ಡಿಸೆಂಬರ್ ಮೊದಲ ವಾರದಲ್ಲಿ ಮುಕ್ತಾಯಗೊಂಡ ದಕ್ಷಿಣ ಏಷ್ಯಾ ಕ್ರೀಡಾಕೂಟದ ಮಹಿಳಾ ಫುಟ್‌ಬಾಲ್‌ನ ಫೈನಲ್ ಪಂದ್ಯ. ಭಾರತ ಮತ್ತು ಆತಿಥೇಯ ನೇಪಾಳ ತಂಡಗಳ ಮುಖಾಮುಖಿ. ಎರಡು ಗೋಲುಗಳನ್ನು ಗಳಿಸಿದ ಬಾಲಾದೇವಿ ಭಾರತಕ್ಕೆ 2-0 ಗೆಲುವಿನೊಂದಿಗೆ ಪ್ರಶಸ್ತಿ ಗಳಿಸಿಕೊಟ್ಟಿದ್ದರು. ಆದರೆ ಆ ಪಂದ್ಯದುದ್ದಕ್ಕೂ ಗಮನ ಸೆಳೆದದ್ದು ಭಾರತದ ಗೋಲ್‌ಕೀಪರ್ ಅದಿತಿ ಚೌಹಾಣ್. ಫೈನಲ್‌ಗೂ ಮೊದಲು ನಡೆದ ನಾಲ್ಕು ಪಂದ್ಯಗಳಲ್ಲೂ ಗೋಲು ಬಿಟ್ಟುಕೊಡದ ಅದಿತಿ ಪ್ರಶಸ್ತಿ ಹಂತದ ಪಂದ್ಯದಲ್ಲೂ ಎದುರಾಳಿಗಳ ಪ್ರಯತ್ನಕ್ಕೆ ತಡೆಗೋಡೆಯಾಗಿ ನಿಂತಿದ್ದರು.18ನೇ ನಿಮಿಷದಲ್ಲಿ ಭಾರತದ ಮೊದಲ ಗೋಲಿಗೆ ನೆರವಾದದ್ದು ಕೂಡ ಅವರೇ!
ಬಲಶಾಲಿ ಕಿಕ್‌ನೊಂದಿಗೆ ಎದುರಾಳಿ ತಂಡದ ಆವರಣಕ್ಕೆ ಅದಿತಿ ಅಟ್ಟಿದ ‘ಲಾಂಗ್‌ಬಾಲ್’ ನಿಖರವಾಗಿ ಬಾಲಾದೇವಿಯ ಬಳಿ ತಲುಪಿತ್ತು. ಬಾಲಾ ಸುಲಭವಾಗಿ ಗುರಿ ಕಂಡುಕೊಳ್ಳಲು ಇದು ನೆರವಾಯಿತು. ಭಾರತ ಮಹಿಳಾ ಫುಟ್‌ಬಾಲ್ ತಂಡದಲ್ಲಿ ಅದಿತಿಯ ಆಟವೇ ಹಾಗೆ. ಅಗತ್ಯವಿದ್ದರೆ ಸ್ಟ್ರೈಕರ್ ಆಗಿಯೂ ಕಣಕ್ಕೆ ಇಳಿಯಲು ಸಿದ್ಧ ಇರುವ ಅವರು ಫುಟ್‌ಬಾಲ್‌ನಲ್ಲಿ ಮಾತ್ರವಲ್ಲ, ಇತರ ಕ್ರೀಡೆಗಳಲ್ಲೂ ಪಳಗಿರುವ ಬಹುಮುಖ ಪ್ರತಿಭೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಇನ್‌ಸ್ಪೆಕ್ಟರ್ ಆಗಿದ್ದ ತಂದೆ ಎ.ವಿ.ಚೌಹಾಣ್ ಮಗಳಿಗೆ 9 ವರ್ಷ ಆಗಿದ್ದಾಗ ದೆಹಲಿಗೆ ಕರೆತಂದರು. ಕಾಶ್ಮೀರದಲ್ಲಿದ್ದಾಗಲೇ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅದಿತಿಯ ಕ್ರೀಡಾ ಜೀವನದ ಹಾದಿ ದೆಹಲಿಯಲ್ಲಿ ಮತ್ತೊಂದು ದಿಶೆಯತ್ತ ಸಾಗಿತು. ಕ್ರೀಡಾಪಟುವೂ ಆಗಿದ್ದ ಅಜ್ಜಿಯ ಬೆಂಬಲದೊಂದಿಗೆ ಶಾಲೆಯಲ್ಲಿ ಶಾಟ್‌ಪಟ್, ಡಿಸ್ಕಸ್, ಜಾವೆಲಿನ್ ಥ್ರೋಗಳಲ್ಲಿ ಬಹುಮಾನ ಗಳಿಸಿದರು.
