ADVERTISEMENT

ಯೂರೊ ಕಪ್ ಫುಟ್‌ಬಾಲ್ ಟೂರ್ನಿ: ಸ್ಪೇನ್‌–ಸ್ವಿಟ್ಜರ್ಲೆಂಡ್‌ಗೆ ಸೆಮಿಫೈನಲ್‌ ಕನಸು

ಕ್ವಾರ್ಟರ್ ಫೈನಲ್‌ ನಾಳೆಯಿಂದ: ಇಟಲಿಗೆ ಬೆಲ್ಜಿಯಂ ಸವಾಲು

ಏಜೆನ್ಸೀಸ್
Published 1 ಜುಲೈ 2021, 13:47 IST
Last Updated 1 ಜುಲೈ 2021, 13:47 IST
ಕ್ವಾರ್ಟರ್‌ ಫೈನಲ್ ಪಂದ್ಯಕ್ಕೆ ಅಭ್ಯಾಸ ನಡೆಸಿದ ಸ್ಪೇನ್ ಆಟಗಾರರು –ಎಎಫ್‌ಪಿ ಚಿತ್ರ
ಕ್ವಾರ್ಟರ್‌ ಫೈನಲ್ ಪಂದ್ಯಕ್ಕೆ ಅಭ್ಯಾಸ ನಡೆಸಿದ ಸ್ಪೇನ್ ಆಟಗಾರರು –ಎಎಫ್‌ಪಿ ಚಿತ್ರ   

ಸೇಂಟ್ ಪೀಟರ್ಸ್‌ಬರ್ಗ್‌: ಆರೂವರೆ ದಶಕಗಳ ನಂತರ ಪ್ರಮುಖ ಟೂರ್ನಿಯೊಂದರ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಸ್ವಿಟ್ಜರ್ಲೆಂಡ್‌ ತಂಡ ಯೂರೊ ಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶುಕ್ರವಾರ ಸ್ಪೇನ್ ವಿರುದ್ಧ ಸೆಣಸಲಿದೆ.

ವಿಶ್ವ ಚಾಂಪಿಯನ್ ‍ಫ್ರಾನ್ಸ್‌ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರೂ ಸ್ಪೇನ್‌ ವಿರುದ್ದ ಜಯಿಸಬೇಕಾದರೆ ಸ್ವಿಟ್ಜರ್ಲೆಂಡ್‌ ಕಠಿಣ ಪರಿಶ್ರಮಪಡಬೇಕಾಗಬಹುದು. ಆರಂಭದಲ್ಲಿ ಹೆಚ್ಚು ಮಿಂಚದಿದ್ದ ಸ್ಪೇನ್‌ ನಂತರ ಟೂರ್ನಿಯಲ್ಲಿ ಅಮೋಘ ಸಾಮರ್ಥ್ಯ ಪ್ರದರ್ಶಿಸಿದೆ. ಎರಡು ಪಂದ್ಯಗಳಲ್ಲಿ 10 ಗೋಲು ಗಳಿಸಿರುವ ಫಾರ್ವರ್ಡ್ ವಿಭಾಗದ ಆಟಗಾರರು ತಮ್ಮ ಕೆಚ್ಚನ್ನು ತೋರಿಸಿದ್ದಾರೆ.

ದಾಖಲೆಯ ನಾಲ್ಕನೇ ಚಾಂಪಿಯನ್‌ಷಿಪ್‌ ಮೇಲೆ ಸ್ಪೇನ್‌ ಕಣ್ಣಿಟ್ಟಿದೆ. ಆದರೆ ಈ ಕನಸು ನನಸಾಗಬೇಕಾದರೆ ಕೆಲವು ಲೋಪಗಳನ್ನು ಸರಿಪಡಿಸುವ ಅಗತ್ಯವಿದೆ. ಸ್ವಟ್ಜರ್ಲೆಂಡ್‌ ವಿರುದ್ಧ ಈ ಹಿಂದಿನ ಪಂದ್ಯಗಳಲ್ಲಿ ಸ್ಪೇನ್ ಮೇಲುಗೈ ಸಾಧಿಸಿದೆ. ಹಿಂದಿನ ಒಟ್ಟ 22 ಪಂದ್ಯಗಳಲ್ಲಿ ಸ್ಪೇನ್ ಒಂದು ಬಾರಿ ಮಾತ್ರ ಈ ತಂಡಕ್ಕೆ ಮಣಿದಿದೆ. ಹೀಗಾಗಿ ನಾಯಕ ಸರ್ಜಿಯೊ ಬಸ್ಕ್ವೀಟ್ಸ್‌ ಗೆಲುವಿನ ಭರವಸೆಯಲ್ಲಿದ್ದಾರೆ.

