ADVERTISEMENT

ಫಿಫಾ ರ್‍ಯಾಂಕಿಂಗ್‌: 101ನೇ ಸ್ಥಾನಕ್ಕೇರಿದ ಭಾರತ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2023, 14:07 IST
Last Updated 6 ಏಪ್ರಿಲ್ 2023, 14:07 IST
   

ನವದೆಹಲಿ: ಭಾರತ ಫುಟ್‌ಬಾಲ್‌ ತಂಡ, ಫಿಫಾ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 101ನೇ ಸ್ಥಾನ ಪಡೆದುಕೊಂಡಿದೆ. ಈ ಹಿಂದಿನ ಪಟ್ಟಿಯಲ್ಲಿ 106ನೇ ಸ್ಥಾನದಲ್ಲಿತ್ತು.

ಕಳೆದ ತಿಂಗಳು ಇಂಫಾಲ್‌ನಲ್ಲಿ ನಡೆದಿದ್ದ ಮೂರು ರಾಷ್ಟ್ರಗಳನ್ನೊಳಗೊಂಡ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಐದು ಸ್ಥಾನಗಳಷ್ಟು ಮೇಲಕ್ಕೇರಲು ಕಾರಣ.

ಆ ಟೂರ್ನಿಯಲ್ಲಿ ಭಾರತ 1–0 ಮತ್ತು 2–0 ಗೋಲುಗಳಿಂದ ಕ್ರಮವಾಗಿ ಮ್ಯಾನ್ಮಾರ್‌ ಹಾಗೂ ಕಿರ್ಗಿಸ್ತಾನ ತಂಡಗಳನ್ನು ಮಣಿಸಿತ್ತು. ಇದರಿಂದ 8.57 ರೇಟಿಂಗ್‌ ಪಾಯಿಂಟ್ಸ್‌ ಗಳಿಸಿದೆ.

ADVERTISEMENT

ಫಿಫಾ ಈ ವರ್ಷ ಬಿಡುಗಡೆಗೊಳಿಸಿದ ಮೊದಲ ಪಟ್ಟಿ ಇದು. ಈ ಹಿಂದೆ 2022ರ ಡಿಸೆಂಬರ್‌ನಲ್ಲಿ ಪಟ್ಟಿ ಪ್ರಕಟಿಸಿತ್ತು. ಭಾರತವು ಇದೀಗ ನ್ಯೂಜಿಲೆಂಡ್‌ಗಿಂತ ಒಂದು ಸ್ಥಾನ ಕೆಳಗೆ ಹಾಗೂ ಕೆನ್ಯಾಗಿಂತ ಒಂದು ಸ್ಥಾನ ಮೇಲಿದೆ.

ಏಷ್ಯಾದ 46 ತಂಡಗಳಲ್ಲಿ ಭಾರತ, 19ನೇ ಸ್ಥಾನದಲ್ಲಿದೆ. ಫಿಫಾ ರ್‍ಯಾಂಕಿಂಗ್‌ನಲ್ಲಿ ಭಾರತ ತಂಡ ಪಡೆದ ಅತ್ಯುತ್ತಮ ಸ್ಥಾನ 94 ಆಗಿದ್ದು, 1996 ರಲ್ಲಿ ಆ ಸಾಧನೆ ಮಾಡಿತ್ತು.

ಅಗ್ರಸ್ಥಾನಕ್ಕೇರಿದ ಅರ್ಜೆಂಟೀನಾ: ವಿಶ್ವಚಾಂಪಿಯನ್‌ ಅರ್ಜೆಂಟೀನಾ ತಂಡ ಆರು ವರ್ಷಗಳ ಬಿಡುವಿನ ಬಳಿಕ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಫ್ರಾನ್ಸ್‌ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿದ್ದ ಬ್ರೆಜಿಲ್‌ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದ್ದು, ಬೆಲ್ಜಿಯಂ ನಾಲ್ಕನೇ ಸ್ಥಾನ ಉಳಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.