ಮಡಗಾಂವ್: ಋತುವಿನಲ್ಲಿ ಮೊದಲ ಜಯದ ನಿರೀಕ್ಷೆಯಲ್ಲಿರುವ ಎಫ್‌ಸಿ ಗೋವಾ ತಂಡವು ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಸೋಮವಾರ ನಾರ್ತ್ ಈಸ್ಟ್ ಯುನೈಟೆಡ್ ಎಫ್‌ಸಿ ಎದುರು ಸೆಣಸಲಿದೆ.
ಟೂರ್ನಿಯ ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಎದುರು 2–2ರ ಡ್ರಾ ಮಾಡಿಕೊಂಡಿದ್ದ ಗೋವಾ, ಎರಡನೇ ಹಣಾಹಣಿಯಲ್ಲಿ ಮುಂಬೈ ಸಿಟಿ ಎಫ್‌ಸಿ ಎದುರು ಮುಗ್ಗರಿಸಿತ್ತು.
ಈ ಪಂದ್ಯದಲ್ಲಿ ಪೂರ್ಣ ಮೂರು ಪಾಯಿಂಟ್ಸ್ ಗಳಿಸಿ, ಉಳಿದ ಪಂದ್ಯಗಳಿಗೆ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವ ಅಪೇಕ್ಷೆಯಲ್ಲಿ ಗೋವಾ ತಂಡದ ಕೋಚ್ ಜುವಾನ್ ಫೆರಾಂಡೊ ಇದ್ದಾರೆ. ಬಿಎಫ್‌ಸಿ ಎದುರು ಎರಡು ಗೋಲು ಗಳಿಸಿ, ಪಂದ್ಯ ಡ್ರಾ ಮಾಡಿಕೊಳ್ಳುವಲ್ಲಿ ನೆರವಾಗಿದ್ದ ಸ್ಪೇನ್ ಸ್ಟ್ರೈಕರ್ ಇಗೊರ್ ಅಂಗುಲೊ ಮೇಲೆ ಆ ತಂಡ ಹೆಚ್ಚು ಭರವಸೆ ಇಟ್ಟುಕೊಂಡಿದೆ.
ಅಂಗುಲೊ ಮತ್ತೊಮ್ಮೆ ಕಾಲ್ಚಳಕ ತೋರಲು ಸಜ್ಜಾಗಿದ್ದಾರೆ. ಆದರೆ ಅವರಿಗೆ ಆರೆನ್ ಡಿಸಿಲ್ವಾ, ದೇವೇಂದ್ರ ಮುರ್ಗಾಂವಕರ್, ಇಶಾನ್ ಪಂಡಿತ್ ಹಾಗೂ ಮಕನ್ ಛೋಟೆ ಅವರು ನೆರವು ನೀಡಬೇಕಿದೆ.
ಗೋವಾದ ಡಿಫೆನ್ಸ್ ವಿಭಾಗವು ಇವಾನ್ ಗೊಂಜಾಲೆಜ್, ಜೇಮ್ಸ್ ಡೊನಾಚಿ ಅವರನ್ನು ಹೆಚ್ಚು ಅವಲಂಬಿಸಿದೆ.
ಗೋವಾ ತಂಡದಷ್ಟೇ ಬಲಿಷ್ಠ ಆಟಗಾರರನ್ನು ಹೊಂದಿರುವ ನಾರ್ತ್ ಈಸ್ಟ್ ಯುನೈಟೆಡ್ ಎಫ್‌ಸಿ ಕೂಡ ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ. ಮುಂಬೈ ಸಿಟಿ ಎಫ್‌ಸಿಯನ್ನು 1–0ಯಿಂದ ಮಣಿಸುವ ಮೂಲಕ ಶುಭಾರಂಭ ಮಾಡಿದ್ದ ಆ ತಂಡವು ಎರಡನೇ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಎದುರು 2–2 ಗೋಲುಗಳ ಡ್ರಾಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಕೇರಳ ಎದುರಿನ ಹಣಾಹಣಿಯಲ್ಲಿ ತಂಡ ತೋರಿದ ಸಾಮರ್ಥ್ಯದ ಬಗ್ಗೆ ಗೋವಾ ತಂಡದ ಮುಖ್ಯ ಕೋಚ್ ಗೆರಾರ್ಡ್ ನೂಸ್ ಖುಷಿಯಾಗಿದ್ದಾರೆ.
ತಂಡದ ಆಟಗಾರರಾದ ಇದ್ರಿಸ್ಸಾ ಸಿಲ್ಲಾ ಹಾಗೂ ಘಾನಾದ ಕ್ವೇಸಿ ಅಪ್ಪೆ ಅವರ ಮೇಲೆ ಗೆರಾರ್ಡ್ ವಿಶ್ವಾಸ ಇರಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.