ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿಅರ್ಜೆಂಟೀನಾ ಎದುರು ಸೋಲು ಕಂಡು, ಪ್ರಶಸ್ತಿ ಗೆಲ್ಲುವ ಅವಕಾಶವನ್ನುಸ್ವಲ್ಪದರಲ್ಲೇ ಕಳೆದುಕೊಂಡ ತಮ್ಮ ತಂಡದ ಆಟಗಾರರನ್ನು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಸಂತೈಸಿದ್ದಾರೆ.
ಕತಾರ್‌ನ ರಾಜಧಾನಿ ದೋಹಾದ ಲುಸೈಲ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಫ್ರಾನ್ಸ್ ಎದುರು ಗೆಲುವಿನ ಸಂಭ್ರಮ ಆಚರಿಸಿತ್ತು.
ಉಭಯ ತಂಡಗಳು ಪಂದ್ಯದ ನಿಗದಿತ ಮತ್ತು ಹೆಚ್ಚುವರಿ ಅವಧಿಯಲ್ಲಿ 3–3 ಗೋಲುಗಳಿಂದ ಸಮಬಲ ಸಾಧಿಸಿದ್ದವು.
ಅರ್ಜೆಂಟೀನಾ ಪರ ಲಯೊನೆಲ್ ಮೆಸ್ಸಿ (23 ಮತ್ತು 109ನೇ ನಿಮಿಷದಲ್ಲಿ) ಎರಡು ಗೋಲುಗಳನ್ನು ಗಳಿಸಿದರೆ, ಇನ್ನೊಂದು ಗೋಲನ್ನು ಏಂಜೆಲ್ ಡಿ ಮರಿಯಾ (36ನೇ ನಿಮಿಷದಲ್ಲಿ) ತಂದಿತ್ತರು. ಫ್ರಾನ್ಸ್ ತಂಡದ ಮೂರೂ ಗೋಲುಗಳನ್ನು ಕಿಲಿಯಾನ್ ಎಂಬಾಪೆ (80, 81 ಮತ್ತು 118ನೇ ನಿಮಿಷದಲ್ಲಿ) ಗಳಿಸಿದರು.
ಇದರಿಂದ ವಿಜೇತರನ್ನು ನಿರ್ಣಯಿಸಲುಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಗಿತ್ತು.
ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ ತಂಡ4–2 ಗೋಲುಗಳ ಅಂತರದ ಮೇಲುಗೈ ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿತು. ಅರ್ಜೆಂಟೀನಾ ಪರ ಮೆಸ್ಸಿ, ಪೌಲೊ ಡಿಬಾಲಾ, ಲಿಯಾಂಡ್ರೊ ಪೆರೆಡೆಸ್, ಗೊಂಜಾಲೊ ಮೊಂಟಿಯಲ್ ಚೆಂಡನ್ನು ಗುರಿ ಸೇರಿಸಿದರು. ಆದರೆ, ಫ್ರಾನ್ಸ್ ಪರ ಎಂಬಾಪೆ ಮತ್ತು ರಂಡಲ್ ಕೊಲೊ ಮುವಾನಿ ಮಾತ್ರ ಯಶಸ್ಸು ಸಾಧಿಸಿದರು.
ಆಟಗಾರರನ್ನು ಹುರಿದುಂಬಿಸಿದ ಮ್ಯಾಕ್ರಾನ್
ಸೋಲಿನಿಂದ ಕಂಗೆಟ್ಟಿದ್ದ ತಮ್ಮ ತಂಡದ ಆಟಗಾರರನ್ನು ಫ್ರಾನ್ಸ್ ಅಧ್ಯಕ್ಷಇಮ್ಯಾನುಯೆಲ್ ಮ್ಯಾಕ್ರಾನ್ ಸ್ವತಃ ಮೈದಾನಕ್ಕಿಳಿದು ಸಂತೈಸಿದರು.
ಹ್ಯಾಟ್ರಿಕ್ ಗೋಲು ಗಳಿಸಿಯೂ, ವಿಶ್ವಕಪ್ ಗೆಲ್ಲಲು ಸಾಧ್ಯವಾಗದ್ದಕ್ಕೆ 23 ವರ್ಷದ ಎಂಬಾಪೆ ಅಕ್ಷರಶಃದುಖಃದಲ್ಲಿದ್ದರು. ಮೈದಾನದಲ್ಲಿ ಕುಸಿದು ಕುಳಿತಿದ್ದ ಅವರತ್ತ ಬಂದ ಮ್ಯಾಕ್ರಾನ್, ಸಮಾಧಾನದ ಮಾತುಗಳನ್ನಾಡಿ ಹುರಿದುಂಬಿಸಿದರು.
