ನವದೆಹಲಿ: ಐ ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯಗಳನ್ನು ಫಿಕ್ಸಿಂಗ್ ಮಾಡಲು ಕೆಲವು ಆಟಗಾರರನ್ನು ಬುಕ್ಕಿಗಳು ಸಂಪರ್ಕಿಸಿದ್ದರು. ಈ ಪ್ರಕರಣವನ್ನು ತನಿಖೆಗೊಳಪಡಿಸಲಾಗುವುದು ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ತಿಳಿಸಿದೆ.
‘ನಮ್ಮ ಆಟಗಾರರನ್ನು ಕೆಲವರು ಹಲವು ಬಾರಿ ಸಂಪರ್ಕಿಸಿರುವ ಬಗ್ಗೆ ಮಾಹಿತಿ ಲಭಿಸಿದೆ. ಅದನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು. ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಎಐಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ತಿಳಿಸಿದ್ದಾರೆ.
ಆದರೆ ಅವರು ತಮಗೆ ಯಾವ ಮೂಲದಿಂದ ಮಾಹಿತಿ ಲಭಿಸಿದೆ ಎಂಬುದನ್ನು ಸ್ಪಷ್ಟಪಡಿಸಲಿಲ್ಲ.
‘ನಮ್ಮ ಆಟಗಾರರು ಮತ್ತು ಈ ಸುಂದರ ಆಟದ ಸುರಕ್ಷತೆಯನ್ನು ಕಾಪಾಡಾಲು ಬದ್ಧವಾಗಿದ್ದೇವೆ. ಇಂತಹ ಪ್ರಕರಣಗಳನ್ನು ನಾವು ಸಹಿಸುವುದಿಲ್ಲ. ಇಂತಹ ಕೆಟ್ಟ ಚಟುವಟಿಕೆಗಳಿಂದ ಆಟ ಮತ್ತು ಆಟಗಾರರ ಭವಿಷ್ಯಕ್ಕೆ ಧಕ್ಕೆಯಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.
2023ರ ಐ ಲೀಗ್ ಟೂರ್ನಿಯಲ್ಲಿ ಅಕ್ಟೋಬರ್‌ನಲ್ಲಿ ಆರಂಭವಾಗಿತ್ತು. 40 ಪಂದ್ಯಗಳು ಈಗಾಗಲೇ ನಡೆದಿವೆ. 13 ತಂಡಗಳು ಕಣದಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.