ಬ್ಯಾಸ್ಕೆಟ್‌ಬಾಲ್‌ನಲ್ಲೂ ಸಾಧನೆ ಮಾಡಿದ ಅವರಿಗೆ ರಾಜ್ಯ ತಂಡದಲ್ಲಿ ಸ್ಥಾನ ಲಭಿಸಿತು. ಆದರೆ ಅವರ ಅಥ್ಲೆಟಿಕ್ ಸಾಮರ್ಥ್ಯವನ್ನು ಗಮನಿಸಿದ ಬ್ಯಾಸ್ಕೆಟ್‌ಬಾಲ್ ಕೋಚ್ ಫುಟ್‌ಬಾಲ್‌ನಲ್ಲಿ ಗೋಲ್‌ಕೀಪಿಂಗ್ ತರಬೇತಿ ಪಡೆಯಲು ಸಲಹೆ ನೀಡಿದರು. ಕಾಲ್ಚೆಂಡಾಟದಲ್ಲಿ ಅತ್ಯಂತ ವೇಗವಾಗಿ ಬೆಳೆದ ಅವರಿಗೆ 17ನೇ ವಯಸ್ಸಿನಲ್ಲಿ 19 ವರ್ಷದೊಳಗಿನವರ ತಂಡದಲ್ಲಿ ಸ್ಥಾನ ಲಭಿಸಿತು. 2012ರಲ್ಲಿ ಶ್ರೀಲಂಕಾದಲ್ಲಿ ನಡೆದ ಸ್ಯಾಫ್ ಮಹಿಳಾ ಚಾಂಪಿಯನ್‌ಷಿಪ್‌ನಲ್ಲಿ ಮಿಂಚಿ ಭಾರತಕ್ಕೆ ಪ್ರಶಸ್ತಿಯ ಕೊಡುಗೆ ನೀಡಿದ್ದರು.
ನಂತರ ನಡೆದದ್ದೆಲ್ಲವೂ ಅಮೋಘ. 2015ರಲ್ಲಿ ಇಂಗ್ಲೆಂಡ್ ವೆಸ್ಟ್‌ಹ್ಯಾಮ್ ತಂಡದವರು ಆಹ್ವಾನಿಸಿದಾಗ ಅದಿತಿಯ ವೃತ್ತಿ ಜೀವನದಲ್ಲಿ ಮಾತ್ರವಲ್ಲ, ಭಾರತದ ಮಹಿಳಾ ಫುಟ್‌ಬಾಲ್ ಕ್ಷೇತ್ರದಲ್ಲೂ ಮೈಲಿಗಲ್ಲೊಂದು ಸ್ಥಾಪನೆಯಾಯಿತು.
ಇಂಗ್ಲೆಂಡ್‌ನ ಪ್ರಮುಖ ತಂಡವೊಂದರಲ್ಲಿ ಆಡುವ ಅವಕಾಶ ಪಡೆದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ಅವರದಾಯಿತು. ಮೂರು ವರ್ಷ ಅಲ್ಲಿದ್ದ ಅದಿತಿ ಮರಳಿದಾಗ ಇನ್ನಷ್ಟು ಬಲಿಷ್ಠವಾಗಿದ್ದರು. ಅವರ ತಂತ್ರಗಳಿಗೆ ಹೊಸ ರೂಪು ಸಿಕ್ಕಿತ್ತು. ಹೀಗಾಗಿ ಯಾವುದೇ ತಂಡದ ಯಾವ ಸ್ಟ್ರೈಕರ್‌ಗೂ ಸವಾಲೊಡ್ಡಬಲ್ಲ ಸಾಮರ್ಥ್ಯ ಪಡೆದುಕೊಂಡರು. ಅದು ಈಗ ಅಂಗಣದಲ್ಲಿ ಮೂರ್ತಗೊಂಡಿದೆ.
ಫುಟ್‌ಬಾಲ್‌ನಲ್ಲಿ ಗೋಲ್‌ಕೀಪರ್ ಪಾತ್ರ ಮಹತ್ವದ್ದು. ಪ್ರೇಕ್ಷಕರು ಮತ್ತು ತಂಡದ ಸಹ ಆಟಗಾರರು ನಮ್ಮ ಮೇಲೆ ಭಾರಿ ಭರವಸೆ ಇರಿಸಿಕೊಂಡಿರುತ್ತಾರೆ. ಅದಕ್ಕೆ ತಕ್ಕಂತೆ ಆಡಬೇಕಾದ ಅಗತ್ಯವಿರುತ್ತದೆ. ಹೀಗಾಗಿ ಇದು ಸವಾಲಿನ ಕೆಲಸ.
