ADVERTISEMENT

ಯುರೋ ಕಪ್‌ | ಹಂಗರಿ ಎದುರು ಸೋಲು, ಸ್ಕಾಟ್ಲೆಂಡ್ ನಿರ್ಗಮನ

ಬರ್ನಬಾಸ್‌ ವರ್ಗಾಗೆ ಗಂಭೀರ ಗಾಯ

ಏಜೆನ್ಸೀಸ್
Published 24 ಜೂನ್ 2024, 16:18 IST
Last Updated 24 ಜೂನ್ 2024, 16:18 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಸ್ಟುಟ್‌ಗಾರ್ಟ್‌, ಜರ್ಮನಿ: ಇಂಜುರಿ ಅವಧಿಯ ಹತ್ತನೇ ನಿಮಿಷ ಕೆವಿನ್‌ ಸ್ಕೊಬೋತ್ ಗಳಿಸಿದ ಗೋಲಿನ ನೆರವಿನಿಂದ ಹಂಗರಿ ತಂಡ 1–0 ಯಿಂದ ಸ್ಕಾಟ್ಲೆಂಡ್ ತಂಡವನ್ನು ಸೋಲಿಸಿ ಯುರೋ ಕಪ್‌ 2024ರ ಟೂರ್ನಿಯ 16ರ ಸುತ್ತಿಗೆ ಸ್ಥಾನ ಭದ್ರಪಡಿಸಿಕೊಳ್ಳುವತ್ತ ಹೆಜ್ಜೆಯಿಟ್ಟಿತು. ಉತ್ತರಾರ್ಧದ ಅವಧಿಯ ಆಟದ ವೇಳೆ ಹಂಗರಿಯ ಬರ್ನಬಾಸ್‌ ವರ್ಗಾ ಅವರು ಗಂಭೀರವಾಗಿ ಗಾಯಗೊಂಡರು.

68ನೇ ನಿಮಿಷ ಫ್ರೀಕಿಕ್‌ನಲ್ಲಿ ಎತ್ತರದಿಂದ ಚಿಮ್ಮಿದೆ ಚೆಂಡನ್ನು ವರ್ಗಾ ಅವರಯ ಗೋಲಿಗೆ ಹೆಡ್‌ ಮಾಡುವ ಯತ್ನದಲ್ಲಿದ್ದಾಗ ಈ ಘಟನೆ ನಡೆಯಿತು. ಇನ್ನೊಂದೆಡೆ ಚೆಂಡನ್ನು ಪಂಚ್‌ ಮಾಡಿ ಆಚೆಹಾಕುವ ಯತ್ನದಲ್ಲಿದ್ದ ಸ್ಕಾಟ್ಲೆಂಡ್ ಗೋಲ್‌ಕೀಪರ್ ಆ್ಯಂಗಸ್‌ ಗುನ್‌ ಭುಜಕ್ಕೆ ಅವರ ಮುಖ ಬಲವಾಗಿ ಡಿಕ್ಕಿಯಾಗಿ ಕ್ಷಣಾರ್ಧದಲ್ಲಿ ಕುಸಿದುಬಿದ್ದರು. ಹಂಗರಿ ಆಟಗಾರರು ಅವರ ರಕ್ಷಣೆಗೆ ಧಾವಿಸಿದರು. ಕ್ಯಾಮೆರಾಗಳಿಗೆ ಕಾಣದಂತೆ ಹಂಗರಿ ಆಟಗಾರರು ಚಿಕಿತ್ಸೆ ವೇಳೆ ಬಟ್ಟೆ ಅಡ್ಡಹಿಡಿದಿದ್ದರು.

ADVERTISEMENT

ಸುಮಾರು ಹತ್ತು ನಿಮಿಷ ಆಟ ಸ್ಥಗಿತಗೊಂಡಿತು. ದವಡೆ ಸೇರಿದಂತೆ ಮುಖದ ಕೆಲಭಾಗದಲ್ಲಿ ತೀವ್ರ ಗಾಯಗಳಾಗಿದ್ದು, ಅವರನ್ನು ಸ್ಟ್ರೆಚರ್‌ನಲ್ಲಿ ಕರೆದೊಯ್ಯಲಾಯಿತು. ಹಂಗರಿ ಆಟಗಾರರು ಆಘಾತಗೊಂಡಿದ್ದರು.

ಸ್ಟುಟ್‌ಗಾರ್ಟ್‌ ಆಸ್ಪ್ರತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸ್ಥಿತಿ ಸ್ಥಿರವಾಗಿದೆ ಎಂದು ಸ್ವಲ್ಪ ಹೊತ್ತಿನ ನಂತರ ಹಂಗೆರಿಯ ಫುಟ್‌ಬಾಲ್‌ ಫೆಡರೇಷನ್‌ ತಿಳಿಸಿತು. ಅವರು ಉಳಿದ ಪಂದ್ಯಗಳಿಗೆ ಲಭ್ಯರಿಲ್ಲ ಎಂದು ಮ್ಯಾನೇಜರ್ ಖಚಿತಪಡಿಸಿದರು.

ಆಟ ಮರು ಆರಂಭವಾದಾಗ ಪೆನಾಲ್ಟಿ ನೀಡುವಂತೆ ಹಂಗರಿ ಆಟಗಾರರು ಕೇಳಿದರೂ ರೆಫ್ರಿಗಳು ಅದನ್ನು ಪುರಸ್ಕರಿಸಲಿಲ್ಲ.

ಸ್ಕೊಬೊತ್ ತಾವು ಗಳಿಸಿದ ಗೋಲನ್ನು ವರ್ಗಾ ಅವರಿಗೆ ಸರ್ಮಪಿಸುವುದಾಗಿ ತಿಳಿಸಿದರು.

ಈ ಸೋಲಿನಿಂದ, ಮೊದಲ ಬಾರಿ ಪ್ರಮುಖ ಟೂರ್ನಿಯೊಂದ ನಾಕೌಟ್‌ ತಲುಪುವ ಸ್ಕಾಟ್ಲೆಂಡ್ ಆಸೆ ನುಚ್ಚುನೂರಾಯಿತು.

ಇನ್ನೊಂದು ಪಂದ್ಯ ‘ಡ್ರಾ’:

‘ಎ’ ಗುಂಪಿನ ಇನ್ನೊಂದು ಪಂದ್ಯದಲ್ಲಿ ಸ್ವಿಜರ್ಲೆಂಡ್ ಜೊತೆ 1–1 ಡ್ರಾ ಮಾಡಿಕೊಂಡ ಜರ್ಮನಿ  ಅಗ್ರಸ್ಥಾನ ಪಡೆಯಿತು. ಸ್ವಿಜರ್ಲೆಂಡ್ ಎರಡನೇ ತಂಡವಾಗಿ ನಾಕೌಟ್‌ಗೆ ಮುನ್ನಡೆಯಿತು. ಮೂರನೇ ಸ್ಥಾನ ಪಡೆದ ಉತ್ತಮ ತಂಡವಾಗಿ ಹಂಗೆರಿ ತಂಡಕ್ಕೆ ಮುಂದಿನ ಸುತ್ತಿಗೆ ಹೋಗುವ ಅವಕಾಶ ಇದೆಯಾದರೂ, ಅದರ ಭವಿಷ್ಯ ಇತರ ಗುಂಪುಗಳ ಫಲಿತಾಂಶವನ್ನು ಅವಲಂಬಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.