ಅಲ್ ಖೊರ್, ಕತಾರ್: ಅಲ್ ಬೈತ್ ಕ್ರೀಡಾಂಗಣವನ್ನು ‘ಕೆಂಪು ಸಮುದ್ರ’ ವಾಗಿ ಬದಲಾಯಿಸಿದ್ದ ಮೊರೊಕ್ಕೊ ಅಭಿಮಾನಿಗಳ ಕನಸನ್ನು ನುಚ್ಚುನೂರು ಮಾಡಿದ ಫ್ರಾನ್ಸ್ ತಂಡ, ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಫೈನಲ್ ಪ್ರವೇಶಿಸಿತು.
ಬುಧವಾರ ರಾತ್ರಿ ನಡೆದ ಸೆಮಿಫೈನಲ್‌ನಲ್ಲಿ ಥಿಯೊ ಹೆರ್ನಾಂಡಿಜ್ ಮತ್ತು ರಾಂದಲ್ ಕೊಲೊ ಮುವಾನಿ ಅವರು ತಂದಿತ್ತ ಗೋಲುಗಳ ನೆರವಿನಿಂದ ಹಾಲಿ ಚಾಂಪಿಯನ್ನರು 2–0 ಗೋಲುಗಳಿಂದ ಗೆದ್ದರು. ಟೂರ್ನಿಯಲ್ಲಿ ಸಾಕಷ್ಟು ಅಚ್ಚರಿಯ ಫಲಿತಾಂಶಗಳೊಂದಿಗೆ ಮುನ್ನುಗ್ಗಿದ್ದ ಮೊರೊಕ್ಕೊ ತಂಡದ ಓಟಕ್ಕೆ ಕೊನೆಗೂ ತೆರೆಬಿತ್ತು.
ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಫ್ರಾನ್ಸ್ ತಂಡ, ಅರ್ಜೆಂಟೀಂನಾದ ಸವಾಲು ಎದುರಿಸಲಿದೆ. ಟೂರ್ನಿಯ ಅಂತಿಮ ಹಣಾಹಣಿಯನ್ನು ದಿಗ್ಗಜ ಆಟಗಾರ ಲಯೊನೆಲ್ ಮೆಸ್ಸಿ ಮತ್ತು ‘ನವತಾರೆ’ ಕಿಲಿಯನ್ ಎಂಬಾಪೆ ನಡುವಿನ ಹೋರಾಟ ಎಂದೇ ಬಿಂಬಿಸಲಾಗಿದೆ.
1958 ಮತ್ತು 1962 ರಲ್ಲಿ ಬ್ರೆಜಿಲ್ ತಂಡ ಸತತವಾಗಿ ವಿಶ್ವಕಪ್ ಜಯಿಸಿದ್ದ ಬಳಿಕ ಯಾವುದೇ ತಂಡ ಅಂತಹ ಸಾಧನೆ ಮಾಡಿಲ್ಲ. ಇದೀಗ ಫ್ರಾನ್ಸ್ ತಂಡಕ್ಕೆ ಸತತ ಎರಡು ಟ್ರೋಫಿ ಜಯಿಸುವ ಅವಕಾಶ ಲಭಿಸಿದೆ. ಮೂರನೇ ಸ್ಥಾನವನ್ನು ನಿರ್ಣಯಿಸಲು ಶನಿವಾರ ನಡೆಯಲಿರುವ ‘ಪ್ಲೇ ಆಫ್’ ಪಂದ್ಯದಲ್ಲಿ ಮೊರೊಕ್ಕೊ– ಕ್ರೊವೇಷ್ಯಾ ಎದುರಾಗಲಿವೆ.
ಜಿದ್ದಾಜಿದ್ದಿನ ಹೋರಾಟ: ವಿಶ್ವಕಪ್ ಟೂರ್ನಿಯಲ್ಲಿ ಚೊಚ್ಚಲ ಸೆಮಿಫೈನಲ್ ಪಂದ್ಯವನ್ನಾಡಿದ ಆಫ್ರಿಕಾ ಖಂಡದ ಹಾಗೂ ಅರಬ್ ನಾಡಿನ ಮೊದಲ ತಂಡ ಎನಿಸಿರುವ ಮೊರೊಕ್ಕೊ, ಹಾಲಿ ಚಾಂಪಿಯನ್ನರಿಗೆ ತಕ್ಕ ಪೈಪೋಟಿ ನೀಡಿತು.
ಫ್ರಾನ್ಸ್ ತಂಡ ಐದನೇ ನಿಮಿಷದಲ್ಲೇ ಮುನ್ನಡೆ ಗಳಿಸಿತು. ಆಂಟೋನ್ ಗ್ರೀಸ್‌ಮನ್ ಅವರ ಪಾಸ್‌ನಿಂದ ದೊರೆತ ಚೆಂಡನ್ನು ಎಂಬಾಪೆ ಅವರು ಗುರಿಯತ್ತ ಒದ್ದರೂ ಮೊರೊಕ್ಕೊ ಡಿಫೆಂಡರ್‌ಗೆ ತಾಗಿ ಹೆರ್ನಾಂಡಿಜ್ ಬಳಿ ಹೋಯಿತು. ಮೇಲಕ್ಕೆ ಪುಟಿದ ಚೆಂಡನ್ನು ತಮ್ಮ ಎಡಗಾಲಿನಿಂದ ಚಾಣಾಕ್ಷ ರೀತಿಯಲ್ಲಿ ಗುರಿ ಸೇರಿಸಿದರು.
