ADVERTISEMENT

ಮಹಿಳಾ ಫುಟ್‌ಬಾಲ್‌: ಬ್ರೆಜಿಲ್‌ಗೆ ಮಣಿದ ಭಾರತ

ಪಿಟಿಐ
Published 26 ನವೆಂಬರ್ 2021, 13:39 IST
Last Updated 26 ನವೆಂಬರ್ 2021, 13:39 IST
ಮನೀಷಾ ಕಲ್ಯಾಣ್‌ (ಮಧ್ಯೆ)– ಟ್ವಿಟರ್‌ ಚಿತ್ರ
ಮನೀಷಾ ಕಲ್ಯಾಣ್‌ (ಮಧ್ಯೆ)– ಟ್ವಿಟರ್‌ ಚಿತ್ರ   

ಮನೌಸ್‌, ಬ್ರೆಜಿಲ್‌: ಉತ್ತಮ ಆರಂಭವನ್ನು ಪಡೆದರೂ ಅದನ್ನು ಮುಂದುವರಿಸಲಾಗದ ಭಾರತ ಮಹಿಳಾ ಫುಟ್‌ಬಾಲ್ ತಂಡವು ಬಲಿಷ್ಠ ಬ್ರೆಜಿಲ್ ಎದುರಿನ ಪಂದ್ಯದಲ್ಲಿ ಸೋಲು ಅನುಭವಿಸಿದೆ.

ಇಲ್ಲಿ ನಡೆಯುತ್ತಿರುವ ನಾಲ್ಕು ರಾಷ್ಟ್ರಗಳ ಫುಟ್‌ಬಾಲ್ ಟೂರ್ನಿಯಲ್ಲಿ ಏಳನೇ ರ‍್ಯಾಂಕಿನ ಬ್ರೆಜಿಲ್‌ ತಂಡವು 6–1ರಿಂದ ಭಾರತವನ್ನು ಪರಾಭವಗೊಳಿಸಿತು.

57ನೇ ಕ್ರಮಾಂಕದ ಭಾರತದ ಪರ ಮನೀಷಾ ಕಲ್ಯಾಣ್‌ (8ನೇ ನಿಮಿಷ) ಗೋಲು ದಾಖಲಿಸಿದರೆ, ಆತಿಥೇಯ ತಂಡದ ಒಲಿವೆರಾ ಡೆಬಿನಾ (1ನೇ ನಿಮಿಷ), ಕೋಸ್ಟಾ ಜಿಯೊವಾನಾ (36ನೇ ನಿ.), ಬೋರ್ಗೆಸ್‌ ಅರಿಯಾದಿನಾ (52 ಮತ್ತು 81ನೇ ನಿಮಿಷ), ಫೆರಾಜ್‌ ಕರೋಲಿನಾ (55ನೇ ನಿಮಿಷ), ಫೆರಿರಾ ಗೆಯ್ಸಾ (76ನೇ ನಿಮಿಷ) ಕಾಲ್ಚಳಕ ತೋರಿದರು.

ADVERTISEMENT

ಮನೀಷಾ ಕಲ್ಯಾಣ್ ಗೋಲು ದಾಖಲಿಸುವ ಮೂಲಕ ವಿಶ್ವಕ್ರಮಾಂಕದಲ್ಲಿ ಅಗ್ರ 10ರೊಳಗಿನ ತಂಡದ ಎದುರು ಯಶಸ್ಸು ಸಾಧಿಸಿದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡರು.

ಭಾರತವು ಮುಂದಿನ ಪಂದ್ಯಗಳಲ್ಲಿ ನವೆಂಬರ್ 29ರಂದು ಚಿಲಿ ಎದುರು, ಡಿಸೆಂಬರ್ 2ರಂದು ವೆನೆಜುವೆಲಾ ಎದುರು ಕಣಕ್ಕಿಳಿಯಲಿದೆ.

ಫಾರ್ಮಿಗಾ ನಿವೃತ್ತಿ: ಈ ಪಂದ್ಯದೊಂದಿಗೆ ಬ್ರೆಜಿಲ್ ತಂಡದ ಪ್ರಮುಖ ಆಟಗಾರ್ತಿ, ಮಿಡ್‌ಫೀಲ್ಡರ್‌ದ ಫಾರ್ಮಿಗಾ ನಿವೃತ್ತಿ ಪ್ರಕಟಿಸಿದರು. 43 ವರ್ಷದ ಫಾರ್ಮಿಗಾ ತಂಡದ ಪರ 26 ವರ್ಷಗಳ ಅವಧಿಯಲ್ಲಿ 233 ಪಂದ್ಯಗಳನ್ನು ಆಡಿದ್ದಾರೆ.

ಬ್ರೆಜಿಲ್ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿರುವ ಶ್ರೇಯ ಹೊಂದಿರುವ ಫಾರ್ಮಿಗಾ, ಏಳು ವಿಶ್ವಕಪ್‌ ಮತ್ತು ಅಷ್ಟೇ ಸಂಖ್ಯೆಯ ಒಲಿಂಪಿಕ್ಸ್‌ಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.