ADVERTISEMENT

ಯುರೋ ಕಪ್‌ 2024 | ಸ್ಪೇನ್‌ ಫೈನಲ್‌ಗೆ: ಫ್ರಾನ್ಸ್‌ಗೆ ನಿರಾಸೆ

Pavitra Bhat
Published 10 ಜುಲೈ 2024, 21:26 IST
Last Updated 10 ಜುಲೈ 2024, 21:26 IST
   

ಮ್ಯೂನಿಚ್‌ : ಸ್ಪೇನ್ ತಂಡ ಮಂಗಳವಾರ ರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ 2–1 ಗೋಲುಗಳಿಂದ ಫ್ರಾನ್ಸ್ ತಂಡವನ್ನು ಸೋಲಿಸಿ ಯುರೊ 2024 ಫುಟ್‌ಬಾಲ್‌ ಟೂರ್ನಿಯ ಫೈನಲ್ ತಲುಪಿತು. 16 ವರ್ಷದ ಲಮೀನ್ ಯಮಾಲ್ ಅವರು ಈ ಟೂರ್ನಿಯ ಇತಿಹಾಸದಲ್ಲಿ ಗೋಲು ಗಳಿಸಿದ ಅತಿ ಕಿರಿಯ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು.

ಫ್ರಾನ್ಸ್ ಈ ಟೂರ್ನಿಯಲ್ಲಿ ಪ್ರಶಸ್ತಿಗೆ ನೆಚ್ಚಿನ ತಂಡಗಳಲ್ಲಿ ಒಂದಾಗಿತ್ತು. ಆ ತಂಡವನ್ನು ಸೋಲಿಸುವ ಮೂಲಕ ತಮ್ಮ ತಂಡ ಇನ್ನೂ ಸುಧಾರಿತ ಆಟವಾಡಬಹುದೆಂದು ಸ್ಪೇನ್‌ ಕೋಚ್‌ ಲೂಯಿಸ್‌ ಡಿ ಲಾ ಫುಂಟೆ ಅವರು ಫೈನಲ್ ಎದುರಾಳಿಗೆ (ಇಂಗ್ಲೆಂಡ್‌ ಅಥವಾ ನೆದರ್ಲೆಂಡ್‌) ಎಚ್ಚರಿಕೆ ನೀಡಿದ್ದಾರೆ.

ಮೊದಲ ಪಂದ್ಯದಲ್ಲಿ ಮುಖಕ್ಕೆ ಗಾಯಗಳಾದ ಕಾರಣ ಮಾಸ್ಕ್‌ ಧರಿಸಿ ಆಡುತ್ತಿದ್ದ ಕೀಲಿಯನ್ ಎಂಬಾಪೆ ಈ ಪಂದ್ಯದಲ್ಲಿ ಮಾಸ್ಕ್‌ ಧರಿಸಿರಲಿಲ್ಲ. 9ನೇ ನಿಮಿಷ ಅವರ ಕ್ರಾಸ್‌ನಲ್ಲಿ ರಾಂಡಾಲ್‌ ಕೊಲೊ ಮುಯಾನಿ ಚೆಂಡನ್ನು ಗೋಲಿನೊಳಕ್ಕೆ ಹೆಡ್‌ ಮಾಡಿ ಫ್ರಾನ್ಸ್‌ಗೆ ಮುನ್ನಡೆ ಒದಗಿಸಿದ್ದರು. ಆದರೆ 21ನೇ ನಿಮಿಷ ಯಮಾಲ್‌ ಅವರ ಗೋಲಿನಿಂದ ಸ್ಕೋರ್ ಸಮನಾಯಿತು.

ADVERTISEMENT

ನಾಲ್ಕು ನಿಮಿಷಗಳ ನಂತರ ಸ್ಪೇನ್‌ ಮುನ್ನಡೆ ಪಡೆಯಿತು. ದಾನಿ ಒಲ್ಮೊ ಗಳಿಸಿದ ಗೋಲು ಇದಕ್ಕೆ ಕಾರಣವಾಯಿತು. ವಿರಾಮದ ನಂತರ ಫ್ರಾನ್ಸ್‌ ಸ್ವಲ್ಪ ಮೇಲುಗೈ ಪಡೆದಿದ್ದರೂ ಗೋಲು ಗಳಿಸಲಾಗಲಿಲ್ಲ.

‘ಆರಂಭದಲ್ಲೇ ಗೋಲುಬಿಟ್ಟುಕೊಟ್ಟ ಕಾರಣ ನಾವು ಸ್ವಲ್ಪ ಕಷ್ಟದಲ್ಲಿದ್ದೆವು. ಚೆಂಡು ದೊರೆತ ತಕ್ಷಣ ಗೋಲು ಗಳಿಸಲು ಅವಕಾಶ ಸಿಕ್ಕಿತು. ಸಂತಸವಾಗಿದೆ’ ಎಂದು ಯಮಾಲ್ ಹೇಳಿದರು. ಅವರು ಶನಿವಾರ 17ನೇ ವರ್ಷದ ಹುಟ್ಟುಹಬ್ಬ ಆಚರಿಸಲಿದ್ದಾರೆ.

ಸ್ಪೇನ್‌ ನಾಲ್ಕನೇ ಬಾರಿ ಯುರೋಪಿಯನ್ ಚಾಂಪಿಯನ್‌ಷಿಪ್‌ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ಬರ್ಲಿನ್‌ನಲ್ಲಿ ಭಾನುವಾರ ನಡೆಯುವ ಫೈನಲ್‌ನಲ್ಲಿ ಈ ತಂಡ, ಇಂಗ್ಲೆಂಡ್‌– ನೆದರ್ಲೆಂಡ್ಸ್‌ ಸೆಮಿಫೈನಲ್ ಪಂದ್ಯದ ವಿಜೇತರನ್ನು ಎದುರಿಸಲಿದೆ

ಸ್ಪೇನ್‌ ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಎಲ್ಲ ಪಂದ್ಯಗಳನ್ನು ಗೆದ್ದ ಏಕೈಕ ತಂಡವೆನಿಸಿದೆ. 13 ಗೋಲುಗಳನ್ನು ಗಳಿಸಿದೆ. 1984ರಲ್ಲಿ ಫ್ರಾನ್ಸ್ ಸ್ಥಾಪಿಸಿದ್ದ ಸರ್ವಾಧಿಕ ಗೋಲುಗಳ ದಾಖಲೆ ಸರಿಗಟ್ಟಲು ಇನ್ನೊಂದು ಗೋಲಿನ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.