ADVERTISEMENT

ಫುಟ್‌ಬಾಲ್ ಟೂರ್ನಿ: ರೋಚಕ ಪಂದ್ಯದಲ್ಲಿ ಮರ್ಚಂಟ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 15:10 IST
Last Updated 4 ಮಾರ್ಚ್ 2024, 15:10 IST
ಬಿವಿಎಸ್ ಬೆಂಗ್ರೆ ಎಫ್‌ಸಿಯ (ಎಡ) ತಂಡದ ಆಟಗಾರನ ಮುನ್ನಡೆ ತಡೆಯಲು ಮರ್ಚಂಟ್‌ ಎಫ್‌ಸಿ ಆಟಗಾರ ಪ್ರಯತ್ನಿಸಿದರು – ಪ್ರಜಾವಾಣಿ ಚಿತ್ರ /ಫಕ್ರುದ್ದೀನ್ ಎಚ್
ಬಿವಿಎಸ್ ಬೆಂಗ್ರೆ ಎಫ್‌ಸಿಯ (ಎಡ) ತಂಡದ ಆಟಗಾರನ ಮುನ್ನಡೆ ತಡೆಯಲು ಮರ್ಚಂಟ್‌ ಎಫ್‌ಸಿ ಆಟಗಾರ ಪ್ರಯತ್ನಿಸಿದರು – ಪ್ರಜಾವಾಣಿ ಚಿತ್ರ /ಫಕ್ರುದ್ದೀನ್ ಎಚ್   

ಮಂಗಳೂರು: ಅಂತಿಮ ನಿಮಿಷಗಳಲ್ಲಿ ರೋಚಕ ಕ್ಷಣಗಳಿಗೆ ಸಾಕ್ಷಿಯಾದ ಪಂದ್ಯದಲ್ಲಿ ಮರ್ಚಂಟ್‌ ಎಫ್‌ಸಿ ತಂಡ ಸರೋಜಿನಿ ಪುಂಡಲೀಕ ಕರ್ಕೇರ ಬೆಂಗ್ರೆ ಸ್ಮಾರಕ ದಕ್ಷಿಣ ಭಾರತ ಆಹ್ವಾನಿತ ಫುಟ್‌ಬಾಲ್ ಟೂರ್ನಿ ‘ಬಿವಿಎಸ್‌ ಅಮೃತ ಮಹೋತ್ಸವ ಟ್ರೋಫಿ’ ಪಂದ್ಯದಲ್ಲಿ ಗೆಲುವಿನ ನಗೆ ಬೀರಿತು.

ನಗರದ ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲದ ಅಮೃತ ಮಹೋತ್ಸವದ ಅಂಗವಾಗಿ ನೆಹರೂ ಮೈದಾನದಲ್ಲಿ ನಡೆಯುತ್ತಿರುವ ಟೂರ್ನಿಯ ಸೋಮವಾರದ ಮೊದಲ ಪಂದ್ಯದಲ್ಲಿ ಮರ್ಚಂಟ್‌, ಪೆನಾಲ್ಟಿ ಶೂಟೌಟ್‌ನಲ್ಲಿ (5–3) ಬಿವಿಎಸ್ ಬೆಂಗ್ರೆ ಎಫ್‌ಸಿಯನ್ನು ಮಣಿಸಿತು. ಮತ್ತೊಂದು ಪಂದ್ಯದಲ್ಲಿ ಅಜಾರಿಯ ಎಫ್‌ಸಿ 4–0ಯಿಂದ ಮಂಗಳೂರು ಸ್ಪೋರ್ಟಿಂಗ್ ಎದುರು ಜಯ ಸಾಧಿಸಿತು.