ಆರಂಭದಲ್ಲೇ ಗೋಲು ಬಿದ್ದದ್ದು, ಫ್ರಾನ್ಸ್ ಆಟಗಾರರ ಉತ್ಸಾಹವನ್ನು ಇಮ್ಮಡಿಗೊಳಿಸಿತು. ಮೊದಲ ಅವಧಿಯಲ್ಲಿ ಒಲಿವಿಯರ್ ಜಿರೋಡ್ ಅವರಿಗೆ ಗೋಲು ಗಳಿಸಲು ಎರಡು ಅತ್ಯುತ್ತಮ ಅವಕಾಶಗಳು ಲಭಿಸಿದರೂ, ಯಶಸ್ಸು ಸಿಗಲಿಲ್ಲ.
44ನೇ ನಿಮಿಷದಲ್ಲಿ ಮೊರೊಕ್ಕೊ ತಂಡದ ಜವಾದ್ ಎಲ್ ಯಾಮಿಕ್ ಅವರು ‘ಓವರ್‌ಹೆಡ್’ ಕಿಕ್ ಮಾಡಿ ಗೋಲು ಗಳಿಸಲು ನಡೆಸಿದ ಪ್ರಯತ್ನವನ್ನು ಗೋಲ್‌ಲೈನ್ ಬಳಿ ಎದುರಾಳಿ ಡಿಫೆಂಡರ್ ತಡೆದರು. ಎರಡನೇ ಅವಧಿಯ ಆರಂಭದಲ್ಲಿ ಸಮಬಲದ ಗೋಲಿಗಾಗಿ ಮೊರೊಕ್ಕೊ ಮೇಲಿಂದ ಮೇಲೆ ಯತ್ನಿಸಿತಾದರೂ, ಯಶಸ್ಸು ದೊರೆಯಲಿಲ್ಲ.
ಸ್ಟಾರ್ ಆಟಗಾರ ಎಂಬಾಪೆ ಈ ಪಂದ್ಯದಲ್ಲಿ ಗೋಲು ಗಳಿಸಲಿಲ್ಲ. ಆದರೆ ಎರಡನೇ ಗೋಲು ಗಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. 79ನೇ ನಿಮಿಷದಲ್ಲಿ ಮೊರೊಕ್ಕೊದ ಇಬ್ಬರು ಡಿಫೆಂಡರ್‌ಗಳನ್ನು ತಮ್ಮ ಕಾಲ್ಚಳದಿಂದ ತಪ್ಪಿಸಿ, ಚೆಂಡನ್ನು ಗೋಲ್‌ಪೋಸ್ಟ್‌ನತ್ತ ತಳ್ಳಿದರು. ಅಲ್ಲೇ ಕಾಯುತ್ತಿದ್ದ ಕೊಲೊ ಮುವಾನಿ ಗುರಿ ಸೇರಿಸಿದರು. ಸಬ್‌ಸ್ಟಿಟ್ಯೂಟ್ ಆಟಗಾರನಾಗಿ ಅಂಗಳಕ್ಕಿಳಿದು 44 ಸೆಕೆಂಡುಗಳು ಆಗುವಷ್ಟರಲ್ಲೇ ಅವರು ಗೋಲು ಗಳಿಸಿದರು. ಎರಡು ಗೋಲುಗಳ ಮುನ್ನಡೆ ಪಡೆದ ಬಳಿಕ ಫ್ರಾನ್ಸ್ ರಕ್ಷಣೆಗೆ ಒತ್ತು ನೀಡಿತು.
ಪಂದ್ಯಕ್ಕೆ ಮುನ್ನ ತಾಲೀಮಿನ ವೇಳೆ ನಯೇಫ್ ಅಗುಯೆದ್ ಗಾಯಗೊಂಡದ್ದು ಮತ್ತು ನಾಯಕ ಹಾಗೂ ಸೆಂಟರ್ ಬ್ಯಾಕ್ ಆಟಗಾರ ರೊಮೇನ್ ಸೇಸ್ 21ನೇ ನಿಮಿಷದಲ್ಲಿ ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿ ಅಂಗಳದಿಂದ ನಿರ್ಗಮಿಸಿದ್ದು ಮೊರೊಕ್ಕೊಗೆ ಹಿನ್ನಡೆಯಾಗಿ ಪರಿಣಮಿಸಿತು.
ಪಂದ್ಯ ವೀಕ್ಷಿಸಿದ ಮ್ಯಾಕ್ರೊನ್
ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯಲ್ ಮ್ಯಾಕ್ರೊನ್ ಅವರು ಸೆಮಿಫೈನಲ್ ಪಂದ್ಯ ವೀಕ್ಷಿಸಿದರು. ‘ನಾಲ್ಕು ವರ್ಷಗಳ ಹಿಂದೆ ರಷ್ಯಾದಲ್ಲಿ ನಡೆದ ಟೂರ್ನಿಯಲ್ಲೂ ತಂಡವನ್ನು ಬೆಂಬಲಿಸಲು ತೆರಳಿದ್ದೆ. ಈ ಬಾರಿ ತಂಡಕ್ಕೆ ಬೆಂಬಲ ನೀಡಲು ಕತಾರ್‌ಗೆ ಬಂದಿದ್ದೇನೆ’ ಎಂದು ಅವರು ಹೇಳಿದರು.
ಬುಧವಾರ ರಾತ್ರಿ ಸೆಮಿಫೈನಲ್ ವೀಕ್ಷಿಸಿದ ಬಳಿಕ ಅವರು ಐರೋಪ್ಯ ಒಕ್ಕೂಟದ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ರಸೆಲ್ಸ್‌ಗೆ ತೆರಳಿದರು. ಭಾನುವಾರ ನಡೆಯಲಿರುವ ಫೈನಲ್ ಪಂದ್ಯ ವೀಕ್ಷಿಸಲು ಮತ್ತೆ ಕತಾರ್‌ಗೆ ಬರಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.