-ಅದಿತಿ ಚೌಹಾಣ್, ಭಾರತ ತಂಡದ ಗೋಲ್‌ಕೀಪರ್
lಜನನ ನವೆಂಬರ್ 20, 1992
lಆಡಿದ ತಂಡಗಳು: ಭಾರತ ಮಹಿಳಾ ತಂಡ (2012ರಿಂದ), ಭಾರತ 19 ವರ್ಷದೊಳಗಿನವರ ತಂಡ (2008ರಿಂದ 2012), ಇಂಡಿಯಾ ರಷ್ (2018ರಿಂದ), ವೆಸ್ಟ್‌ಹ್ಯಾಮ್ ಯುನೈಟೆಡ್ ಲೇಡೀಸ್ (2015ರಿಂದ 2018), ಲಾಗ್‌ಬರೊ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ
lಅದಿತಿ ಚೌಹಾಣ್ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಗಳಿಸಿದ್ದಾರೆ
lಕ್ರೀಡಾ ವ್ಯವಸ್ಥಾಪನೆ ಕುರಿತು ಇಂಗ್ಲೆಂಡ್‌ನ ಲಾಗಬರೊ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ
lಮೊಹಮ್ಮದ್ ಸಲೀಂ ಮತ್ತು ಬೈಚುಂಗ್ ಬೂಟಿಯಾ ನಂತರ ಪ್ರಮುಖ ಬ್ರಿಟಿಷ್ ಕ್ಲಬ್‌ನಲ್ಲಿ ಆಡಿದ ಭಾರತದ ಫುಟ್‌ಬಾಲರ್
lವಿಮೆನ್ ಇನ್ ಫುಟ್‌ಬಾಲ್ ಪ್ರಶಸ್ತಿ ಗಳಿಸಿದ ಭಾರತದ ಮೊದಲ ಮಹಿಳೆ
ಅಕಾಡೆಮಿ ಸ್ಥಾಪನೆ; ಫುಟ್‌ಬಾಲ್ ಪೋಷಣೆ
ವಿದೇಶದಲ್ಲಿದ್ದ ಮೂರು ವರ್ಷ ಅದಿತಿ ಅನೇಕ ಹೊಸ ವಿಷಯಗಳನ್ನು ಕಲಿತಿದ್ದರು. ಭಾರತದ ಫುಟ್‌ಬಾಲ್‌ನ ಪರಿಸ್ಥಿತಿಯ ಮನವರಿಕೆಯಾದದ್ದೂ ಅಲ್ಲಿಯೇ. ಭಾರತಕ್ಕೆ ವಾಪಸಾದ ನಂತರ ಮಹಿಳಾ ಫುಟ್‌ಬಾಲ್ ಬೆಳವಣಿಗೆಗಾಗಿ ಅಕಾಡೆಮಿಯನ್ನೇ ಸ್ಥಾಪಿಸಲು ಮುಂದಾದರು. ಇದರ ಪರಿಣಾಮವೇ ‘ಶಿ ಕಿಕ್ಸ್ ಫುಟ್‌ಬಾಲ್ ಅಕಾಡೆಮಿ (ಎಸ್‌ಕೆಎಫ್‌ಎ). ದೆಹಲಿಯ ಎನ್‌ಸಿಆರ್‌ನಲ್ಲಿ ಈ ಅಕಾಡೆಮಿ ಇದೆ.
ಹೆಣ್ಣುಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಅದಿತಿ ಪ್ರೇರೇಪಿಸುತ್ತಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಕ್ರೀಡೆಯೂ ಹೇತುವಾಗಬಲ್ಲುದು ಎಂಬುದು ಅವರ ಅನಿಸಿಕೆ. ಭಾರತದಲ್ಲಿ ಮಹಿಳೆಯರು ಕ್ರೀಡಾ ಸಾಧನೆ ಮಾಡಬೇಕಾದರೆ ದೈಹಿಕ–ಮಾನಸಿಕ ದೃಢತೆ ಬೇಕು. ಇದನ್ನು ಗಳಿಸಿಕೊಡುವುದು ಶಿ ಕಿಕ್ಸ್ ಅಕಾಡೆಮಿಯ ಉದ್ದೇಶ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.