ದೋಹಾ: ಮೂವತ್ತು ನಿಮಿಷಗಳ ಅಂತರದಲ್ಲಿ ನಾಲ್ಕು ಗೋಲುಗಳನ್ನು ಗಳಿಸಿದ ಬ್ರೆಜಿಲ್ ತಂಡದ ಆಕ್ರಮಣಕಾರಿ ಆಟದ ಮುಂದೆ ದಕ್ಷಿಣ ಕೊರಿಯಾ ತಂಡ ನಲುಗಿತು.
‘ಸ್ಟೇಡಿಯಂ 974’ ಕ್ರೀಡಾಂಗಣದಲ್ಲಿ ಸೋಮವಾರ ತಡರಾತ್ರಿ ನಡೆದ 16ರ ಘಟ್ಟದ ಪಂದ್ಯದಲ್ಲಿ ಕಾಲ್ಚಳಕದ ಮೋಡಿ ಮಾಡಿದ ಬ್ರೆಜಿಲ್ 4–1 ಗೋಲುಗಳ ಗೆಲುವು ಪಡೆದು ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ಚೆಂಡಿನ ಮೇಲೆ ಅದ್ಭುತ ನಿಯಂತ್ರಣ, ನಿಖರ ಪಾಸ್‌ಗಳು ಮತ್ತು ವೇಗದ ಆಟದಿಂದ ಬ್ರೆಜಿಲ್ ತಂಡ ಅಭಿಮಾನಿಗಳನ್ನು ರಂಜಿಸಿತು. ಗಾಯದಿಂದ ಚೇತರಿಸಿಕೊಂಡು ಬಂದ ನೇಮರ್ ಅವರು ಪೆನಾಲ್ಟಿ ಅವಕಾಶದಲ್ಲಿ ಗೋಲು ಗಳಿಸಿದರೆ, ಇತರ ಗೋಲುಗಳನ್ನು ವಿನೀಸಿಯಸ್ ಜೂನಿಯರ್, ಲುಕಾಸ್ ಪಕೇಟಾ ಮತ್ತು ರಿಚಾರ್ಲಿಸನ್ ತಂದಿತ್ತರು.
ಬ್ರೆಜಿಲ್ ತಂಡ ಈ ಟೂರ್ನಿಯಲ್ಲಿ ಇದುವರೆಗೆ ಆಡಿದ ಪಂದ್ಯಗಳಲ್ಲಿ ಪ್ರಥಮಾರ್ಧದಲ್ಲಿ ಗೋಲು ಗಳಿಸಿಯೇ ಇರಲಿಲ್ಲ. ಆ ಕೊರತೆಯನ್ನು ಸೋಮವಾರ ರಾತ್ರಿ ನೀಗಿಸಿತು. ನಾಲ್ಕೂ ಗೋಲುಗಳನ್ನು ಮೊದಲ ಅವಧಿಯಲ್ಲೇ ಗಳಿಸಿತು.
ಮೊದಲ ಗೋಲು ಏಳನೇ ನಿಮಿಷದಲ್ಲಿ ಬಂತು. ರಫೀನಿಯಾ ನೀಡಿದ ಕ್ರಾಸ್‌ನಲ್ಲಿ ವಿನೀಸಿಯಸ್ ಅವರು ಎದುರಾಳಿ ಡಿಫೆಂಡರ್‌ಗಳು ಮತ್ತು ಗೋಲ್‌ಕೀಪರ್ ಅವರನ್ನು ತಪ್ಪಿಸಿ ಚೆಂಡನ್ನು ಗುರಿ ಸೇರಿಸಿದರು.
ಇದಾದ ಐದು ನಿಮಿಷಗಳ ಬಳಿಕ ರಿಚಾರ್ಲಿಸನ್ ಅವರನ್ನು ಕೊರಿಯಾ ಡಿಫೆಂಡರ್ ಪೆನಾಲ್ಟಿ ಆವರಣದಲ್ಲಿ ಬೀಳಿಸಿದರು. ರೆಫರಿ ಬ್ರೆಜಿಲ್‌ಗೆ ಪೆನಾಲ್ಟಿ ಕಿಕ್ ಅವಕಾಶ ನೀಡಿದರು. ನೇಮರ್ ಅವರು ಈ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸುವಲ್ಲಿ ಯಾವುದೇ ತಪ್ಪು ಮಾಡಲಿಲ್ಲ. ಇದು ಬ್ರೆಜಿಲ್ ಪರ ಅವರು ಗಳಿಸಿದ 76ನೇ ಗೋಲು ಆಗಿತ್ತು. ದಿಗ್ಗಜ ಆಟಗಾರ ಪೆಲೆ (77 ಗೋಲು) ಹೆಸರಲ್ಲಿರುವ ದಾಖಲೆ ಸರಿಗಟ್ಟಲು ಅವರಿಗೆ ಇನ್ನೊಂದು ಗೋಲಿನ ಅಗತ್ಯವಿದೆ.
29ನೇ ನಿಮಿಷದಲ್ಲಿ ರಿಚಾರ್ಲಿಸನ್ ಸೊಗಸಾದ ಗೋಲು ಗಳಿಸಿದರು. ಲುಕಾಸ್ ಪಕೇಟಾ 36ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ 4–0 ಮುನ್ನಡೆ ತಂದಿತ್ತರು. ಎರಡನೇ ಅವಧಿಯಲ್ಲಿ ಬ್ರೆಜಿಲ್ ಆಕ್ರಮಣಕಾರಿ ಆಟ ಮುಂದುವರಿಸಿದರೂ ಗೋಲುಗಳು ಬರಲಿಲ್ಲ.ದಕ್ಷಿಣ ಕೊರಿಯಾ ತಂಡದ ಏಕೈಕ ಗೋಲನ್ನು ಪಾಯಿಕ್ ಸುಂಗ್ ಹೊ ಅವರು 76ನೇ ನಿಮಿಷದಲ್ಲಿ ಗಳಿಸಿದರು.
‘ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದ್ದೇವೆ’ ಎಂದು ನೇಮರ್ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು. ‘ಇದು ನಮ್ಮ ನಾಲ್ಕನೇ ಪಂದ್ಯ ಆಗಿತ್ತು. ಇನ್ನು ಮೂರು ಪಂದ್ಯಗಳು ಇವೆ. ಚಾಂಪಿಯನ್ ಆಗುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.