ಅಲ್ ಖೊಬರ್, ಸೌದಿ ಅರೇಬಿಯಾ: ಭಾರತ ತಂಡ 0–4 ಗೋಲುಗಳಿಂದ ಆತಿಥೇಯ ಸೌದಿ ಅರೇಬಿಯಾಕ್ಕೆ ಶರಣಾಗುವ ಮೂಲಕ ಎಎಫ್‌ಸಿ ಕಪ್ (19 ವರ್ಷದೊಳಗಿನವರ) ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನಿಂದ ಹೊರಬಿತ್ತು. ಅಲ್ಬಾಸಸ್ ಹ್ಯಾಟ್ರಿಕ್ ಸೌದಿ ಗೆಲುವಿನಲ್ಲಿ ಎದ್ದುಕಂಡಿತು.
ಪ್ರಿನ್ಸ್ ಸೌದ್ ಬಿನ್ ಜಲಾವಿ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಈ ಪಂದ್ಯದಎರಡನೇ ನಿಮಿಷವೇ ಫಾರ್ವರ್ಡ್ ಮೊಹಮ್ಮದ್ ಖಲೀಲ್ ಮರ್ರಾನ್, ಸೌದಿ ಅರೇಬಿಯಾ ತಂಡದ ಗೋಲು ಖಾತೆ ತೆರೆದರು. ಹತ್ತನೇ ನಿಮಿಷ ಹಜ್ಜಾ ಅಲ್ಗಮದಿ ಎಡಗಡೆಯಿಂದ ನಡೆಸಿದ ದಾಳಿಯಲ್ಲಿ ಚೆಂಡನ್ನು ಪಡೆದ ಮಿಡ್‌ಫೀಲ್ಡರ್ ಅಹ್ಮದ್ ಅಲ್ಬಾಸಸ್ ಚೆಂಡನ್ನು ಗುರಿ ತಲುಪಿಸಿ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು.
18ನೇ ನಿಮಿಷ ಮತ್ತು 28ನೇ ನಿಮಿಷ ಅಲ್ಬಾಸಸ್ ಮತ್ತೆ ಎರಡು ಗೋಲುಗಳನ್ನು ಹೊಡೆಯುವ ಮೂಲಕ ಅವರು ಹ್ಯಾಟ್ರಿಕ್ ಸಹ ಪೂರೈಸಿದರು.
ಭಾರತದ ಪರ ನಿಂತೊಯಿನ್‌ಗನ್ಬಾ ಮೀತಿ ಉತ್ತಮ ಪ್ರದರ್ಶನ ನೀಡಿ ಕೆಲವು ಫ್ರೀಕಿಕ್ ಅವಕಾಶಗಳನ್ನೂ ಪಡೆದರು. ವಿರಾಮಕ್ಕೆ ಎರಡು ನಿಮಿಷಗಳಿರುವಾಗ ಅವರು ಗೋಲಿನತ್ತ ಬಲವಾಗಿ ಒದ್ದ ಚೆಂಡು ಸ್ವಲ್ಪದರಲ್ಲೇ ಗುರಿತಪ್ಪಿ ಬದಿಯಿಂದ ಹಾದುಹೋಯಿತು.
ಭಾರತ, ಭಾನುವಾರ ಇದೇ ಕ್ರೀಡಾಂಗಣದಲ್ಲಿ ನಡೆಯುವ ಪಂಧ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.