ಮ್ಯಾಕ್ರಾನ್ ಅವರು ಎಂಬಾಬೆ ಬೆನ್ನು ತಟ್ಟುತ್ತಾ, ಮೈದಾನದಲ್ಲಿ ಕುಳಿತು ಮಾತನಾಡುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಮ್ಯಾಕ್ರಾನ್‌ಅವರು,ಮೈದಾನದಲ್ಲಿ ಮಾತ್ರವಲ್ಲದೆ ಡ್ರೆಸ್ಸಿಂಗ್ ಕೊಠಡಿಗೂ ತೆರಳಿ ಆಟಗಾರರನ್ನು ಪ್ರೇರೇಪಿಸಿದ್ದಾರೆ. ಈ ವಿಡಿಯೊವನ್ನು ಸ್ವತಃ ಹಂಚಿಕೊಂಡಿರುವ ಅವರು, 'ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತಿದೆ' ಎಂದು ಬರೆದುಕೊಂಡಿದ್ದಾರೆ.
ಮ್ಯಾಕ್ರಾನ್ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಎಂಬಾಪೆಹ್ಯಾಟ್ರಿಕ್ ಸಾಧನೆ
ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದ ಎರಡನೇ ಆಟಗಾರ ಎಂಬ ಗೌರವ ಎಂಬಾಪೆ ಅವರದ್ದಾಯಿತು.ಇದಕ್ಕೂ ಮೊದಲು ಇಂಗ್ಲೆಂಡ್‌ನ ಜೆಫ್ ಹಸ್ಟ್ ಮಾತ್ರವೇ ಈ ಸಾಧನೆ ಮಾಡಿದ್ದರು.
ಜೆಫ್, 1966ರ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಪಶ್ಚಿಮ ಜರ್ಮನಿ ವಿರುದ್ಧ ಮೂರು ಗೋಲುಗಳನ್ನು ಗಳಿಸಿದ್ದರು. ಆ ಪಂದ್ಯವನ್ನು ಇಂಗ್ಲೆಂಡ್ 4–2 ರಲ್ಲಿ ಗೆದ್ದುಕೊಂಡಿತ್ತು.
ಅಷ್ಟೇ ಅಲ್ಲ, ಫುಟ್‌ಬಾಲ್ ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ಹೆಚ್ಚು (4) ಗೋಲು ಗಳಿಸಿದ ದಾಖಲೆಯೂ ಎಂಬಾಪೆ ಅವರದ್ದಾಯಿತು. ಅವರು ಕಳೆದ ಬಾರಿಯ (2018ರ) ಫೈನಲ್‌ನಲ್ಲಿ ಕ್ರೊವೇಷ್ಯಾ ವಿರುದ್ಧ ಒಂದು ಗೋಲು ಗಳಿಸಿದ್ದರು. ಆ ಪಂದ್ಯವನ್ನು 4–2 ಗೋಲುಗಳ ಅಂತರದಿಂದ ಗೆದ್ದಿದ್ದ ಫ್ರಾನ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.
ಎಂಬಾಪೆ ಹೊರತುಪಡಿಸಿ, ಬ್ರೆಜಿಲ್‌ನ ದಿಗ್ಗಜ ಆಟಗಾರರಾದ ಪೆಲೆ, ವವಾ, ಫ್ರಾನ್ಸ್‌ನ ಝಿನಡೀನ್ ಜಿದಾನೆ ಮತ್ತು ಇಂಗ್ಲೆಂಡ್‌ನಜೆಫ್ ಹಸ್ಟ್ ಅವರು ಫೈನಲ್ ಪಂದ್ಯಗಳಲ್ಲಿ ತಲಾ ಮೂರು ಗೋಲುಗಳನ್ನು ಗಳಿಸಿದ್ದಾರೆ.
ಈ ಬಾರಿ ಒಟ್ಟು ಎಂಟು ಗೋಲುಗಳನ್ನು ಬಾರಿಸಿ 'ಗೋಲ್ಡನ್ ಬೂಟ್' ಪ್ರಶಸ್ತಿ ಗೆದ್ದುಕೊಂಡ ಎಂಬಾಪೆ ಅವರು, ವಿಶ್ವಕಪ್ ಟೂರ್ನಿಗಳಲ್ಲಿ ಇದುವರೆಗೆ ಗಳಿಸಿದ ಒಟ್ಟು ಗೋಲುಗಳ ಸಂಖ್ಯೆ 12ಕ್ಕೆ ಏರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.