ADVERTISEMENT

ಗೋಲ್‌ ಕೀಪಿಂಗ್‌ ‘ಮಾಸ್ಟರ್‌’ ಆಗುವ ಕನಸು

ಬೆಂಗಳೂರಿನಲ್ಲಿ ಫುಟ್‌ಬಾಲ್‌ ಕೋಚ್‌ಗಳಿಗೆ ಲೆವೆಲ್ –3 ತರಬೇತಿ; ಭಾರತದಲ್ಲಿ ಮೊದಲ ಬಾರಿ ಅವಕಾಶ

ವಿಕ್ರಂ ಕಾಂತಿಕೆರೆ
Published 24 ಅಕ್ಟೋಬರ್ 2019, 19:45 IST
Last Updated 24 ಅಕ್ಟೋಬರ್ 2019, 19:45 IST
ಜಾಸಿಮ್ ಅಲ್ ಹಾರ್ಬಿ
ಜಾಸಿಮ್ ಅಲ್ ಹಾರ್ಬಿ   

ಬೆಂಗಳೂರು: ಭಾರತ ಫುಟ್‌ಬಾಲ್ ತಂಡದಲ್ಲಿ ಗೋಲ್ ಕೀಪರ್ ಆಗಿದ್ದ, ಸದ್ಯ ಭಾರತ ತಂಡದ ಗೋಲ್‌ಕೀಪಿಂಗ್ ಕೋಚ್‌ ಆಗಿರುವ ತನ್ಮಯ್ ಬಸು ಈಗ ಬೆಂಗಳೂರಿನಲ್ಲಿದ್ದಾರೆ. ಕೋಚ್‌ಗಳಾದ ಗೋವಾದ ರಿಚರ್ಡ್‌ ಸ್ಯಾಂಚೆಸ್‌, ಫೆಲಿಕ್ಸ್ ಡಿ’ ಸೋಜಾ, ಕೇರಳದ ಫೈಜಲ್ ಕೊಂಗಾಡನ್ ಬಾಪು, ಪಶ್ಚಿಮ ಬಂಗಾಳದ ಉತ್ಪಲ್ ಮುಖರ್ಜಿ ಮುಂತಾದವರು ಕೂಡ ಅವರೊಂದಿಗೆ ಇದ್ದಾರೆ.

ಇವರೆಲ್ಲರೂ ಗೋಲ್‌ಕೀಪಿಂಗ್‌ ಕೋಚಿಂಗ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟಕ್ಕೆ ನೆಗೆಯುವ ಕನಸು ಹೊತ್ತುಕೊಂಡು ಇಲ್ಲಿಗೆ ಬಂದಿದ್ದಾರೆ. ಅಶೋಕನಗರದ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಾಲ್ಕು ದಿನಗಳಿಂದ ನಡೆಯುತ್ತಿರುವ ಗೋಲ್‌ಕೀಪಿಂಗ್ ತರಬೇತುದಾರರ ಲೆವೆಲ್ –3 ಕೋರ್ಸ್‌ನಲ್ಲಿ ಹೊಸ ತಂತ್ರಗಳನ್ನು ಕಲಿಯುತ್ತಿದ್ದಾರೆ.

ಏಷ್ಯನ್ ಫುಟ್‌ಬಾಲ್ ಕಾನ್ಫೆಡರೇಷನ್ (ಎಎಫ್‌ಸಿ) ಆಯೋಜಿಸುವ ಕೋರ್ಸ್ ಭಾರತದಲ್ಲಿ ಇದೇ ಮೊದಲ ಬಾರಿ ನಡೆಯುತ್ತಿದೆ. ಬೆಂಗಳೂರಿನಲ್ಲಿ ಫುಟ್‌ಬಾಲ್‌ ಕ್ರೀಡೆಯ ಮೇಲೆ ಪ್ರೀತಿ ಹೆಚ್ಚುತ್ತಿರುವುದನ್ನು ಗಮನಿಸಿ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್ (ಎಐಎಫ್‌ಎಫ್‌) ಈ ಕೋರ್ಸ್‌ಗೆ ಆತಿಥ್ಯ ವಹಿಸುವ ಅವಕಾಶವನ್ನುಉದ್ಯಾನ ನಗರಕ್ಕೆ ನೀಡಿದೆ.

