ಫತೋರ್ಡ, ಗೋವಾ: ಜಿದ್ದಾಜಿದ್ದಿಯ ಸೆಣಸಾಟಕ್ಕೆ ಸಾಕ್ಷಿಯಾದ ಪಂದ್ಯದಲ್ಲಿ ತಲಾ ಎರಡು ಗೋಲು ಗಳಿಸಿದ ಮುಂಬೈ ಸಿಟಿ ಎಫ್‌ಸಿ ಮತ್ತು ಎಫ್‌ಸಿ ಗೋವಾ ತಂಡಗಳು ಸಮಬಲ ಸಾಧಿಸಿದವು. ಫತೋರ್ಡ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಮೊದಲ ಸೆಮಿಫೈನಲ್‌ನ ಮೊದಲ ಲೆಗ್ ಪಂದ್ಯ 2–2ರಲ್ಲಿ ಡ್ರಾ ಆಯಿತು.
ಗೋವಾ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಎರಡನೇ ನಿಮಿಷದಲ್ಲಿ ಮಂದಾರ್ ರಾವ್ ದೇಸಾಯಿ ಅವರಿಂದ ಚೆಂಡು ಕಸಿದುಕೊಂಡ ಪ್ರಿನ್ಸ್‌ಟನ್ ರೆಬೆಲ್ಲೊ ನಿಯಂತ್ರಣ ಸಾಧಿಸಿ ಎಡಭಾಗದಲ್ಲಿದ್ದ ಸೇವಿಯರ್ ಗಾಮಾ ಅವರತ್ತ ತಳ್ಳಿದರು. ಅವರು ಗೋಲುಪೆಟ್ಟಿಗೆಯತ್ತ ಚೆಂಡನ್ನು ವಾಯುವೇಗದಲ್ಲಿ ಒದ್ದರು. ಆದರೆ ಮುಂಬೈ ಡಿಫೆಂಡರ್‌ಗಳು ಆ ಪ್ರಯತ್ನವನ್ನು ವಿಫಲಗೊಳಿಸಿದರು. ಐದನೇ ನಿಮಿಷದಲ್ಲೂ ಸೇವಿಯರ್ ಗಾಮಾ ಮತ್ತು ಜಾರ್ಜ್ ಒರ್ಟಿಸ್ ಪ್ರಬಲ ದಾಳಿಗೆ ಮುಂದಾದರು. ಆದರೆ ಫಲ ಸಿಗಲಿಲ್ಲ.
10ನೇ ನಿಮಿಷದಲ್ಲಿ ಮುಂಬೈಗೆ ಫ್ರೀ ಕಿಕ್ ಅವಕಾಶ ಲಭಿಸಿತು. ಅಹಮ್ಮದ್ ಜೊಹೊ ಒದ್ದ ಚೆಂಡು ಗುರಿಯತ್ತ ಸಾಗದಂತೆ ತಡೆಯುವಲ್ಲಿ ಗೋವಾ ಡಿಫೆಂಡರ್‌ಗಳು ಯಶಸ್ವಿಯಾದರು. ನಂತರ ಉಭಯ ತಂಡಗಳ ನಡುವೆ ತುರುಸಿನ ಪೈಪೋಟಿ ನಡೆಯಿತು. 19ನೇ ನಿಮಿಷದಲ್ಲಿ ಅಲೆಕ್ಸಾಂಡರ್ ಜೇಸುರಾಜ್ ಎಸಗಿದ ಪ್ರಮಾದ ಮುಂಬೈಗೆ ಮಾರಕವಾಯಿತು. ಗೋವಾದ ಮನವಿಗೆ ಸ್ಪಂದಿಸಿದ ರೆಫರಿ ಪೆನಾಲ್ಟಿ ಅವಕಾಶ ನೀಡಿದರು. 20ನೇ ನಿಮಿಷದಲ್ಲಿ ಇಗರ್ ಆಂಗುಲೊ ಚೆಂಡನ್ನು ಗುರಿಮುಟ್ಟಿಸಿ ಮುನ್ನಡೆ ತಂದುಕೊಟ್ಟರು.
ತಿರುಗೇಟು ನೀಡಿದ ಮುಂಬೈ
38ನೇ ನಿಮಿಷದಲ್ಲಿ ಹ್ಯೂಗೊ ಬೌಮೋಸ್ ಮೂಲಕ ಮುಂಬೈ ಸಿಟಿ ಎಫ್‌ಸಿ ತಿರುಗೇಟು ನೀಡಿತು. ದ್ವಿತೀಯಾರ್ಧದಲ್ಲಿ ಹೋರಾಟ ಇನ್ನಷ್ಟು ಕಳೆಕಟ್ಟಿತು. 50ನೇ ನಿಮಿಷದಲ್ಲಿ ಬಾರ್ತೊಲೊಮೆ ಒಗ್ಬೆಚೆ ಸುವರ್ಣಾವಕಾಶವನ್ನು ಕೈಚೆಲ್ಲಿದರು. 59ನೇ ನಿಮಿಷದಲ್ಲಿ ಸೇವಿಯರ್ ಗಾಮಾ ಗಳಿಸಿದ ಗೋಲಿನೊಂದಿಗೆ ಗೋವಾ ಮತ್ತೊಮ್ಮೆ ಮುನ್ನಡೆ ಗಳಿಸಿತು. ಆದರೆ ಮೂರೇ ನಿಮಿಷಗಳಲ್ಲಿ ಮುಂಬೈ ತಿರುಗೇಟು ನೀಡಿತು. ಮೊರ್ತಜಾ ಫಾಲ್ ಗಳಿಸಿದ ಗೋಲಿನೊಂದಿಗೆ ತಂಡ ಸಮಬಲ ಸಾಧಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.