ರೊಸ್ಟೊವ್ : ಕುತೂಹಲಕಾರಿ ’ಡಿ’ ಗುಂಪಿನ ಹಣಾಹಣಿಯಲ್ಲಿ ಐಸ್‌ಲ್ಯಾಂಡ್ ಮತ್ತು ಕ್ರೊವೇಷ್ಯಾ ತಂಡಗಳು ಮಂಗಳವಾರ ಸೆಣಸಲಿವೆ. ಮುಂದಿನ ಹಂತಕ್ಕೆ ಲಗ್ಗೆ ಇರಿಸಬೇಕಾದರೆ ಐಸ್‌ಲ್ಯಾಂಡ್‌ಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.
ಈಗಾಗಲೇ ಪ್ರೀ ಕ್ವಾರ್ಟರ್ ಘಟ್ಟಕ್ಕೆ ತಲುಪಿರುವ ಕ್ರೊವೇಷ್ಯಾ ಇದನ್ನು ಕೇವಲ ‘ಅಭ್ಯಾಸ’ ಪಂದ್ಯದಂತೆ ಕಾಣಲಿದೆ. ಈ ತಂಡ ಮೊದಲ ಪಂದ್ಯದಲ್ಲಿ ನೈಜೀರಿಯಾವನ್ನು 2–0ಯಿಂದ ಮತ್ತು ನಂತರ ಬಲಿಷ್ಠ ಅರ್ಜೆಂಟೀನಾವನ್ನು 3–0ಯಿಂದ ಮಣಿಸಿತ್ತು.
ಎರಡು ಪಂದ್ಯಗಳಲ್ಲಿ ಒಂದು ಡ್ರಾ ಮತ್ತು ಒಂದು ಸೋಲಿನೊಂದಿಗೆ ಐಸ್‌ಲ್ಯಾಂಡ್ ಕೇವಲ ಒಂದು ಪಾಯಿಂಟ್ ಗಳಿಸಿದೆ. ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿ ಆಡುತ್ತಿರುವ ತಂಡ ಮೊದಲ ಜಯದ ಕನಸು ಹೊತ್ತು ಅಂಗಣಕ್ಕೆ ಇಳಿಯಲಿದೆ. ಈ ಪಂದ್ಯದಲ್ಲಿ ಗೆದ್ದರೂ ಈ ತಂಡ ಪ್ರೀ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಬೇಕಾದರೆ ನೈಜೀರಿಯಾ ಮತ್ತು ಅರ್ಜೆಂಟೀನಾ ನಡುವಿನ ಪಂದ್ಯದಲ್ಲಿ ನೈಜೀರಿಯಾ ಸೋಲಬೇಕು. ಆ ಪಂದ್ಯದಲ್ಲಿ ಅರ್ಜೆಂಟೀನಾ ಗೆದ್ದರೆ ಅಥವಾ ಡ್ರಾ ಸಾಧಿಸಿದರೆ ಗೋಲು ಗಳಿಕೆಯ ವ್ಯತ್ಯಾಸದ ಆಧಾರದ ಮೇಲೆ ಐಸ್‌ಲ್ಯಾಂಡ್‌ನ ಭವಿಷ್ಯ ನಿರ್ಧಾರವಾಗಲಿದೆ.
ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕ್ರೊವೇಷ್ಯಾವನ್ನು 1–0 ಅಂತರದಿಂದ ಮಣಿಸಿದ ಸಿಹಿ ನೆನಪು ಐಸ್‌ಲ್ಯಾಂಡ್ ಪಾಳಯದಲ್ಲಿ ಭರವಸೆಯನ್ನು ಮೂಡಿಸಿದೆ. ತಂಡದ ಇಬ್ಬರು ಪ್ರಮುಖ ಆಟಗಾರರಾದ ಎಮಿಲ್ ಆಲ್ಫ್ರೆಡ್ಸನ್ ಮತ್ತು ಜೊಹಾನ್ ಗುಡ್‌ಮಂಡ್ಸನ್ ಅವರು ತಂಡಕ್ಕೆ ಮರಳಿರುವುದು ಕೂಡ ನಿರೀಕ್ಷೆಗಳು ಗರಿಗೆದರುವಂತೆ ಮಾಡಿದೆ.
ಒತ್ತಡವಿಲ್ಲದೆ ಆಡಲು ಇಳಿಯಲಿರುವ ಕ್ರೊವೇಷ್ಯಾ ಕೆಲವು ಆಟಗಾರರಿಗೆ ವಿಶ್ರಾಂತಿ ನೀಡಿ ಎರಡು ಪಂದ್ಯಗಳಲ್ಲಿ ಅವಕಾಶ ಸಿಗದವರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.