂಭ, ಕತಾರ್‌ಗೆ ಸೋಲು

ಮೊದಲ ಪಂದ್ಯದಲ್ಲಿ ಕತಾರ್‌ ವಿರುದ್ಧ 2–0 ಗೋಲುಗಳ ಗೆಲುವು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 3:09 IST
Last Updated 21 ನವೆಂಬರ್ 2022, 3:09 IST
ಗೋಲು ಗಳಿಸಿದ ಸಂಭ್ರಮದಲ್ಲಿ ಎನೆರ್‌ ವಲೆನ್ಸಿಯಾ –ಎಎಫ್‌ಪಿ ಚಿತ್ರ
ಗೋಲು ಗಳಿಸಿದ ಸಂಭ್ರಮದಲ್ಲಿ ಎನೆರ್‌ ವಲೆನ್ಸಿಯಾ –ಎಎಫ್‌ಪಿ ಚಿತ್ರ   

ದೋಹಾ (ರಾಯಿಟರ್ಸ್‌): ಆತಿಥೇಯ ಕತಾರ್‌ ಒಡ್ಡಿದ ಸವಾಲನ್ನು ಮೆಟ್ಟಿನಿಂತ ಈಕ್ವೆಡಾರ್‌ ತಂಡ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಅಲ್‌ ಬೈತ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯವನ್ನು ಈಕ್ವೆಡಾರ್‌ 2–0 ಗೋಲುಗಳಿಂದ ಗೆದ್ದಿತು. ಆತಿಥೇಯ ತಂಡವನ್ನು ಬೆಂಬಲಿಸಲು ನೆರೆದಿದ್ದ ಅಭಿಮಾನಿಗಳಿಗೆ ನಿರಾಸೆ ಎದುರಾಯಿತು.

ಈಕ್ವೆಡಾರ್‌ ತಂಡದ ಎರಡೂ ಗೋಲುಗಳನ್ನು ಗಳಿಸಿದ ಅನುಭವಿ ಸ್ಟ್ರೈಕರ್‌ ಎನೆರ್‌ ವಲೆನ್ಸಿಯಾ ಗೆಲುವಿನ ರೂವಾರಿ ಎನಿಸಿದರು. ಎರಡೂ ಗೋಲುಗಳು ಮೊದಲ ಅವಧಿಯಲ್ಲಿ ದಾಖಲಾದವು. ಚೊಚ್ಚಲ ವಿಶ್ವಕಪ್‌ ಪಂದ್ಯವನ್ನಾಡಿದ ಕತಾರ್‌ ಎರಡನೇ ಅವಧಿಯಲ್ಲಿ ಪುಟಿದೆದ್ದು ನಿಲ್ಲಲು ಪ್ರಯತ್ನಿಸಿತಾದರೂ ದಕ್ಷಿಣ ಅಮೆರಿಕದ ತಂಡ ಅದಕ್ಕೆ ಅವಕಾಶ ನೀಡಲಿಲ್ಲ.

ADVERTISEMENT

ಮೊದಲ 10 ನಿಮಿಷಗಳಲ್ಲಿ ಸಮ ಬಲದ ಹೋರಾಟ ನಡೆಯಿತು. ಪಂದ್ಯ ಮುಂದುವರಿದಂತೆ ಈಕ್ವೆಡಾರ್‌ ಹಿಡಿತ ಬಿಗಿಗೊಳಿಸಿತು. 16ನೇ ನಿಮಿಷದಲ್ಲಿ ಗೋಲು ಗಳಿಸಲು ಮುನ್ನುಗ್ಗಿದ ವಲೆನ್ಸಿಯಾ ಅವರನ್ನು ಎದುರಾಳಿ ಗೋಲ್‌ಕೀಪರ್‌ ಸಾದ್‌ ಅಲ್‌ಶೀಬ್‌ ಕೆಳಕ್ಕೆ ಬೀಳಿಸಿದರು. ಅದಕ್ಕೆ ರೆಫರಿ ಪೆನಾಲ್ಟಿ ಅವಕಾಶ ನೀಡಿದರು. ಪೆನಾಲ್ಟಿ ಕಿಕ್‌ನಲ್ಲಿ ಎನೆರ್‌ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. 31ನೇ ನಿಮಿಷದಲ್ಲಿ ಎನೆರ್‌ ಎರಡನೇ ಗೋಲು ಗಳಿಸಿದರು. ಏಂಜೆಲೊ ಪ್ರೆಸಿಯಾಡೊ ನೀಡಿದ ಕ್ರಾಸ್‌ನಲ್ಲಿ ಚೆಂಡನ್ನು ಹೆಡ್‌ ಮಾಡಿ ಗುರಿ ಸೇರಿಸಿದರು. ಕತಾರ್‌ ತಂಡದ ಸ್ಟಾರ್‌ ಆಟಗಾರ ಅಲ್ಮೋಜ್‌ ಅಲಿ ಮತ್ತು ಮೊಹಮ್ಮದ್‌ ಮುಂತರಿ ಅವರಿಗೆ ಗೋಲು ಗಳಿಸಲು ಉತ್ತಮ ಅವಕಾಶ ದೊರೆತರೂ ಚೆಂಡನ್ನು ಗುರಿ ಸೇರಿಸಲು ವಿಫಲರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.