ADVERTISEMENT

ಯುರೊ ಕಪ್‌: ಝೆಕ್‌- ಜಾರ್ಜಿಯಾ ಪಂದ್ಯ ಡ್ರಾ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 16:13 IST
Last Updated 22 ಜೂನ್ 2024, 16:13 IST
ಜಾರ್ಜಿಯಾದ ಡಿಫೆಂಡರ್ ಒಟಾರ್ ಕಕಾಬೇಡ್ಜ್ (ಎಡಗಡೆ) ಅವರು ಚೆಂಡಿನ ಮೇಲೆ ನಿಯಂತ್ರಣಕ್ಕಾಗಿ ಝೆಕ್ ರಿಪಬ್ಲಿಕ್‌ನ ಡೇವಿಡ್‌ ಜುರಾಸೆಕ್‌ (ಬಿಳಿ ಪೋಷಾಕು) ಜೊತೆ ಪೈಪೋಟಿಯಲ್ಲಿ ತೊಡಗಿದರು.
ಎಎಫ್‌ಪಿ ಚಿತ್ರ
ಜಾರ್ಜಿಯಾದ ಡಿಫೆಂಡರ್ ಒಟಾರ್ ಕಕಾಬೇಡ್ಜ್ (ಎಡಗಡೆ) ಅವರು ಚೆಂಡಿನ ಮೇಲೆ ನಿಯಂತ್ರಣಕ್ಕಾಗಿ ಝೆಕ್ ರಿಪಬ್ಲಿಕ್‌ನ ಡೇವಿಡ್‌ ಜುರಾಸೆಕ್‌ (ಬಿಳಿ ಪೋಷಾಕು) ಜೊತೆ ಪೈಪೋಟಿಯಲ್ಲಿ ತೊಡಗಿದರು. ಎಎಫ್‌ಪಿ ಚಿತ್ರ   

ಹ್ಯಾಂಬರ್ಗ್ (ಜರ್ಮನಿ): ಜಾರ್ಜಿಯಾ ತಂಡ ಯುರೊ 2024 ಫುಟ್‌ಬಾಲ್‌ ಟೂರ್ನಿಯ ‘ಎಫ್‌’ ಗುಂಪಿನ ಪಂದ್ಯದಲ್ಲಿ ಶನಿವಾರ ಝೆಕ್‌ ರಿಪಬ್ಲಿಕ್ ತಂಡದ ವಿರುದ್ಧ 1–1 ಡ್ರಾ ಸಾಧಿಸಿತು. ಆ ಮೂಲಕ ಪ್ರಮುಖ ಟೂರ್ನಿಯೊಂದರಲ್ಲಿ ಮೊದಲ ಬಾರಿ ಪಾಯಿಂಟ್‌ ಪಡೆಯಿತು.

ವಿಡಿಯೊ ಮರುಪರಿಶೀಲನೆ ಮತ್ತೆ ಬಳಕೆಯಾಯಿತು. ಇದರಿಂದಾಗಿ ಝೆಕ್ ತಂಡದ ಆ್ಯಡಂ ಹ್ಲೊಝೆಕ್ ಅವರಿಗೆ ಗೋಲು ನಿರಾಕರಿಸಲಾಯಿತು. ಅವರ ಕೈ ಚೆಂಡಿಗೆ ತಾಗಿದ್ದು ಗೋಚರವಾಯಿತು.

ಈ ಟೂರ್ನಿಯಲ್ಲಿ ಪದಾರ್ಪಣೆ ಮಾಡುತ್ತಿರುವ ಏಕೈಕ ತಂಡವಾಗಿರುವ ಜಾರ್ಜಿಯಾ ವಿರಾಮಕ್ಕೆ ಕೆಲವೇ ಕ್ಷಣಗಳ ಮೊದಲು (45+4) ಮುನ್ನಡೆ ಪಡೆಯಿತು. ಝೆಕ್‌ ರಕ್ಷಣೆ ಆಟಗಾರ ರಾಬಿನ್ ಹ್ರನೆಕ್ ಅವರಿಗೆ ಕೈಗೆ ಚೆಂಡು ತಗುಲಿದ ಕಾರಣ ಜಾರ್ಜಿಯಾಕ್ಕೆ ‘ಪೆನಾಲ್ಟಿ’ ನೀಡಲಾಯಿತು. ಇದನ್ನು ಗೋಲಾಗಿ ಪರಿವರ್ತಿಸುವಲ್ಲಿ ಜಾರ್ಜಸ್‌ ಮಿಕಾವುತೇಡ್ಜ್‌ ಯಶಸ್ವಿಯಾದರು.

ADVERTISEMENT

ಆದರೆ ಝೆಕ್‌ ತಂಡ ವಿರಾಮ ಕಳೆದು 14 ನಿಮಿಷಗಳ ನಂತರ ಸ್ಕೋರ್ ಸಮ ಮಾಡಿಕೊಂಡಿತು. ಮುಂಚೂಣಿ ಆಟಗಾರರೊಬ್ಬರು ಹೆಡ್‌ ಮಾಡಿದ ಚೆಂಡು ಗೋಲುಗಂಬಕ್ಕೆ ಬಡಿದು ರಿಬೌಂಡ್‌ ಆದಾಗ ಪ್ಯಾಟ್ರಿಕ್ ಶಿಕ್ ಅದನ್ನು ಎದೆಯಿಂದ ಗೋಲಿನೊಳಕ್ಕೆ ಕಳುಹಿಸಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಪ್ಯಾಟ್ರಿಕ್ ಮೀನಖಂಡದ ಗಾಯದಿಂದ ನಿರ್ಗಮಿಸಿದರು.

ಜಾರ್ಜಿಯಾಕ್ಕೆ ದೊರೆತ ಇನ್ನೊಂದು ಸುವರ್ಣಾವಕಾಶದಲ್ಲಿ ಸಬಾ ಲೊಬ್ಯಾನಿಡ್ಜ್ ವಿಫಲರಾದರು. ಪ್ರತಿದಾಳಿಯಿಂದ ದೊರೆತ ಅವಕಾಶದಲ್ಲಿ ಅವರು ಗೋಲಿನತ್ತ ಒದ್ದ ಚೆಂಡು ಅಡ್ಡಪಟ್ಟಿಯ ಮೇಲಿಂದ ಹಾದುಹೋಯಿತು.

ಈ ಡ್ರಾದಿಂದಾಗಿ ನಾಕೌಟ್‌ ಪ್ರವೇಶಿಸಬೇಕಾದರೆ ಈ ಎರಡು ತಂಡಗಳಲ್ಲಿ ಒಂದು ತಂಡ ತನ್ನ ಮುಂದಿನ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ. ಪೋರ್ಚುಗಲ್ ಮತ್ತು ಟರ್ಕಿ ಈ ಗುಂಪಿನಲ್ಲಿರುವ ಇನ್ನೆರಡು ತಂಡಗಳಾಗಿವೆ.

ಗೋಲಿಲ್ಲದೇ ‘ಡ್ರಾ’: ಫ್ರಾನ್ಸ್ ಮತ್ತು ನೆದರ್ಲೆಂಡ್ಸ್‌ ನಡುವೆ ಶುಕ್ರವಾರ ರಾತ್ರಿ ನಡೆದ ‘ಡಿ’ ಗುಂಪಿನ ಪಂದ್ಯ ಗೋಲಿಲ್ಲದೇ ಡ್ರಾ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.