ADVERTISEMENT

ಸೌದಿ ಅರೆಬಿಯಾ ರಾಷ್ಟ್ರೀಯ ತಂಡದ ಗೋಲ್ ಕೀಪರ್ ಆಗಿದ್ದ ಜಾಸಿಮ್ ಅಲ್ ಹಾರ್ಬಿ 19 ಮಂದಿ ಕೋಚ್‌ಗಳಿಗೆ ತರಬೇತಿ ನೀಡುತ್ತಿದ್ದು ಎರಡು ವಾರಗಳ ನಂತರ ಫಲಿತಾಂಶ ಹೊರಬೀಳಲಿದೆ. ಕೋರ್ಸ್‌ನಲ್ಲಿ ಉತ್ತೀರ್ಣರಾದವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಗೋಲ್‌ಕೀಪರ್‌ಗಳ ಗುರುಗಳಾಗಲು ಅರ್ಹತೆ ಗಳಿಸಲಿದ್ದಾರೆ.

‘ಗೋಲ್‌ಕೀಪರ್‌ಗಳ ಕೋಚಿಂಗ್‌ ಕೋರ್ಸ್‌ನಲ್ಲಿ ಇದು ಅತ್ಯುನ್ನತ ಮಟ್ಟದ್ದು. ಇದನ್ನು ಯಶಸ್ವಿಯಾಗಿ ಪೂರೈಸಿದವರು ಪ್ರಪಂಚದ ಯಾವ ಭಾಗದಲ್ಲಾದರೂ, ಯಾವುದೇ ತಂಡಕ್ಕಾದರೂ ತರಬೇತಿ ನೀಡಬಹುದು. ಗೋಲ್‌ಕೀಪಿಂಗ್‌ನಲ್ಲಿ ಇತ್ತೀಚೆಗೆ ಅನುಸರಿಸುತ್ತಿರುವ ಹೊಸ ತಂತ್ರಗಳು ಮತ್ತು ಜಾರಿಗೆ ಬಂದಿರುವ ನೂತನ ನಿಯಮಗಳ ಮೇಲೆ ಬೆಳಕು ಚೆಲ್ಲಲು ಇಲ್ಲಿ ಒತ್ತು ನೀಡಲಾಗುತ್ತದೆ’ ಎಂದು ಜಾಸಿಮ್ ಗುರುವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗೋಲ್‌ಕೀಪರ್‌ಗಳಿಗೆ ಲೆವೆಲ್ 1 ಮತ್ತು ಲೆವೆಲ್ 2 ತರಬೇತಿ ಕೋರ್ಸ್‌ಗಳು ನಡೆಯುತ್ತಿರುತ್ತವೆ. ಲೆವೆಲ್ 3 ಕೋರ್ಸ್‌ಗಳನ್ನು ಫುಟ್‌ಬಾಲ್ ಆಡುವ ವಿವಿಧ ದೇಶಗಳು ಆಗಾಗ ಆಯೋಜಿಸುತ್ತವೆ. ಭಾರತದಲ್ಲಿ ಕೊನೆಗೂ ಈ ಬಗ್ಗೆ ಆಸಕ್ತಿ ಮೂಡಿರುವುದು ಶ್ಲಾಘನೀಯ’ ಎಂದು ಅವರು ಅಭಿಪ್ರಾಯಪಟ್ಟರು.

ಪ್ರತಿ ದಿನ ಬೆಳಿಗ್ಗೆ 8 ಗಂಟೆಗೆ ತರಬೇತಿ ಆರಂಭವಾಗುತ್ತದೆ. ಮಧ್ಯಾಹ್ನದ ವರೆಗೆ ಮೈದಾನದಲ್ಲಿ ಪ್ರಾ‌ತ್ಯಕ್ಷಿಕೆ; ನಂತರ ತರಗತಿ ಕೊಠಡಿಗಳಲ್ಲಿ ‘ಪಾಠ’ ಹೇಳಲಾಗುತ್ತದೆ. ಕೋರ್ಸ್ ಮುಗಿದ ನಂತರ ಜಾಸಿಮ್ ಅವರು ಎಎಫ್‌ಸಿಗೆ ವರದಿ ಸಲ್ಲಿಸಲಿದ್ದು ಇದರ ಆಧಾರದಲ್ಲಿ ಕೋಚ್‌ಗಳಿಗೆ ‘ರಹದಾರಿ’ ಸಿಗಲಿದೆ.

ತರಬೇತಿ ಪಡೆಯುತ್ತಿರುವವರು

ರಾಜ್ಯ; ಸಂಖ್ಯೆ

ಗೋವಾ; 5

ಮಹಾರಾಷ್ಟ್ರ; 3

ಬಂಗಾಳ; 2

ಚಂಡೀಗಢ; 2

ಕೇರಳ; 2

ಮಣಿಪುರ; 2

ತಮಿಳುನಾಡು; 1

ಆಂಧ್ರಪ್ರದೇಶ; 1

ದೆಹಲಿ; 1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.