ಶ್ರೀನಗರ: ದ್ವಿತೀಯಾರ್ಧದಲ್ಲಿ ದೀಪಾಂಡ ಡಿಕಾ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಮೋಹನ್ ಬಾಗನ್ ತಂಡ ಐ ಲೀಗ್ 12ನೇ ಆವೃತ್ತಿಯ ಪಂದ್ಯದಲ್ಲಿ ಗೆಲುವಿನ ಸಿಹಿ ಸವಿದಿದೆ.
ಮಂಗಳವಾರ ನಡೆದ ಹಣಾಹಣಿಯಲ್ಲಿ ಬಾಗನ್ 1–0 ಗೋಲಿನಿಂದ ಆತಿಥೇಯ ರಿಯಲ್ ಕಾಶ್ಮೀರ್ ಎಫ್‌ಸಿ ಎದುರು ಗೆದ್ದಿತು. ಇದರೊಂದಿಗೆ ಒಟ್ಟು ಪಾಯಿಂಟ್ಸ್ ಅನ್ನು ಎಂಟಕ್ಕೆ ಹೆಚ್ಚಿಸಿಕೊಂಡು ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
ಉಭಯ ತಂಡಗಳು ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿದವು. 43ನೇ ನಿಮಿಷದಲ್ಲಿ ಬಾಗನ್‌ಗೆ ಖಾತೆ ತೆರೆಯುವ ಅವಕಾಶ ಸಿಕ್ಕಿತ್ತು. ಹೆನ್ರಿ ಕಿಸೆಕಾ ಇದನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ.
ದ್ವಿತೀಯಾರ್ಧದಲ್ಲಿ ಬಾಗನ್ ತಂಡ ಇನ್ನಷ್ಟು ಪರಿಣಾಮಕಾರಿಯಾಗಿ ಆಡಿತು. 53 ಮತ್ತು 60ನೇ ನಿಮಿಷಗಳಲ್ಲಿ ಸಿಕ್ಕ ಅವಕಾಶಗಳನ್ನು ಈ ತಂಡದ ಆಟಗಾರರು ಕೈಚೆಲ್ಲಿದರು. ಆದರೆ 70ನೇ ನಿಮಿಷದಲ್ಲಿ ಡಿಕಾ ಕಾಲ್ಚಳಕ ತೋರಿದರು. ಚೆಂಡನ್ನು ಚುರುಕಾಗಿ ಗುರಿ ತಲುಪಿಸಿದ ಅವರು ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.