ಕೋಲ್ಕತ್ತ: ಭಾರತ ಫುಟ್‌ಬಾಲ್ ತಂಡವು ಸತತ ಎರಡನೇ ಬಾರಿ ಏಷ್ಯಾಕಪ್ ಟೂರ್ನಿಗೆ ಅರ್ಹತೆ ಗಳಿಸಿದೆ.
ಉಲಾನ್‌ಬಾತರ್‌ನಲ್ಲಿ ನಡೆದ ‘ಬಿ’ ಅರ್ಹತಾ ಸುತ್ತಿನ ಪಂದ್ಯದಲ್ಲಿ ಪ್ಯಾಲೆಸ್ಟೀನ್ ತಂಡವು 4–0ಯಿಂದ ಪಿಲಿಪ್ಪೀನ್ಸ್ ವಿರುದ್ಧ ಗೆದ್ದಿತು. ಇದರೊಂದಿಗೆ ಪ್ಯಾಲೆಸ್ಟೀನ್, ಗುಂಪಿನಲ್ಲಿ ಅಗ್ರಸ್ಥಾನ ಪಡೆದು 24 ತಂಡಗಳ ಟೂರ್ನಿಗೆ ನೇರ ಅರ್ಹತೆ ಗಳಿಸಿದರೆ, ಎರಡನೇ ಸ್ಥಾನ ಗಳಿಸಿದ ನಡುವೆಯೂ ಫಿಲಿಪ್ಪೀನ್ಸ್ ಟೂರ್ನಿಯಿಂದ ಹೊರಬಿದ್ದಿತು. ಇದರಿಂದ 2023ರ ಟೂರ್ನಿಯಲ್ಲಿ ಆಡಲು ಭಾರತಕ್ಕೆ ಅವಕಾಶ ಲಭಿಸಿತು.
ಸುನಿಲ್ ಚೆಟ್ರಿ ನಾಯಕತ್ವದ ಭಾರತ ತಂಡವು ಇದೇ ಮೊದಲ ಸಲ ಸತತ ಎರಡನೇ ಬಾರಿ ಏಷ್ಯಾಕಪ್ ಟೂರ್ನಿಗೆ ಪ್ರವೇಶ ಪಡೆದಿದೆ. 2019ರ ಟೂರ್ನಿಯಲ್ಲಿ ಗುಂಪು ಹಂತದಲ್ಲೇ ನಿರ್ಗಮಿಸಿತ್ತು.
ಅರ್ಹತಾ ಟೂರ್ನಿಯ ಮೂರನೇ ಸುತ್ತಿನಲ್ಲಿ 24 ತಂಡಗಳನ್ನು ತಲಾ ನಾಲ್ಕರಂತೆ ಆರು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನ ಪಂದ್ಯಗಳು ಬೇರೆ ಬೇರೆ ತಾಣಗಳಲ್ಲಿ ನಡೆಯುತ್ತಿವೆ. ಭಾರತ ‘ಡಿ’ ಗುಂಪಿನ ಪಂದ್ಯಗಳಿಗೆ ಆತಿಥ್ಯ ವಹಿಸಿದೆ.
ಪ್ರತಿ ಗುಂಪುಗಳ ವಿಜೇತ ತಂಡ ಮತ್ತು ಅತ್ಯುತ್ತಮ ಐದು ರನ್ನರ್ಸ್ ಅಪ್ ತಂಡಗಳು ಏಷ್ಯಾಕಪ್ ಟೂರ್ನಿಗೆ ಅರ್ಹತೆ ಗಳಿಸುತ್ತವೆ.
‘ಡಿ’ ಗುಂಪಿನ ಪಾಯಿಂಟ್ಸ್ ಪಟ್ಟಿಯಲ್ಲಿ ಹಾಂಗ್‌ಕಾಂಗ್ (ಆರು ಪಾಯಿಂಟ್ಸ್) ಮೊದಲ ಸ್ಥಾನದಲ್ಲಿದೆ. ಭಾರತ ತಂಡವೂ ಎರಡು ಪಂದ್ಯ ಜಯಿಸಿ ಆರು ಪಾಯಿಂಟ್ಸ್ ಕಲೆಹಾಕಿದ್ದರೂ ಗೋಲುಗಳ ವ್ಯತ್ಯಾಸದ ಆಧಾರದ ಮೇಲೆ ಎರಡನೇ ಸ್ಥಾನದಲ್ಲಿದೆ. ಈ ಗುಂಪಿನಲ್ಲಿರುವ ಕಾಂಬೋಡಿಯಾ ಮತ್ತು ಅಫ್ಗಾನಿಸ್ತಾನ ಈಗಾಗಲೇ ಹೊರಬಿದ್ದಿವೆ.
ಭಾರತ ಕೊನೆಯ ಲೀಗ್ ಪಂದ್ಯದಲ್ಲಿ ಹಾಂಗ್‌ಕಾಂಗ್ ಎದುರು ಸೋತರೂ ಯಾವುದೇ ಪರಿಣಾಮ ಬೀರದು. ‘ಬಿ’ ಗುಂಪಿನಲ್ಲಿರುವ ಫಿಲಿಪ್ಪೀನ್ಸ್ ಬಳಿ ಕೇವಲ ನಾಲ್ಕು ಪಾಯಿಂಟ್‌ಗಳಿವೆ. ಹೀಗಾಗಿ ಆರು ಪಾಯಿಂಟ್‌ಗಳಿರುವ ಭಾರತ ಐದು ಶ್ರೇಷ್ಠ ರನ್ನರ್ಸ್ಅಪ್ ತಂಡಗಳಲ್ಲಿ ಒಂದಾಗಿ ಟೂರ್ನಿಗೆ ಅರ್ಹತೆ ಪಡೆಯಿತು.
ಗುಂಪಿನ ಮೊದಲ ಪಂದ್ಯದಲ್ಲಿ ಭಾರತ 2–0ಯಿಂದ ಕಾಂಬೋಡಿಯಾವನ್ನು ಮತ್ತು ಎರಡನೇ ಪಂದ್ಯದಲ್ಲಿ 2–1ರಿಂದ ಅಫ್ಗಾನಿಸ್ತಾನವನ್ನು ಮಣಿಸಿತ್ತು.
ಭಾರತ ತಂಡವು ಒಟ್ಟಾರೆ ಐದನೇ ಬಾರಿ (1964, 1984, 2011, 2019 ಮತ್ತು 2023) ಏಷ್ಯಾಕಪ್‌ನಲ್ಲಿ ಕಣಕ್ಕಿಳಿಯುವ ಅವಕಾಶ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.