ಮೊದಲ ಪಂದ್ಯದ ಮೊದಲ ನಿಮಿಷದಲ್ಲೇ ಗೋಲು ಗಳಿಸಿದ ಮುಜಾಮಿಲ್, ಆತಿಥೇಯ ಬಿವಿಎಸ್‌ಗೆ ಮುನ್ನಡೆ ಗಳಿಸಿಕೊಟ್ಟಿದ್ದರು. 12ನೇ ನಿಮಿಷದಲ್ಲಿ ರಾಜೇಶ್ ಮುನ್ನಡೆಯನ್ನು ಹೆಚ್ಚಿಸಿದರು. 16ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ರಫಿ, ಮರ್ಚಂಟ್‌ ಪಾಳಯದಲ್ಲಿ ಭರವಸೆ ಮೂಡಿಸಿದರು. ನಿಗದಿತ ಅವಧಿ ವರೆಗೂ ಬಿವಿಎಸ್‌ ಮುನ್ನಡೆ ಬಿಟ್ಟುಕೊಡಲಿಲ್ಲ. ಆದರೆ ಇಂಜುರಿ ಅವಧಿಯಲ್ಲಿ ಜಮ್ಶೀರ್ ಗಳಿಸಿದ ಗೋಲಿನ ಮೂಲಕ ಮರ್ಚಂಟ್ ಸಮಬಲ ಸಾಧಿಸಿತು.

ADVERTISEMENT

ಪೆನಾಲ್ಟಿ ಶೂಟೌಟ್‌ನಲ್ಲಿ ಮರ್ಚಂಟ್ ಪರವಾಗಿ ವ್ಯಾಲೆಂಟಿನ್‌, ಜಮ್ಶೀರ್ ಮತ್ತು ವಿಕ್ಟರ್‌ ಯಶಸ್ಸು ಸಾಧಿಸಿದರು. ಆತಿಥೇಯರ ಪರವಾಗಿ ದಿವಾಕರ್ ಮಾತ್ರ ಚೆಂಡನ್ನು ಗುರಿ ಮುಟ್ಟಿದರು.

ಜಿಯಾದ್ ‘ಡಬಲ್’ ಸಂಭ್ರಮ

ಜಿಯಾದ್ (46, 47ನೇ ನಿಮಿಷ) ಗಳಿಸಿದ ಎರಡು ಗೋಲುಗಳ ಬಲದಿಂದ ಅಜಾರಿಯ ಎಫ್‌ಸಿ ತಂಡ ಮಂಗಳೂರು ಸ್ಪೋರ್ಟಿಂಗ್ ಎದುರು ಭರ್ಜರಿ ಜಯ ಗಳಿಸಿತು. ತಂಡಕ್ಕೆ 3ನೇ ನಿಮಿಷದಲ್ಲಿ ಇಮ್ರಾನ್ ಮುನ್ನಡೆ ತಂದುಕೊಟ್ಟಿದ್ದರು. 30ನೇ ನಿಮಿಷದಲ್ಲಿ ಸುಹೈಬ್‌ ಸಂಭ್ರಮ ಇಮ್ಮಡಿಗೊಳಿಸಿದರು.

ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಕಸಬಾ ಬೆಂಗ್ರೆ ಎಫ್‌ಸಿ ಮತ್ತು ಅಜಾರಿಯ ಎಫ್‌ಸಿ, 4.30ಕ್ಕೆ ಜೆಮ್ ಎಫ್‌ಸಿ ಮತ್ತು ಮರ್ಚಂಟ್‌ ಎಫ್‌ಸಿ ತಂಡಗಳು ಮುಖಾಮುಖಿ ಆಗಲಿವೆ.

ಬಿವಿಎಸ್ ಬೆಂಗ್ರೆ ಎಫ್‌ಸಿಯ (ಎಡ) ತಂಡದ ಆಟಗಾರನ ಮುನ್ನಡೆ ತಡೆಯಲು ಮರ್ಚಂಟ್‌ ಎಫ್‌ಸಿ ಆಟಗಾರ ಪ್ರಯತ್ನಿಸಿದರು – ಪ್ರಜಾವಾಣಿ ಚಿತ್ರ /ಫಕ್ರುದ್ದೀನ್ ಎಚ್
ಬಿವಿಎಸ್ ಬೆಂಗ್ರೆ ಎಫ್‌ಸಿ ಎದುರಿನ ಪಂದ್ಯದಲ್ಲಿ ಮರ್ಚಂಟ್‌ ಎಫ್‌ಸಿಯ ಜಮ್ಶೀರ್‌ ಚೆಂಡಿನೊಂದಿಗೆ ಸಾಗಿದರು –ಪ್ರಜಾವಾಣಿ ಚಿತ್ರ /ಫಕ್ರುದ್ದೀನ್ ಎಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.