ತಾಷ್ಕೆಂಟ್: ಭಾರತ 16 ವರ್ಷದೊಳಗಿನವರ ಫುಟ್‌ಬಾಲ್ ತಂಡ ತನ್ನ ಪರಿಣಾಮಕಾರಿ ಪ್ರದರ್ಶನ ಮುಂದುವರಿಸಿದೆ. ಎಎಫ್‌ಸಿ ಚಾಂಪಿಯನ್‌ಷಿಪ್ ಕ್ವಾಲಿಫೈಯರ್ಸ್ ಪಂದ್ಯದಲ್ಲಿಶುಕ್ರವಾರ ಬಹರೇನ್ ತಂಡವನ್ನು 5–0 ಗೋಲುಗಳಿಂದ ಮಣಿಸಿತು.
ಸ್ಟ್ರೈಕರ್ ಸಿದ್ಧಾರ್ಥ್ ಹಾಗೂ ಶುಭೊ ಪಾಲ್ ವಿಜೇತ ತಂಡದಪರ ಉತ್ತಮ ಕಾಲ್ಚಳಕ ತೋರಿದರು. ಇವರಿಬ್ಬರೂ ತಲಾ ಎರಡು ಗೋಲು ಬಾರಿಸಿದರು. ಬಹ್ರೇನ್ ಗೋಲ್‌ಕೀಪರ್ ಮೊಹಮದ್ ಹಸನ್ ಜಾಫರ್ ಅವರ ಸ್ವಯಂಕೃತ ತಪ್ಪಿನಿಂದ ಒಂದು ಗೋಲು ಭಾರತದ ಖಾತೆಗೆ ಸೇರಿತು.
ಸಿದ್ಧಾರ್ಥ್ ಪಂದ್ಯದ ನಾಲ್ಕನೇ ನಿಮಿಷದಲ್ಲಿಯೇ ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು ಭೇದಿಸಿ ಮೊದಲ ಗೋಲು ತಂದುಕೊಟ್ಟರು. 25ನೇ ನಿಮಿಷದಲ್ಲಿ ಬಹರೇನ್‌ನ ಮೊಹಮದ್ ಜಾಫರ್ ಮೂಲಕ ಭಾರತಕ್ಕೆ ಎರಡನೇ ಗೋಲು ಬಂತು. ದಾಳಿ ಮುಂದುವರಿಸಿದ ಸಿದ್ಧಾರ್ಥ್ (27ನೇ ನಿಮಿಷ) ಮತ್ತೊಂದು ಯಶಸ್ಸು ಕಂಡರು.
ಶುಭೊ ಪಾಲ್ 45ನೇ ನಿಮಿಷದಲ್ಲಿಎದುರಾಳಿ ಡಿಫೆಂಡರ್‌ನನ್ನು ವಂಚಿಸಿ ಬಾಟಮ್ ಕಾರ್ನರ್ ಮೂಲಕ ಗೋಲು ಗಳಿಸಿದರು. ಭಾರತಕ್ಕೆ 4–0 ಮುನ್ನಡೆ ಲಭಿಸಿತು.
ಎರಡನೇ ಅವಧಿಯಲ್ಲಿ ಜಿದ್ದಾಜಿದ್ದಿ ಹೆಚ್ಚಿತು. 73ನೇ ನಿಮಿಷದಲ್ಲಿ ಪಾಲ್ ಇನ್ನೊಂದು ಗೋಲು ದಾಖಲಿಸಿದರು. ಭಾರತ ಸಂಭ್ರಮದ ಅಲೆಯಲ್ಲಿ ತೇಲಿತು.
ಬುಧವಾರ ಮೊದಲ ಪಂದ್ಯದಲ್ಲಿ ಭಾರತ, ತುರ್ಕಮೆನಿಸ್ತಾನ ತಂಡವನ್ನು 5–0 ಗೋಲುಗಳಿಂದಲೇ ಸೋಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.