ADVERTISEMENT

1954ರ ವಿಶ್ವಕಪ್‌ ಟೂರ್ನಿಯ ಎಂಟರ ಘಟ್ಟ ಪ್ರವೇಶಿಸಿದ ನಂತರ ಸ್ವಿಟ್ಜರ್ಲೆಂಡ್ ಪ್ರಮುಖ ಟೂರ್ನಿಯ ನಾಕೌಟ್ ಹಂತಕ್ಕೇರಲಿಲ್ಲ. ತವರಿನಲ್ಲಿ ನಡೆದ ವಿಶ್ವಕಪ್‌ ಕ್ವಾರ್ಟರ್ ಫೈನಲ್‌ನಲ್ಲಿ ತಂಡ ಆಸ್ಟ್ರಿಯಾ ಎದುರು 5–7ರಲ್ಲಿ ಸೋತಿತ್ತು.

ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ಈಚಿನ ಕೆಲವು ದಿನಗಳಲ್ಲಿ ಕೊರೊನಾ ಏರುಗತಿಯಲ್ಲಿದೆ. ಆದರೂ ಪಂದ್ಯವನ್ನು ಅಲ್ಲೇ ನಡೆಸುವುದಾಗಿ ಆಯೋಜಕರು ತಿಳಿಸಿದ್ದಾರೆ.

ಪಂದ್ಯ ಆರಂಭ: ರಾತ್ರಿ 9.30 (ಭಾರತೀಯ ಕಾಲಮಾನ)
ನೇರ ಪ್ರಸಾರ: ಸೋನಿ ಸಿಕ್ಸ್‌

***
ಬೆಲ್ಜಿಯಂಗೆ ಇಟಲಿ ಸವಾಲು
ಮ್ಯೂನಿಚ್‌ (ಎಪಿ):
ಹಾಲಿ ಚಾಂಪಿಯನ್‌ ಪೋರ್ಚುಗಲ್ ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಬೆಲ್ಜಿಯಂ ಸೆಮಿಫೈನಲ್ ಕನಸಿನೊಂದಿಗೆ ಇಟಲಿಯನ್ನು ಎದುರಿಸಲಿದೆ. ರೊಮೇಲು ಲುಕಾಕು ಮೇಲೆ ಬೆಲ್ಜಿಯಂ ನಿರೀಕ್ಷೆ ಇರಿಸಿಕೊಂಡಿದೆ. ಟೂರ್ನಿಯಲ್ಲಿ ಜಯ ಗಳಿಸಿದ ನಾಲ್ಕು ಪಂದ್ಯಗಳಲ್ಲಿ ಅವರು ಮೂರು ಗೋಲು ಗಳಿಸಿದ್ದಾರೆ. ಕೆವಿನ್ ಡಿ ಬ್ರೂನಿ ಮತ್ತು ಏಡನ್ ಹಜಾರ್ಡ್‌ ಈ ಪಂದ್ಯದಲ್ಲಿ ಕಣಕ್ಕೆ ಇಳಿಯುತ್ತಿಲ್ಲ.

ಲಿಯೊನಾರ್ಡೊ ಬೊನುಚಿ ಮೇಲೆ ಇಟಲಿ ನಾಯಕ ಜಾರ್ಜಿಯೊ ಚೀಲಿನಿ ಭರವಸೆ ಇರಿಸಿಕೊಂಡಿದ್ದಾರೆ. ವಿಶ್ವಕಪ್‌ ಟೂರ್ನಿಯಲ್ಲಿ ಮೂರನೇ ಸ್ಥಾನ ಗಳಿಸಿದ ನಂತರ ಬೆಲ್ಜಿಯಂ ಪ್ರಮುಖ ಟೂರ್ನಿಗಳಲ್ಲಿ ಗಮನಾರ್ಹ ಸಾಧನೆ ಮಾಡಲಿಲ್ಲ. ಹಿಂದಿನ 13 ಪಂದ್ಯಗಳಲ್ಲಿ ಈ ತಂಡ ಸೋಲು ಕಂಡಿಲ್ಲ. ಹೀಗಾಗಿ ಇಟಲಿ ಎದುರಿನ ಪಂದ್ಯ ಕುತೂಹಲ ಕೆರಳಿಸಿದೆ.

ಪಂದ್ಯ ಆರಂಭ: ರಾತ್ರಿ 12.30 (ಭಾರತೀಯ ಕಾಲಮಾನ)
ನೇರ ಪ್ರಸಾರ: ಸೋನಿ ಸಿಕ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.