ನವದೆಹಲಿ: ಸ್ಯಾಫ್ ಫುಟ್‌ಬಾಲ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜೂನ್ 21 ರಂದು ಪರಸ್ಪರ ಹಣಾಹಣಿ ನಡೆಸಲಿವೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಜೂನ್ 21 ರಿಂದ ಜುಲೈ 4ರ ವರೆಗೆ ಆಯೋಜನೆಯಾಗಿರುವ ಟೂರ್ನಿಯ ವೇಳಾಪಟ್ಟಿಯನ್ನು ಬುಧವಾರ ಪ್ರಕಟಿಸಲಾಯಿತು.
ಭಾರತ, ಪಾಕಿಸ್ತಾನ, ಕುವೈತ್ ಮತ್ತು ನೇಪಾಳ ತಂಡಗಳು ‘ಎ’ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿವೆ. ಲೆಬನಾನ್, ಮಾಲ್ಡೀವ್ಸ್, ಬಾಂಗ್ಲಾದೇಶ ಮತ್ತು ಭೂತಾನ್ ತಂಡಗಳು ‘ಬಿ’ ಗುಂಪಿನಲ್ಲಿವೆ. ಈ ಬಾರಿ ನಡೆಯಲಿರುವ 14ನೇ ಆವೃತ್ತಿಯ ಟೂರ್ನಿಗೆ ಇನ್ನಷ್ಟು ಸ್ಪರ್ಧಾತ್ಮಕತೆ ತರುವ ನಿಟ್ಟಿನಲ್ಲಿ ‘ಸ್ಯಾಫ್’ ಹೊರಗಿನ ದೇಶಗಳಾದ ಲೆಬನಾನ್ ಮತ್ತು ಕುವೈತ್ ತಂಡಗಳನ್ನು ಆಹ್ವಾನಿಸಲಾಗಿದೆ.
ಜೂನ್ 21 ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಕುವೈತ್–ನೇಪಾಳ ಎದುರಾಗಲಿದ್ದು, ಅದೇ ದಿನ ನಡೆಯುವ ಎರಡನೇ ಪಂದ್ಯದಲ್ಲಿ ಭಾರತ– ಪಾಕಿಸ್ತಾನ ಹಣಾಹಣಿ ನಡೆಯಲಿದೆ.
ಭಾರತ ಮತ್ತು ಪಾಕಿಸ್ತಾನದ ಫುಟ್‌ಬಾಲ್ ತಂಡಗಳು ಐದು ವರ್ಷಗಳ ಬಳಿಕ ಎದುರಾಗಲಿವೆ. 2018ರ ಸ್ಯಾಫ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಇವೆರಡು ತಂಡಗಳು ಕೊನೆಯದಾಗಿ ಪೈಪೋಟಿ ನಡೆಸಿದ್ದವು. ಢಾಕಾದಲ್ಲಿ ನಡೆದಿದ್ದ ಪಂದ್ಯವನ್ನು ಭಾರತ 3–1 ರಲ್ಲಿ ಜಯಿಸಿತ್ತು. ಆದರೆ ಫೈನಲ್‌ನಲ್ಲಿ 1–2 ರಲ್ಲಿ ಮಾಲ್ಡೀವ್ಸ್ ಎದುರು ಸೋತಿತ್ತು.
ಒಟ್ಟಾರೆಯಾಗಿ ಭಾರತ– ಪಾಕಿಸ್ತಾನ ತಂಡಗಳು 20ಕ್ಕೂ ಅಧಿಕ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿವೆ. ಅದರಲ್ಲಿ 12ಕ್ಕೂ ಅಧಿಕ ಪಂದ್ಯಗಳಲ್ಲಿ ಭಾರತ ಗೆದ್ದಿದೆ. ಭಾರತ ತಂಡವು ಫಿಫಾ ರ್‍ಯಾಂಕಿಂಗ್‌ನಲ್ಲಿ 101ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನವು 195ನೇ ಸ್ಥಾನದಲ್ಲಿದೆ.
ಭಾರತವು ಎಂಟು ಸಲ ಸ್ಯಾಫ್ ಕಪ್ ಗೆದ್ದುಕೊಂಡಿದ್ದು, ನಾಲ್ಕು ಸಲ ರನ್ನರ್ಸ್ ಅಪ್ ಆಗಿದೆ. 2003 ರಲ್ಲಿ ಢಾಕಾದಲ್ಲಿ ನಡೆದಿದ್ದ ಐದನೇ ಆವೃತ್ತಿಯ ಟೂರ್ನಿ ಹೊರತುಪಡಿಸಿ, ಇತರ ಎಲ್ಲ 12 ಟೂರ್ನಿಗಳಲ್ಲಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ. 2003ರ ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿತ್ತು.
ಸ್ಯಾಫ್ ವೇಳಾಪಟ್ಟಿ
ಜೂನ್ 21: ಕುವೈತ್– ನೇಪಾಳ (ಆರಂಭ: ಮಧ್ಯಾಹ್ನ 3.30); ಭಾರತ– ಪಾಕಿಸ್ತಾನ (ಆರಂಭ: ರಾತ್ರಿ 7.30)
ಜೂನ್ 22: ಲೆಬನಾನ್– ಬಾಂಗ್ಲಾದೇಶ (3.30); ಮಾಲ್ಡೀವ್ಸ್– ಭೂತಾನ್ (7.30)
ಜೂನ್ 24: ಪಾಕಿಸ್ತಾನ– ಕುವೈತ್ (3.30); ನೇಪಾಳ–ಭಾರತ (7.30)
ಜೂನ್ 25: ಬಾಂಗ್ಲಾದೇಶ– ಮಾಲ್ಡೀವ್ಸ್ (3.30); ಭೂತಾನ್– ಲೆಬನಾನ್ (7.20)
ಜೂನ್ 27: ನೇಪಾಳ– ಪಾಕಿಸ್ತಾನ (3.30); ಭಾರತ– ಕುವೈತ್ (7.30)
ಜೂನ್ 28: ಲೆಬನಾನ್– ಮಾಲ್ಡೀವ್ಸ್ (3.30); ಭೂತಾನ್– ಬಾಂಗ್ಲಾದೇಶ (7.30)
ಜುಲೈ 1: ಸೆಮಿಫೈನಲ್ ಪಂದ್ಯಗಳು
ಜುಲೈ 4: ಫೈನಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.