ADVERTISEMENT

ಫೀಫಾ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯ: 150ನೇ ಪಂದ್ಯ ಆಡಲಿರುವ ಚೆಟ್ರಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 14:23 IST
Last Updated 25 ಮಾರ್ಚ್ 2024, 14:23 IST
<div class="paragraphs"><p>ಸುನಿಲ್ ಚೆಟ್ರಿ</p></div>

ಸುನಿಲ್ ಚೆಟ್ರಿ

   

ಗುವಾಹಟಿ: ಭಾರತದ ಫುಟ್‌ಬಾಲ್‌ ತಾರೆ ಸುನೀಲ್ ಚೆಟ್ರಿ ಅವರು ಮಂಗಳವಾರ ಇಲ್ಲಿ 150ನೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ. ಭಾರತ ತಂಡವು ಫೀಫಾ ವಿಶ್ವಕಪ್‌ ‘ಎ’ ಗುಂಪಿನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡವನ್ನು ಎದುರಿಸಲಿದ್ದು ನಾಯಕ ಚೆಟ್ರಿ ಅವರೇ ಆಕರ್ಷಣೆಯ ಕೇಂದ್ರವಾಗಿದ್ದಾರೆ.

ಆದರೆ ಮುಂದಿನ ಸುತ್ತಿಗೆ ಮುನ್ನಡೆಯಲು ಭಾರತ ಈ ಪಂದ್ಯದಲ್ಲಿ ಗೋಲಿನ ಎದುರು ಪರದಾಟದಿಂದ ಹೊರಬರಬೇಕಾಗಿದೆ. ಸೌದಿ ಅರೇಬಿಯಾದ ಅಭಾದಲ್ಲಿ ಮಾರ್ಚ್‌ 22ರಂದು ನಡೆದ ಪಂದ್ಯದಲ್ಲಿ ತನಗಿಂತ ಕೆಳಕ್ರಮಾಂಕದ ಅಫ್ಗಾನಿಸ್ತಾನ ವಿರುದ್ಧ ಭಾರತ ಗೋಲುರಹಿತ ‘ಡ್ರಾ’ ಸಾಧಿಸಲಷ್ಟೇ ಶಕ್ತವಾಗಿತ್ತು.

ADVERTISEMENT

ಭಾರತ ನವೆಂಬರ್‌ನಲ್ಲಿ ಕುವೈತ್ ಎದುರಿನ ಪಂದ್ಯದಲ್ಲಿ ಕೊನೆಯ ಬಾರಿ ಗೋಲು ಗಳಿಸಿತ್ತು. ನಂತರ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಗೋಲು ಗಳಿಸಲು ಆಗಿಲ್ಲ.

ಹೀಗಾಗಿ ಇಂದಿರಾ ಗಾಂಧಿ ಅಥ್ಲೆಟಿಕ್ ಸ್ಟೇಡಿಯಂನಲ್ಲಿ, ತಮ್ಮ ಮೈಲಿಗಲ್ಲಿನ ಪಂದ್ಯ ಆಡಲಿರುವ ಚೆಟ್ರಿ ಅವರು ಆ ಸಂದರ್ಭವನ್ನು ಸ್ಮರಣೀಯಗೊಳಿಸಿ ಭಾರತ ತಂಡದ ಗೆಲುವಿಗೆ ನೆರವಾಗಬಲ್ಲರೇ ಎಂಬ ಕುತೂಹಲವಿದೆ. 2005ರಲ್ಲಿ ಮೊದಲ ಅಂತರರಾಷ್ಟ್ರೀಯ ಪಂದ್ಯ ಆಡಿದ್ದ ಚೆಟ್ರಿ 149 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 93 ಗೋಲುಗಳನ್ನು ಹೊಡೆದಿದ್ದಾರೆ.

ಆದರೆ ಭಾರತದ ಇತರ ಫಾರ್ವರ್ಡ್‌ ಆಟಗಾರರೂ ಈ ನಿರ್ಣಾಯಕ ಪಂದ್ಯದಲ್ಲಿ ಹೊಣೆಯಿಂದ ಆಡಬೇಕಾಗಿದೆ.

ಭಾರತ ತಂಡ ಈಗ ಮೂರು ಪಂದ್ಯಗಳಿಂದ ನಾಲ್ಕು ಪಾಯಿಂಟ್ಸ್ ಗಳಿಸಿ ‘ಎ’ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಕತಾರ್ ಮೊದಲ ಸ್ಥಾನದಲ್ಲಿದೆ. ಕುವೈತ್‌ ಮೂರನೇ ಸ್ಥಾನದಲ್ಲಿದೆ.

ಭಾರತ ಮುಂದಿನ ಸುತ್ತಿಗೆ ಏರಬೇಕಾದಲ್ಲಿ ಮುಂದಿನ ಮೂರು ಪಂದ್ಯಗಳಿಂದ ಕನಿಷ್ಠ ನಾಲ್ಕು ಪಾಯಿಂಟ್ಸ್ ಗಳಿಸಬೇಕಾಗಿದೆ. ಅಫ್ಗಾನಿಸ್ತಾನ (ಮಂಗಳವಾರ), ಕುವೈತ್‌ (ಜೂನ್‌ 6), ಕತಾರ್ (ಜೂನ್‌ 11) ವಿರುದ್ಧ ಪಂದ್ಯಗಳು ಬಾಕಿವುಳಿದಿವೆ.

ಚೆಟ್ರಿ ತಮ್ಮ ಈ ಮಹತ್ವದ ಪಂದ್ಯವನ್ನು ನೆನಪಿನಲ್ಲಿ ಉಳಿಯುವಂತೆ ಆಡುತ್ತಾರೆ ಎಂಬ ವಿಶ್ವಾಸ ಕೋಚ್‌ ಸ್ಟಿಮಾಚ್‌ ಅವರದ್ದು ಕೂಡ. ತಂಡ ಕೆಲವು ವಿಭಾಗಗಳಲ್ಲಿ ಸುಧಾರಣೆ ಕಾಣಬೇಕಾಗಿದೆ ಎಂದು ಸ್ಟಿಮಾಚ್‌ ಒಪ್ಪಿಕೊಂಡರು. ‘ನಾವು ಪಾಸಿಂಗ್‌ ಉತ್ತಮಪಡಿಸಬೇಕಾಗಿದೆ. ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕಾಗಿದೆ. ಗೋಲಿನ ಎದುರು ಇನ್ನಷ್ಟು ಆಕ್ರಮಣಕಾರಿಯಾಗಬೇಕಿದೆ’ ಎಂದರು.

ಗುವಾಹಟಿಯಲ್ಲಿ ಭಾರತ ಕೊನೆಯ ಬಾರಿ ಆಡಿದ್ದು ಐದು ವರ್ಷಗಳ ಹಿಂದೆ. 2023ರ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ಆಗ ಆತಿಥೇಯರು 1–2 ಗೋಲುಗಳಿಂದ ಒಮಾನ್ ಎದುರು ಸೋತಿದ್ದರು.

ಪಂದ್ಯ ಆರಂಭ: ರಾತ್ರಿ 7 ಗಂಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.