ವಾಸ್ಕೊ: ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಹೈದರಾಬಾದ್ ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಬುಧವಾರ ಆತಿಥೇಯ ಎಫ್‌ಸಿ ಗೋವಾ ತಂಡವನ್ನು ಎದುರಿಸಲಿದೆ. ತಿಲಕ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.
ಟೂರ್ನಿಯಲ್ಲಿ ಇದುವರೆಗೆ ಮಿಶ್ರಫಲವನ್ನು ಕಂಡಿರುವ ಮ್ಯಾನ್ಯುಯೆಲ್ ಮಾರ್ಕ್ವೆಜ್ ಮಾರ್ಗದರ್ಶನದಲ್ಲಿರುವ ಹೈದರಾಬಾದ್ ತಂಡವು ಸತತ ಐದು ಪಂದ್ಯಗಳಲ್ಲಿ ಅಜೇಯವಾಗಿತ್ತು. ಆದರೆ ಸತತ ಎರಡು ಹಣಾಹಣಿಗಳಲ್ಲಿ ಸೋತು ಪಾಯಿಂಟ್ಸ್ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಜಾರಿದೆ.
ಈಗ ಆತಿಥೇಯ ತಂಡದ ಸವಾಲು ಹೈದರಾಬಾದ್ ಮುಂದಿದೆ. ಆದರೆ ಗೋವಾ ತಂಡದ ಡಿಫೆನ್ಸ್ ವಿಭಾಗದ ದೌರ್ಬಲ್ಯವನ್ನು ಹೈದರಾಬಾದ್ ಬಳಸಿಕೊಳ್ಳುವ ನಿರೀಕ್ಷೆಯಿದೆ.
ಆಕ್ರಮಣ ವಿಭಾಗದಲ್ಲಿ ಗೋವಾ ಪ್ರಬಲವಾಗಿದೆ. ಇದುವರೆಗೆ 10 ಗೋಲುಗಳನ್ನು ಆ ತಂಡದ ಆಟಗಾರರು ಗಳಿಸಿದ್ದಾರೆ. ದುರ್ಬಲವಾಗಿರುವ ಡಿಫೆಂಡಿಂಗ್ ವಿಭಾಗವು ಎದುರಾಳಿಗೆ ಒಂಬತ್ತು ಗೋಲು ಗಳಿಸಲು ಅವಕಾಶ ಮಾಡಿಕೊಟ್ಟಿದೆ.
ಪಂದ್ಯದಲ್ಲಿ ಹೆಚ್ಚಿನ ಪೈಪೋಟಿ ನಡೆಯುವ ನಿರೀಕ್ಷೆಯಿದೆ.
ಪಂದ್ಯ ಆರಂಭ: ಸಂಜೆ 7.30
ಸ್ಥಳ: ತಿಲಕ್ ಕ್ರೀಡಾಂಗಣ ವಾಸ್ಕೊ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
***
ಡ್ರಾ ಪಂದ್ಯದಲ್ಲಿ ಚೆನ್ನೈ
ಬ್ಯಾಂಬೊಲಿಮ್: ಚೆನ್ನೈಯಿನ್ ಎಫ್‌ಸಿ ಮತ್ತು ಎಟಿಕೆ ಮೋಹನ್ ಬಾಗನ್ ತಂಡಗಳ ನಡುವಣ ಮಂಗಳವಾರ ಇಂಡಿಯನ್ ಸೂಪರ್ ಲೀಗ್ ಫುಟ್ ಬಾಲ್ ಟೂರ್ನಿಯಲ್ಲಿ ನಡೆದ ಪಂದ್ಯವು ಗೋಲುಗಳಿಲ್ಲದ ಡ್ರಾ ಆಯಿತು.
ಜಿಎಂಸಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರಂಭದಿಂದಲೇ ಎರಡೂ ತಂಡಗಳು ಗೋಲು ಗಳಿಸಲು ಬಹಳಷ್ಟು ಪ್ರಯತ್ನಪಟ್ಟವು. ಆದರೆ ಯಶಸ್ವಿಯಾಗಲಿಲ್ಲ.
ಪಾಯಿಂಟ್ಸ್ ಪಟ್ಟಿಯಲ್ಲಿ ಎಟಿಕೆ ಮೋಹನ್ ಬಾಗನ್ ತಂಡವು 17 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಚೆನ್ನೈಯಿನ್ 10 ಅಂಕ ಗಳಿಸಿ ಏಳನೇ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.